ಸಂಖ್ಯಾ ಬಲದಲ್ಲಿ ದೋಸ್ತಿ ಸೋತರೆ ವಿಧಾನಸಭೆ ವಿಸರ್ಜನೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.24- ಲೋಕಸಭಾ ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಮುನ್ನಲೆಗೆ ಬರುವ ಸುಳಿವು ಸಿಕ್ಕಿದೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್‍ನ ಅತೃಪ್ತ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದು, ಮೈತ್ರಿ ಸರ್ಕಾರಕ್ಕೆ ದೊಡ್ಡ ಸಂಕಷ್ಟವನ್ನು ತಂದೊಡ್ಡಲಿದ್ದಾರೆ.

ಡಾ.ಉಮೇಶ್ ಜಾಧವ್ ಅವರನ್ನು ಸೆಳೆದು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಅಖಾಡಕ್ಕಿಳಿಸಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಇದೀಗ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಎರಡು ಬಾರಿ ಸರ್ಕಾರ ರಚನೆಗೆ ವಿಫಲ ಯತ್ನ ನಡೆಸಿದ್ದ ಬಿಜೆಪಿ ಇದೀಗ ಮೂರನೇ ಬಾರಿ ಮತ್ತೊಂದು ಪ್ರಯತ್ನ ನಡೆಸಲು ನಿರ್ಧರಿಸಿ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ನಿಗದಿ ಮಾಡಿದೆ ಎಂದು ಕೇಸರಿ ಪಾಳೆಯದಿಂದ ಮಾಹಿತಿ ಹೊರಬಿದ್ದಿದೆ.

ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಅತೃಪ್ತ ಬಣದ ನಾಯಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ತಂಡ ಇಂದು ನಡೆಯುವ ಮತದಾನದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಕಂಟಕ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಮೇಶ್ ಜೊತೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಭೀಮಾ ನಾಯಕ್, ಜೆ.ಎನ್. ಗಣೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಮೈತ್ರಿ ಸರ್ಕಾರಕ್ಕೆ ಈ ಚುನಾವಣೆಯೇ ಡೆಡ್‍ಲೈನ್, ಚುನಾವಣೆ ನಂತರ ಯಾವ ಕ್ಷಣದಲ್ಲಿ ಬೇಕಾದರೂ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರರಾವ್ ಸೇರಿದಂತೆ ರಾಜ್ಯ ಮುಖಂಡರು ಪದೇ ಪದೇ ಹೇಳಿಕೆ ನೀಡಿ ಆಪರೇಷನ್ ಕಮಲದ ಸುಳಿವು ನೀಡಿದ್ದರು.

ಇದಕ್ಕೆ ಇಂಬು ನೀಡುವಂತೆ ರಮೇಶ್ ಜಾರಕಿಹೊಳಿ ತಂಡ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಂದ ಅಂತರ ಕಾಯ್ದುಕೊಂಡಿದ್ದು ಸದ್ಯದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ತಂದೊಡ್ಡಲಿದ್ದಾರೆ ಎಂದು ಹೇಳಲಾಗ್ತಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಬಂಡಾಯದ ಬಾವುಟ ಹಾರಿಸಿ ಮಂತ್ರಿ ಸ್ಥಾನವನ್ನು ಕಳೆದುಕೊಂಡು ಸದ್ಯ ಬಿಜೆಪಿಯ ಬಾಗಿಲಲ್ಲಿಯೇ ನಿಂತಿರುವ ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರು ಎಪ್ರಿಲ್ 23ರ ಮತದಾನದ ನಂತರ ಕಾಂಗ್ರೆಸ್ ನಿಂದ ಹೊರ ಬರುವ ತೀರ್ಮಾನಕ್ಕೆ ಬರಲಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ ಅವರು ಶನಿವಾರ ಮುಂಜಾನೆ ಬೆಳಗಾವಿಯಲ್ಲಿ ನೀಡಿದ ಹೇಳಿಕೆಯು ರಮೇಶ ಬಂಡಾಯದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದೆ. ರಮೇಶ ಕಾಂಗ್ರೆಸ್ಸಿನಲ್ಲಾದರೂ ಇರಬೇಕು. ಇಲ್ಲವೇ ಬಿಜೆಪಿಗಾದರೂ ಹೋಗಬೇಕು. ಸುಮ್ಮನೆ ಕತ್ತಲಲ್ಲಿ ಕುಳಿತು ಕಲ್ಲು ಒಗೆಯಬಾರದು.

