ಕರ್ನಾಟಕಕ್ಕೆ 5 ಸಾವಿರ ಕೋಟಿ ನೆರೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.9- ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿ ರೈತರ ಬೆಳೆಗಳು, ಮನೆ-ಮಠ, ಜಾನುವಾರು ಸೇರಿದಂತೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ಮೊದಲ ಹಂತವಾಗಿ 5ಸಾವಿರ ಕೋಟಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿದೆ.

ನಾಳೆ ಬೆಳಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗೃಹ ಸಚಿವ ಬಸವರಾಜಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ವಿಡಿಯೋ ಸಂವಾದ ನಡೆಸಲಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಸಂಬಂಧ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಉಭಯ ಸಚಿವರು ಪ್ರಧಾನಿ ಅವರೊಂದಿಗೆ ರಾಜ್ಯದ ನೆರೆ ಪರಿಸ್ಥಿತಿ ಕುರಿತಂತೆ ಮಾಹಿತಿ ನೀಡುವರು.

ಪ್ರವಾಹ ಪೀಡಿತ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಉಂಟಾಗಿರುವ ನೆರೆಯಿಂದ ಕುಸಿದು ಬಿದ್ದಿರುವ ಮನೆಗಳು, ಬೆಳೆ, ಸಾವು-ನೋವು ಸೇರಿದಂತೆ ಎಲ್ಲವನ್ನೂ ಲೆಕ್ಕ ಹಾಕಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಅಂದಾಜು ಈ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಉಂಟಾದ ಪ್ರವಾಹದಿಂದಾಗಿ 5ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್‍ಡಿಆರ್‍ಎಫ್)ಯಡಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಸಚಿವರು ಪ್ರಧಾನಿಗೆ ಮನವಿ ಮಾಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳು ಪ್ರಾಥಮಿಕ ಹಂತದ ಅಂದಾಜು ನಷ್ಟವನ್ನು ಲೆಕ್ಕ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಪ್ರಮುಖವಾಗಿ ಕೊಡಗಿನಲ್ಲಿ ಆಂದಾಜು 2ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿದ್ದು, ನೂರಾರು ಮನೆಗಳು, ರೈತರು ಬೆಳೆದಿದ್ದ ವಾಣಿಜ್ಯ ಬೆಳೆಗಳಾದ, ಕಾಫಿ, ಟೀ, ಮೆಣಸು, ಲವಂಗ ಸೇರಿದಂತೆ ಇತರೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ವೀರಾಜ್‍ಪೇಟೆ, ಕುಶಾಲ್‍ನಗರ, ಪೆÇನ್ನಮ್‍ಪೇಟೆ, ಶನಿವಾರಸಂತೆ ಸೇರಿದಂತೆ ಮತ್ತಿತರ ಕಡೆ ನಿರಂತರವಾಗಿ ಮಳೆ ಸುರಿದ ಪರಿಣಾಮ ನಿರೀಕ್ಷೆಗೂ ಮೀರಿದ ಹಾನಿ ಸಂಭವಿಸಿದೆ.

ಮಡಿಕೇರಿ ಜಿಲ್ಲೆಯೊಂದರಲ್ಲೇ ಪ್ರಾಥಮಿಕ ಅಂದಾಜಿನ ಪ್ರಕಾರ ಎರಡು ಸಾವಿರ ಕೋಟಿ ನಷ್ಟ ಸಂಭವಿಸಿದೆ. ಇದು ಪ್ರಾಥಮಿಕ ವರದಿಯಾಗಿದ್ದು, ನೆರೆ ಹಾವಳಿಯಿಂದ ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರಿನಲ್ಲೂ ಮಡಿಕೇರಿಯಂತೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಮುಖ್ಯವಾಗಿ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ನಗರ, ಕಳಶ, ಎನ್.ಆರ್.ಪುರ, ಕೊಪ್ಪಾ ಭಾಗಗಳಲ್ಲಿ ರೈತರ ವಾಣಿಜ್ಯ ಬೆಳೆಗಳಾದ ಅಡಿಕೆ, ಬಾಳೆ, ಭತ್ತ, ಕಾಫಿ, ಟೀ ಸೇರಿದಂತೆ ಮತ್ತಿತರ ಬೆಳೆಗಳು ಕೊಚ್ಚಿ ಹೋಗಿವೆ.

