ರೈತರು ಸೇರಿ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಿ : ಸರ್ಕಾರಕ್ಕೆ ರೈತ ಸಂಘ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.28- ರೈತರು, ಕೃಷಿ ಕೂಲಿಕಾರರು ಸೇರಿದಂತೆ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಅವರು, ಕೊರೊನಾ ರೋಗದ ಆಕ್ರಮಣದಿಂದ ನಮ್ಮ ಗ್ರಾಮೀಣಾ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚಿದೆ. ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ.

ಈ ಸಾಲಿನ ಮುಂಗಾರು ಉತ್ತಮವಾಗಿರಲಿದೆಯೆಂಬ ವರದಿಗಳು ಬರುತ್ತಿವೆ. ಆದರೆ ಕೃಷಿಯನ್ನೇ ನಂಬಿ ಬದುಕನ್ನು
ಸಾಗಿಸುವ ರೈತರು, ಕೃಷಿ ಕೂಲಿಕಾರರು ಹಾಗು ಗ್ರಾಮೀಣಾ ಕಸುಬುದಾರರು ತುಂಬಾ ಚಿಂತಾಕ್ರಾಂತರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸದ್ಯ ಇರುವ ಬೆಳೆ ಮಾರಾಟವಾಗದೇ ರೈತರ ಸಾಲದ ಹೊರೆ ಹೆಚ್ಚಾಗುತ್ತಿದೆ. ಕೂಲಿಕಾರರಿಗೆ ಕೆಲಸವಿಲ್ಲ. ಸಾಲದ ಹೊರೆ ಹೆಚ್ಚಳವಾಗಿ, ಮುಂದಿನ ಜೀವನ ಹೇಗೆ ಎಂಬುದೇ ಬೃಹತ್ ಸಮಸ್ಯೆಯಾಗಿ ಗ್ರಾಮೀಣಾ ಜನತೆಯನ್ನು ಕಾಡುತ್ತಿದೆ. ಹಿಂದೆಂದೂ ಕಂಡರಿಯದ ಇಂತಹ ಸನ್ನಿವೇಶದಲ್ಲಿ ಕೃಷಿಯಲ್ಲಿ ತೊಡಗಿರುವ ರೈತರು, ಕೃಷಿ ಕೂಲಿಕಾರರು ಹಾಗು ಗ್ರಾಮೀಣಾ ಕಸುಬುದಾರರ ನೆರವಿಗೆ ಧಾವಿಸಬೇಕಿರುವುದು ಯಾವುದೇ ನಾಗರೀಕ ಸರ್ಕಾರಗಳ ಅದ್ಯ ಕರ್ತವ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮೀಣ ಕಸುಬುದಾರರ ಬೇಡಿಕೆಗಳನ್ನು ಈಡೇರಿಸಲು ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬಡತನ, ನಿರುದ್ಯೋಗ, ಹಸಿವು ತಾಂಡವಾಡುತ್ತಿರುವ ಈ ಸಂದರ್ಭದಲ್ಲಿಯಾದರೂ ಯಥೇಚ್ಚವಾಗಿ ಗೋದಾಮುಗಳಲ್ಲಿ ಇರುವ ಆಹಾರ ಪದಾರ್ಥಗಳನ್ನು ಬಿ.ಪಿ.ಎಲ್., ಎ.ಪಿ.ಎಲ್. ಎನ್ನುವ ತಾರತಮ್ಯವಿಲ್ಲದೆ ಕನಿಷ್ಠ ಒಂದು ವರ್ಷ ಮಾಸಿಕ ಪ್ರತಿ ಕುಟುಂಬಕ್ಕೆ 15 ಕೆ.ಜಿ. ರೇಷನ್‌ನ್ನು ನೀಡಬೇಕು. ಅಕ್ಕಿಯ  ಜೊತೆಗೆ ಬೆಳೆ, ಎಣ್ಣೆ, ಸಕ್ಕರೆ, ಉಪ್ಪು ಇತ್ಯಾದಿ ಸಾಮಾಗ್ರಿಗಳನ್ನು ನೀಡಬೇಕು.

ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳಿಗೆ ಟೋಲ್ ಪ್ರೀ, ಉಚಿತ ಸಾಗಣಿಕೆ ವೆಚ್ಚ ಹಾಗೂ ಮಾರುಕಟ್ಟೆ ಶುಲ್ಕಕ್ಕೆ ವಿನಾಯಿತಿ ನೀಡಬೇಕು.  ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ರೈತರು ತರುತ್ತಿರುವ ತರಕಾರಿ, ಹಣ್ಣು ಇತ್ಯಾದಿ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಟೋಲ್ ಶುಲ್ಕ, ಮಾರುಕಟ್ಟೆ ಶುಲ್ಕಗಳಿಂದ ವಿನಾಯಿತಿ ನೀಡಬೇಕು.

ಸಹಕಾರಿ ಕ್ಷೇತ್ರದಲ್ಲಿ ಇರುವಂತೆ 3 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲಗಳನ್ನು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ನೀಡಲು ರಾಜ್ಯ ಸರ್ಕಾರ ವಿಶೇಷ ಯೋಜನೆಯನ್ನು ಘೋಷಣೆ ಮಾಡಬೇಕು. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲದ ಪಾವತಿಗೆ ಸಂಬಂಧಿಸಿ ನೀಡಿರುವ ಕಾಲಾವಧಿಯನ್ನು ವಿಸ್ತರಿಸಬೇಕು‌. ಈ ಕಾಲಾವಧಿಯ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸುವಂತೆ ಒತ್ತಾಯ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಂಕಷ್ಟದಲ್ಲಿರುವ ಕೃಷಿಕರಿಗೆ ಸಹಾಯ ಮಾಡುವ ಹಾಗೂ ಸಕಾಲಕ್ಕೆ ರಸಗೊಬ್ಬರ, ಕೀಟನಾಶಕಗಳು ಸರಬರಾಜು ಮಾಡುವ ಉದ್ದೇಶದಿಂದ ಮುಂಗಾರಿಗೆ ಮುಂಚಿತವಾಗಿಯೇ ಗ್ರಾಮೀಣ ಪ್ರದೇಶಗಳ ರೇಷನ್ ಅಂಗಡಿ, ಹಾಲು ಉತ್ಪಾದಕರ ಸಂಘಗಳು ಮತ್ತಿತರ ಸಹಕಾರಿ ಸಂಸ್ಥೆಗಳ ಮೂಲಕ ಮಾರಾಟದ ವ್ಯವಸ್ಥೆನ್ನು ಮಾಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin