ಮೋದಿಜೀ 25 ಸೀಟ್ ಗೆಲ್ಸಿ ಏನ್ ಪ್ರಯೋಜನ..? ಪ್ರಧಾನಿ ವಿರುದ್ಧ ಕನ್ನಡಿಗರ ಆಕ್ರೋಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.12- ನಾಲ್ಕೂವರೆ ದಶಕಗಳ ನಂತರ ಭೀಕರ ಪ್ರವಾಹ ಮತ್ತು ವರುಣನ ಆರ್ಭಟಕ್ಕೆ ಸಿಕ್ಕಿ ತತ್ತರಿಸಿರುವ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸದಿರುವುದಕ್ಕೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳ 80 ತಾಲ್ಲೂಕುಗಳಲ್ಲಿ 45 ವರ್ಷಗಳ ನಂತರ ಭೀಕರ ಪ್ರವಾಹ ಮತ್ತು ಮಳೆ ಸಂಭವಿಸಿ ಹಿಂದೆಂದೂ ಕಾಣದಷ್ಟು ನಷ್ಟ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಸಂತ್ರಸ್ತರಿಗೆ ಅಭಯ ನೀಡುವುದು ಹಾಗೂ ಆರ್ಥಿಕ ನೆರವು ಘೋಷಣೆ ಮಾಡಬೇಕಿತ್ತೆಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.

ಕಳೆದ ವರ್ಷ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ಮತ್ತಿತರ ಕಡೆ ಸಂಭವಿಸಿದ ಪ್ರವಾಹದ ವೇಳೆ ಪ್ರಧಾನಿಯವರು ಭೇಟಿ ನೀಡಿ ಪರಿಹಾರ ಘೋಷಣೆ ಮಾಡಿದ್ದರು.ಈಗ ಇಂತಹ ತಾತ್ಸಾರ ಮನೋಭಾವನೆ ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
2009ರಲ್ಲಿ ರಾಜ್ಯದಲ್ಲೂ ಇದೇ ರೀತಿ ಪ್ರವಾಹ ಉಂಟಾಗಿತ್ತು.

ಈ ವೇಳೆ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್‍ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ವೈಮಾನಿಕ ಸಮೀಕ್ಷೆ ನಡೆಸಿ ರಾಜ್ಯಕ್ಕೆ ಎರಡು ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಿದ್ದರು. ಕರ್ನಾಟಕದ ಮೇಲೆ ಮೋದಿಗೆ ಏಕಿಷ್ಟು ಮಲತಾಯಿ ಧೋರಣೆ ಎಂದು ಕಿಡಿಕಾರುತ್ತಿದ್ದಾರೆ.

ರಾಜ್ಯದಲ್ಲಿ ಈವರೆಗೂ 40 ಮಂದಿ ಸಾವನ್ನಪ್ಪಿದ್ದು, 41 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ನಾಶವಾಗಿವೆ. ಅಂದಾಜು 40 ರಿಂದ 50 ಸಾವಿರ ಕೋಟಿ ನಷ್ಟವಾಗಿದೆ. ಜನ-ಜಾನುವಾರು, ಸೇತುವೆಗಳು, ಹಳ್ಳ-ಕೊಳ್ಳಗಳು, ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿವೆ.

ಸಂತ್ರಸ್ತರಿಗೆ ಧೈರ್ಯ ತುಂಬಬೇಕಾಗಿದ್ದ ಪ್ರಧಾನಿಗಳು ಬಾರದಿರುವುದು ಜನತೆಯಲ್ಲಿ ಬೇಸರ ಉಂಟುಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿಯನ್ನಷ್ಟೇ ಪಡೆದರು. ಆದರೆ, ಈವರೆಗೂ ಒಂದೇ ಒಂದು ನಯಾಪೈಸೆ ಹಣವನ್ನೂ ಘೋಷಣೆ ಮಾಡಿಲ್ಲ.

ಪ್ರಧಾನಿಗಳು ಆಗಮಿಸಿದರೆ ವಸ್ತುಸ್ಥಿತಿ ತಿಳಿಯಬಹುದು. 80 ತಾಲ್ಲೂಕುಗಳನ್ನು ನೆರೆಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಇದೊಂದು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದರೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ಸಿಗುತ್ತದೆ.

ಕೇಂದ್ರ ಸಚಿವರು ಆಗಮಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನತೆ ಮೋದಿ ಕಾರಣದಿಂದಲೇ ಅತಿ ಹೆಚ್ಚು ಮತ ನೀಡಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದಾರೆ.

ಕರ್ನಾಟಕದ ಜನತೆ ಎಲ್ಲವನ್ನೂ ಕಳೆದುಕೊಂಡು ಒಪ್ಪತ್ತಿನ ಗಂಜಿಗೂ ಪರದಾಡುತ್ತಿರುವ ಸಂದರ್ಭದಲ್ಲಿ ಖುದ್ದು ಪ್ರಧಾನಿ ಆಗಮಿಸಲು ಸಮಸ್ಯೆಯಾದರೂ ಏನು ಎಂಬ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿವೆ.

Facebook Comments

Sri Raghav

Admin