ರೈತರ ಪರಿಸ್ಥಿತಿ ದುಸ್ತರವಾಗಿದೆ. ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವ ಜನರಿಗೆ ತಕ್ಷಣವೇ ಪರಿಹಾರ ನೀಡಬೇಕಾದ ಅಗತ್ಯವಿದೆ. ಮೂರು ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ನಷ್ಟ ಸಂಭವಿಸಿದ್ದು, ಕೂಡಲೇ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಒಂದು ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಮೂರಕ್ಕೂ ಹೆಚ್ಚು ತಾಲ್ಲೂಕುಗಳು ನೆರೆಗೆ ಸಿಲುಕಿವೆ. ಬೆಳ್ತಂಗಡಿ, ಮೂಡಬಿದರೆ, ಬಂಟ್ವಾಳ ಸೇರಿದಂತೆ ಮತ್ತಿತರ ಕಡೆ ನಿರಂತರವಾಗಿ ಮಳೆಯಾದ ಪರಿಣಾಮ ವಾಣಿಜ್ಯ ಬೆಳೆಗಳು ಕೊಚ್ಚಿ ಹೋಗಿವೆ. ಕೆಲವು ಕಡೆ ಕಡಲ ಕೊರೆತ ಉಂಟಾಗಿ ಬೆಳೆ ಮತ್ತು ಮನೆಗಳು ಮುಳುಗಡೆಯಾಗಿವೆ.

ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿನ ಹಾನಿಯಾಗಿದೆ. ಅನೇಕ ಕಡೆ ರಸ್ತೆಗಳು ಮರಗಳು ಉರುಳಿ ಬಿದ್ದ ಪರಿಣಾಮ ಇವುಗಳ ಕಾಮಗಾರಿಗೆ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದೆ. ಜಿಲ್ಲೆಗೆ ಒಂದು ಸಾವಿರ ಕೋಟಿ ತಕ್ಷಣವೇ ಪರಿಹಾರದ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿಯಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಹ ಭಾರದಿದ್ದರೂ ಅಲ್ಲಲ್ಲಿ ನಷ್ಟ ಸಂಭವಿಸಿದೆ. ಸರ್ಕಾರ ಮೊದಲ ಹಂತದಲ್ಲಿ 10 ಕೋಟಿ ಬಿಡುಗಡೆ ಮಾಡಿರುವುದನ್ನು ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇನ್ನೂ ಕೆಲವು ಕಡೆ ಪರಿಹಾರ ಕಾರ್ಯ ತೊಡಗಿಸಕೊಳ್ಳಬೇಕಾದ ಅಗತ್ಯವಿರುದರಿಂದ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ನಾಲ್ಕಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ನೆರೆ ಪ್ರವಾಹ ಉಂಟಾಗಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಬಹುತೇಕ ಕಡೆ ಬೆಳೆ ಹಾಗೂ ಮನೆಗಳು ಹಾನಿಗೀಡಾಗಿವೆ. ವಾಣಿಜ್ಯ ಬೆಳೆಗಳು ನೆಲಕಚ್ಚಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆಲವು ಕಡೆ ಭಾಗಶಃ ಮನೆ ಕುಸಿದು ದೈನಂದಿನ ಬಳಕೆ ವಸ್ತುಗಳು ನಾಶವಾಗಿವೆ.