ಈ ಚುನಾವಣೆ ಸೆಮಿಫೈನಲ್ ಆಗಿದ್ದು, ಆರು ತಿಂಗಳ ನಂತರ ಫೈನಲ್ ಮ್ಯಾಚ್ ನಡೆಯಲಿದೆ, ಎಂದು ಸತೀಶ ಹೇಳಿರುವುದು ಸಹೋದರರ ನಡುವಣ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಮೇಶ ಕಳೆದ ಆರೇಳು ತಿಂಗಳಿಂದ ನಡೆಸಿರುವ ಸರಕಾರ ಉರುಳಿಸುವ ರಿಹರ್ಸಲ್ ಈಗ ಅಂತಿಮ ಹಂತ ತಲುಪಿದೆ. ಬಲ್ಲ ಉನ್ನತ ಮೂಲಗಳ ಪ್ರಕಾರ, ಮೂರು ದಿನಗಳ ಹಿಂದೆ ಮಧ್ಯರಾತ್ರಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಡೆಲಿಶನ್ ಹೋಟೆಲ್ ತಲುಪಿದ ಬಿಜೆಪಿ ಅಧ್ಯಕ್ಷ ಆಮಿತ್ ಶಾ ಜೊತೆಗೆ ರಮೇಶ ಮಾತುಕತೆಯಾಗಿದೆ. ಏಪ್ರಿಲ್ 23ರ ನಂತರ ಯಾವಾಗ ಬೇಕಾದರೂ ರಾಜಕೀಯ ರಂಗ ಬಿಸಿ ಏರಲಿದೆ.

1999ರಿಂದ ಐದು ಬಾರಿ ಗೋಕಾಕ್‍ನಿಂದ ಆಯ್ಕೆಯಾಗುತ್ತಲೇ ಬಂದಿರುವ ರಮೇಶ್ ಜಾರಕಿಹೊಳಿ ಆ ಕ್ಷೇತ್ರದ ಮೇಲೆ ಇಪ್ಪತ್ತು ವರ್ಷಗಳಿಂದ ಹಿಡಿತ ಹೊಂದಿದ್ದಾರೆ ಎಂಬುದನ್ನು ಸ್ವತಃ ಸತೀಶ ಜಾರಕಿಹೊಳಿ ಒಪ್ಪಿಕೊಳ್ಳುತ್ತಾರೆ.

ಆದರೆ, ರಮೇಶ್‍ನ್ನು ಬೆಂಬಲಿಸುತ್ತಲೇ ಬಂದಿರುವ ಕಿರಿಯ ಸಹೋದರ ಲಖನ್ ಅವರನ್ನು ರಮೇಶ್ ಜಾರಕಿಹೊಳಿ ವಿರುದ್ಧ ಎತ್ತಿಕಟ್ಟಿರುವ ತಂತ್ರಕ್ಕೆ ಲಖನ್ ಬಲಿಯಾಗುವುದಿಲ್ಲ ಎಂಬುದು ರಮೇಶ್ ಜಾರಕಿಹೊಳಿಯ ಆಪ್ತರ ಲೆಕ್ಕಾಚಾರವಾಗಿದೆ.

ರಮೇಶ್ ಮತ್ತು ಸತೀಶ್ ಜಾರಕಿಹೊಳಿ ರಾಜಕೀಯ ನಡೆ ಮತ್ತು ಸ್ವಭಾವವನ್ನು ಚೆನ್ನಾಗಿ ಬಲ್ಲ ಲಖನ್ ಜಾರಕಿಹೊಳಿ ಮುಂದಿನ ನಿರ್ಧಾರವನ್ನು ಅಳೆದು ತೂಗಿಯೇ ಕೈಗೊಳ್ಳುವ ಸೂಚನೆಗಳಿವೆ.

