ಅಬ್ಬರಿಸಿ ತಣ್ಣಗಾದ ವರುಣ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಚುರುಕು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.8-ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ನಾನಾ ಕಡೆ ಅಬ್ಬರಿಸಿದ್ದ ವರುಣನ ಆರ್ಭಟ ಕೊಂಚ ಇಳಿಮುಖವಾಗಿದ್ದು, ಅಲ್ಲಲ್ಲಿ ಪರಿಹಾರ ಕಾರ್ಯ ಚುರುಕುಗೊಂಡಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಎಲ್ಲಿಯೂ ಕೂಡ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ರಾತ್ರಿಯಿಂದ ಮಳೆ ಪ್ರಮಾಣ ತಗ್ಗಿದ್ದು, ಜಿಲ್ಲಾಡಳಿತ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದೆ.

ಭಾರೀ ಮಳೆಗೆ ತತ್ತರಿಸಿದ್ದ ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಬೆಳಗಾವಿ, ಗದಗ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಕಡೆ ಮಳೆ ಆರ್ಭಟ ಕಡಿಮೆಯಾಗಿರುವುದರಿಂದ ಭೀತಿಯಲ್ಲಿದ್ದ ಜನತೆ ತುಸು ನಿಟ್ಟುಸಿರುಬಿಟ್ಟಿದ್ದಾರೆ.

ಆದರೆ ಪ್ರವಾಹ ಇನ್ನು ಜೋರಾಗಿರುವುದರಿಂದ ಅಲ್ಲಲ್ಲಿ ಮನೆಗಳಿಗೆ ಮನೆ, ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

ಮಡಿಕೇರಿಯ ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ ಮತ್ತಿತರ ಕಡೆ ಮಳೆ ನಿಂತಿದ್ದರೂ ಪ್ರವಾಹ ಮಾತ್ರ ನಿಂತಿಲ್ಲ. ಬಹುತೇಕ ಕಡೆ ಹಳ್ಳಕೊಳ್ಳಗಳು, ಜಲಪಾತಗಳು, ಕೆರೆಕಟ್ಟೆಗಳು ಭೋರ್ಗರೆಯುತ್ತಿದ್ದು, ಮನೆ ಮತ್ತು ಬೆಳೆಗಳು ಕೊಚ್ಚಿಹೋಗಿವೆ.

ಅನೇಕ ಕಡೆ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು, ರಸ್ತೆಗಳಲ್ಲಿ ಮರಗಳು ಧರೆಗುರುಳಿವೆ. ಹೀಗಾಗಿ ಅನೇಕ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ.

ಇಂದು ಮಳೆ ಇಳಿಮುಖವಾಗಿದ್ದರಿಂದ ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಮತ್ತು ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ಪರಿಹಾರ ಕಾರ್ಯ ಚುರುಕುಗೊಂಡಿದೆ.

ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಜಿಲ್ಲಾಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸೇರಿದಂತೆ ಅಕಾರ ವರ್ಗ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಂತ್ರಸ್ತರ ರಕ್ಷಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ನೆರೆಯಲ್ಲಿ ಸಿಲುಕಿಕೊಂಡವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೆಲವು ಕಡೆ ತಾತ್ಕಾಲಿಕವಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಈ ನಡುವೆ ಸಾರ್ವಜನಿಕರು, ಸಂಘಸಂಸ್ಥೆಗಳು, ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಆಹಾರ ಪೊಟ್ಟಣಗಳು, ಹೊದಿಕೆಗಳು, ದಿನಬಳಕೆ ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.

ಸಂತ್ರಸ್ತರಿಗೆ ಸಹಾಯ ನೀಡುವುದಾದರೆ ಸಾರ್ವಜನಿಕರು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಗೆ ತಲುಪಿಸುವಂತೆ ಸಚಿವ ಸೋಮಣ್ಣ ಮನವಿ ಮಾಡಿದ್ದಾರೆ.

ಮೈಸೂರಿನ ನಂಜನಗೂಡು ಮತ್ತಿತರ ಕಡೆ ಮಳೆ ಪ್ರಮಾಣ ತಗ್ಗಿದ್ದರೂ ಪ್ರವಾಹ ಯಥಾಸ್ಥಿತಿಯಲ್ಲಿದೆ. ತಾಲ್ಲೂಕಿನ ಅನೇಕ ಕಡೆ ನೆರೆ ಹಾವಳಿ ಉಂಟಾಗಿದ್ದು, ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೂರಾರು ಕುಟುಂಬಗಳು ನಿರ್ಗತಿಕರಾಗಿದ್ದಾರೆ.

ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಕೊಂಚ ವಿರಾಮ ಬಿದ್ದಿದೆ. ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು ಸೇರಿದಂತೆ ಮತ್ತಿತರ ಕಡೆ ಮಳೆ ಪ್ರಮಾಣ ತುಸು ಇಳಿಮುಖವಾಗಿದೆ.

ಜಿಲ್ಲೆಯ ಬಹುತೇಕ ಕಡೆ ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ನದಿಗಳು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅನೇಕ ಕಡೆ ಭತ್ತ, ಬಾಳೆ, ತೆಂಗು ಸೇರಿದಂತೆ ವಾಣಿಜ್ಯ ಬೆಳೆಗಳು ಕೊಚ್ಚಿ ಹೋಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಇಂದು ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚನೆ ಕೊಟ್ಟರು.

ಅತ್ತ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲೂ ಮಳೆ ಆರ್ಭಟ ನಿಂತಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಲ್ಲದೆ ಪ್ರವಾಸಿ ತಾಣಗಳಿಗೂ ಯಾರೊಬ್ಬರೂ ಬಾರದಂತೆ ನಿರ್ಬಂಧ ಹಾಕಲಾಗಿದೆ. ಚಾರ್ಮುಡಿ ಘಾಟ್‍ನ ರಸ್ತೆಯಲ್ಲಿ ಉರುಳಿಬಿದ್ದಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಶಿವಮೊಗ್ಗ, ದಾಣಗೆರೆಯಲ್ಲೂ ವರುಣ ಸ್ವಲ್ಪಮಟ್ಟಿಗೆ ಶಾಂತನಾಗಿದ್ದಾನೆ. ಇನ್ನು ಬೆಳಗಾವಿ, ಗದಗ, ಧಾರವಾಡದಲ್ಲೂ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿರುವುದು ಜನತೆಯಲ್ಲಿ ತುಸು ನೆಮ್ಮದಿ ತಂದಿದೆ.

Facebook Comments

Sri Raghav

Admin