ನಿಲ್ಲದ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.21- ನಿಲ್ಲದ ಮಳೆಗೆ ಕರಾವಳಿ ತತ್ತರಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಮತ್ತೇ ಪ್ರವಾಹದ ಭೀತಿ ಎದುರಾಗಿದೆ. ಭಾರೀ ಮಳೆಗೆ ನಿನ್ನೆ ಇಬ್ಬರು ಮೃತಪಟ್ಟಿದ್ದು ಇಂದು ತುಂಗಾಭದ್ರ ನದಿಯಲ್ಲಿ ಎತ್ತಿನಬಂಡಿ ಸಮೇತ ಇಬ್ಬರು ಕೊಚ್ಚಿಹೋಗಿದ್ದಾರೆ. ಕಲಬುರಗಿಯಲ್ಲಿ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದಲ್ಲಿ ಯುವಕನೋರ್ವ ಬೈಕ್ ಸಮೇತ ಕೊಚ್ಚಿಹೋಗಿದ್ದಾನೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕೋಣನ ತಂಬಗಿಯ ನದಿ ಭಾಗದಲ್ಲಿ ಮರಳು ತುಂಬುತ್ತಿದ್ದ ಇಬ್ಬರು ಪ್ರವಾಹದ ಪಾಲಾಗಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಹಲವಾರು ಅವಾಂತರಗಳಿಗೆ ಕಾರಣವಾಗಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದ್ದು ಮೃತ ಯುವಕನನ್ನು ಶ್ರೀಚಂದ ಗ್ರಾಮದ ಬೀರಶೆಟ್ಟಿ ಬೋಧನವಾದಿ(28) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಆತನ ಶವಕ್ಕಾಗಿ ನಿನ್ನೆ ರಾತ್ರಿಯಿಂದಲೂ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯ ನಡೆದಿತ್ತು. ಕತ್ತಲಿನ ಕಾರಣಕ್ಕೆ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಇಂದು ಬೆಳಿಗ್ಗೆ ಯುವಕನ ಶವ ಕೊಚ್ಚಿ ಹೋದ ಸ್ಥಳದ ಸಮೀಪದಲ್ಲಿಯೇ ಸಿಕ್ಕಿದೆ.

ಕೊಡಗಿನಲ್ಲಿ ರೆಡ್ ಅಲರ್ಟ್: ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗ್ಗೆಯಿಂದ ಜಿಲ್ಲೆಯ ಹಲವೆಡೆ ಮಳೆ ಸುರಿಯುತ್ತಿದೆ. ಮಡಿಕೇರಿ, ಭಾಗಮಂಡಲ, ಚೇರಂಬಾಣೆ ತಲಕಾವೇರಿ ಸುತ್ತಮುತ್ತಲೂ ಮಳೆಯಾಗುತ್ತಿದೆ. ನಿನ್ನೆ ಸಂಜೆವರೆಗೆ ಸುರಿದ ಮಳೆಗೆ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಭೀಮಾ ನದಿಯಲ್ಲಿಯೂ ಪ್ರವಾಹ ಭೀತಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಭಾರಿ ಮಳೆ ಹಿನ್ನೆಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಘತ್ತರಗಿ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಅಫಜಲಪುರ-ಜೇವರ್ಗಿ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಲಬುರ್ಗಿ, ಚಿಂಚೋಳಿ, ಸೇಡಂ ಮೊದಲಾದ ತಾಲೂಕುಗಳಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಜಲಾವೃತಗೊಂಡಿದೆ.

ಅಪಾಯಮಟ್ಟದಲ್ಲಿ ನದಿಗಳು: ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದೆ. ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿ, ಕಳಸ, ಕುದುರೆಮುಖ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ.

ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ಥ: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಸ್ವರ್ಣನದಿ ಉಕ್ಕಿ ಹರಿಯುತ್ತಿದ್ದು ಉಡುಪಿಯಲ್ಲಿರುವ ಮಾಜಿ ಸಚಿವ ದಿವಂಗತ ವಸಂತ ಸಾಲಿಯಾನ ಅವರ ನಿವಾಸವೂ ಜಲಾವೃತವಾಗಿದ್ದು, ಕುಟುಂಬ ಸದಸ್ಯರು ಮೊದಲ ಮಹಡಿಯಲ್ಲಿ ಕುಳಿತು ಪ್ರವಾಹ ಇಳಿಮುಖವಾಗುವ ನಿರೀಕ್ಷೆಯಲ್ಲಿದ್ದಾರೆ.

ಮಂಗಳೂರಿನಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ಇಳಿದ ಮೂರು ದೋಣಿಗಳು ಅಲೆಯ ಹೊಡೆತಕ್ಕೆ ಸಿಲುಕಿಕೊಂಡಿವೆ. ಮಲ್ಪೆ ಬೀಚ್ ಸಮೀಪ ಮೂರು ದೋಣಿಗಳು ಅಲೆಯ ಅಬ್ಬರದಲ್ಲಿ ಸಿಲುಕಿದ್ದು ದೋಣಿಯಲ್ಲಿದ್ದವರು ಪರದಾಡುತ್ತಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.

ತುಂಗಾಭದ್ರ ಡ್ಯಾಂನಿಂದ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವ ಹಿನ್ನಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರಕ್ಕೆ ಹೊಲ, ಗದ್ದೆಗಳು ಜಲಾವೃತಗೊಂಡಿದ್ದು ಹಲವೆಡೆ ಸೇತುವೆಗಳು ಮುಳುಗಡೆಯಾಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ.

ನಲುಗಿಹೋದ ರಾಯಚೂರು: ಬಿಸಿಲು ನಾಡು ರಾಯಚೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನ ಅಕ್ಷರಶಃ ನಲುಗಿಹೋಗಿದ್ದಾರೆ. ಕಳೆದ 40 ವರ್ಷಗಳಲ್ಲಿ ಅತ್ಯಧಿಕ ಮಳೆ ಈ ಬಾರಿ ರಾಯಚೂರು ಜಿಲ್ಲೆಯಲ್ಲಾಗಿದೆ. ಮಹಾಮಳೆಗೆ ಅನೇಕ ಗ್ರಾಮಗಳು ನಲುಗಿ ಹೋಗಿವೆ.

ಅದರಲ್ಲೂ ರಾಯಚೂರು ತಾಲೂಕಿನ ಇಡಪನೂರು ಗ್ರಾಮ ಅತ್ಯಧಿಕ ಬಾಧಿತವಾದ ಗ್ರಾಮವಾಗಿದೆ. ನಾಲ್ಕು ದಿನಗಳ ಹಿಂದೆ ಸುರಿದ ಮಳೆಗೆ ಗ್ರಾಮದಲ್ಲಿ ನೀರು ನುಗ್ಗಿದೆ. ಗ್ರಾಮದಲ್ಲಿ 500 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ. ಸಮುದ್ರದಂತೆ ಹರಿದ ಮಳೆ ನೀರಿಗೆ ಗ್ರಾಮದ ಸಂಪರ್ಕಕ್ಕೆ ಇದ್ದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.

ಈ ಸೇತುವೆ ಮಿಡಗಲದಿನ್ನಿ ಮಾರ್ಗವಾಗಿ ಯರಗೇರಾ ಮತ್ತು ರಾಯಚೂರಿಗೆ ಹೋಗಿ ಬರಲು ಸಂಪರ್ಕ ಕಲ್ಪಿಸುತ್ತಿತ್ತು. ಮಹಾಮಳೆಗೆ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ಗ್ರಾಮಸ್ಥರು ನಡುಗಡ್ಡೆಯಲ್ಲಿ ಇರುವಂತಾಗಿದೆ.

Facebook Comments