ಲಖನ್ ಅವರೇ ರಮೇಶ್ ಜಾರಕಿಹೊಳಿ ಅವರ ಉತ್ತರಾಧಿಕಾರಿ ಎಂದು ಘೋಷಿಸಿರುವ ಸತೀಶ್ ಜಾರಕಿಹೊಳಿ, ಗೋಕಾಕ್‍ನಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಲಖನ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದೂ ತಿಳಿಸಿದ್ದಾರೆ. ಲಖನ್ ಅವರು ಸತೀಶ್ ಅವರನ್ನು ನೆಚ್ಚಿಕೊಂಡು ಅಭ್ಯರ್ಥಿಯಾಗಿ ನಂಬಿಗಸ್ಥ ಅಣ್ಣ ರಮೇಶ್ ಜಾರಕಿಹೊಳಿಯ ವಿರೋಧ ಕಟ್ಟಿಕೊಂಡಾರೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ.

ಕುಂದಗೋಳ ಶಾಸಕ ಶಿವಳ್ಳಿ ನಿಧನದಿಂದ ಮತ್ತು ಚಿಂಚೋಳಿ ಶಾಸಕ ಉಮೇಶ ಜಾಧವ ರಾಜಿನಾಮೆಯಿಂದಾಗಿ ಮೈತ್ರಿ ಸರಕಾರದ ಬಲವು 118ರಿಂದ 116ಕ್ಕೆ ಇಳಿದಿದೆ.

ಮತ್ತಿಬ್ಬರು ಶಾಸಕರಾದ ಖಂಡ್ರೆ ಮತ್ತು ಕೃಷ್ಣ ಬೈರೇ ಗೌಡರು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಆಯ್ಕೆಯಾದರೆ ಬಲವು 114ಕ್ಕೆ ಇಳಿಯಲಿದೆ. ರಮೇಶ ಸಹಿತ ನಾಲ್ವರೇ ರಾಜಿನಾಮೆ ನೀಡಿದರೂ ಬಲವು 110ಕ್ಕೆ ಕುಸಿದು ಸರಕಾರ ಅಲ್ಪಮತಕ್ಕೆ ಜಾರಬಹುದು. ಈ ಹಂತದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಬಹುದಾಗಿದೆ.

ಮೂಲಗಳ ಪ್ರಕಾರ, ಬಿಜೆಪಿಯು ಸದ್ಯ ಸರಕಾರ ರಚಿಸುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ, ಮೇ 23ರವರೆಗೆ ಕಾಯ್ದು ನೋಡುವ ತಂತ್ರವನ್ನು ಅನುಸರಿಸಲಿದೆ. ಆಮೇಲೆ ಅಗತ್ಯ ಬೆಂಬಲ ಸಿಕ್ಕರೆ ಹೊಸ ಸರಕಾರ ರಚನೆ, ಇಲ್ಲವಾದರೆ ಅಕ್ಟೋಬರ್‍ನಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ಜೊತೆಗೆ ಕರ್ನಾಟಕದಲ್ಲೂ ನಡುಗಾಲದ ಚುನಾವಣೆ!

ಕಳೆದ ವರ್ಷದ ಮೇ ತಿಂಗಳಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಬೆಳಗಾವಿಯಿಂದ ಆರಂಭವಾದ ಬಂಡಾಯದ ಬೆಂಕಿ ಸರಕಾರವನ್ನೇ ಆಹುತಿ ತೆಗೆದುಕೊಳ್ಳುವ ಮಟ್ಟ ತಲುಪಿದೆ. ಸರಕಾರ ಉರುಳಿ ಬಿಜೆಪಿ ಕೈಗೆ ಅಧಿಕಾರ ಸಿಗಲೇಬಾರದೆಂದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಣತೊಟ್ಟಿವೆ. ಬಿಜೆಪಿಗೆ ಅಧಿಕಾರ ಸಿಗಬಾರದೆಂದರೆ, ಯಡಿಯೂರಪ್ಪ ರಾಜ್ಯದ ಚುಕ್ಕಾಣಿ ಹಿಡಿಯಬಾರದೆಂದರೆ, ರಾಜ್ಯ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡುವ ದಾರಿಯೊಂದೇ ಅವುಗಳ ಮುಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