ಅಂತಹ ಕಡೆ ಪರಿಹಾರ ನೀಡಬೇಕಾದ ಕಾರಣ ಜಿಲ್ಲೆಗೆ ಒಂದು ಸಾವಿರ ಕೋಟಿ ರೂ. ನೆರವು ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಪ್ರತಿಪಾದಿಸಿದ್ದಾರೆ.ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಬೆಳಗಾವಿಯಲ್ಲೂ ಭೀಕರ ಪ್ರವಾಹ ಎದುರಾಗಿದೆ.

ಮಹಾರಾಷ್ಟ್ರದ ಕೃಷ್ಣಾ ನದಿಯಿಂದ ವ್ಯಾಪಕ ನೀರು ಹರಿದು ಬಂದಿದ್ದು ಹಾಗೂ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದ್ದರಿಂದ ಖಾರಾಪುರ, ನಿಪ್ಪಾಣಿ, ಚಿಕ್ಕೋಡಿ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಕೂಡಲೇ ಸರ್ಕಾರ ಎರಡು ಸಾವಿರ ಕೋಟಿ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ರೀತಿ ಗದಗ, ಧಾರವಾಡ, ರಾಯಚೂರು, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲೂ ಪ್ರವಾಹ ಉಂಟಾಗಿದ್ದು, ತಕ್ಷಣವೇ ಸರ್ಕಾರ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಹೀಗೆ ಜಿಲ್ಲಾಧಿಕಾರಿಗಳು ನೀಡಿರುವ ವರದಿ ಆಧರಿಸಿ ನಾಳೆ ಪ್ರಧಾನಿ ಮೋದಿ ಅವರೊಂದಿಗೆ ನೇರ ಸಂವಾದ ನಡೆಸಲಿರುವ ಸಚಿವರಾದ ಬೊಮ್ಮಾಯಿ ಮತ್ತು ಅಶೋಕ್, ರಾಜ್ಯಕ್ಕೆ ಮೊದಲ ಹಂತದಲ್ಲಿ 5ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಿದ್ದಾರೆ. ಕಳೆದ ವರ್ಷವೂ ಇದೇ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ನಷ್ಟ ಸಂಭವಿಸಿತ್ತು. ಮತ್ತೆ ಪ್ರವಾಹ ಬಂದಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರಧಾನಿಯವರ ಗಮನಕ್ಕೆ ತರಲಿದ್ದಾರೆ.

ಸರ್ಕಾರ ಈಗಾಗಲೇ ಕೈಗೊಂಡಿರುವ ಪರಿಹಾರ, ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಮುಂಜಾಗ್ರತವಾಗಿ ಏನೇನು ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ಪ್ರಧಾನಿಯವರಿಗೆ ವಿವರಿಸುವರು. ಮಹಾಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ತಕ್ಷಣವೇ ಪರಿಹಾರ ರೂಪದಲ್ಲಿ 5ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಬೇಕು.

ಪ್ರವಾಹ ಇಳಿಮುಖವಾದ ನಂತರ ರಾಜ್ಯಕ್ಕೆ ಕೇಂದ್ರದ ಉನ್ನತಾಧಿಕಾರಿಗಳ ಅಧ್ಯಯನ ತಂಡವನ್ನು ಕಳುಹಿಸಿಕೊಡುವಂತೆಯೂ ಕೋರಲಿದ್ದಾರೆ.ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ನಷ್ಟದ ಪ್ರಮಾಣದ ಕುರಿತಂತೆ ಜಿಲ್ಲಾಧಿಕಾರಿಗಳು ಅಂತಿಮ ವರದಿ ನೀಡಿದ ನಂತರ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ವರದಿಯನ್ನು ನೀಡಲು ಸರ್ಕಾರ ಮುಂದಾಗಲಿದೆ.

ಮೊದಲು ಜನರಿಗೆ ಪರಿಹಾರ ನೀಡಲು ಆರ್ಥಿಕ ನೆರವು ತಕ್ಷಣ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಾಯ ಮಾಡಲಿದೆ.

Facebook Comments

Sri Raghav

Admin