ಜಮ್ಮುಕಾಶ್ಮೀರದಲ್ಲಿ ತಲೆ ಎತ್ತಲಿವೆ ಕರ್ನಾಟಕ ಸರ್ಕಾರದ ಹೋಟೆಲ್ ಅಂಡ್ ರೆಸಾರ್ಟ್‌ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಮುಂದಾಗಿದೆ.
ಈಗಾಗಲೇ ಮಹಾರಾಷ್ಟ್ರ ಸರ್ಕಾರ ಜಮ್ಮು, ಶ್ರೀನಗರ ಮತ್ತು ಲಡಾಕ್‍ನಲ್ಲಿ ಸರ್ಕಾರದ ವತಿಯಿಂದ ರೆಸಾರ್ಟ್ ಹಾಗೂ ಹೊಟೆಲ್‍ಗಳನ್ನು ತೆರೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಕಣಿವೆ ರಾಜ್ಯದಲ್ಲಿ ಹೋಟೆಲ್ ಹಾಗೂ ಯೋಗ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು ಮುಂದಾಗಿದೆ.

ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ವಿಶೇಷ ಸ್ಥಾನಮಾನವನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಇದೀಗ ಕೇಂದ್ರಾಡಳಿತ ಪ್ರದೇಶವಾದ ಲಡಕ್ ಮತ್ತು ಜಮ್ಮುಕಾಶ್ಮೀರದಲ್ಲಿ ಬಂಡವಾಳ ಹೂಡಿಕೆ, ಶಿಕ್ಷಣ, ಪ್ರವಾಸೋದ್ಯಮಗಳ ಅಭಿವೃದ್ಧಿ, ಐಟಿಬಿಟಿ ಸ್ಥಾಪನೆ, ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಕೇಂದ್ರ ಸರ್ಕಾರವು ರಾಜ್ಯ ಮತ್ತು ಖಾಸಗಿಯವರಿಗೆ ಉತ್ತೇಜನ ನೀಡುತ್ತಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಶ್ರೀನಗರ, ಲಡಾಕ್, ಕಾಶ್ಮೀರ ಸೇರಿದಂತೆ ಮತ್ತಿತರ ಕಡೆ ಯೋಗ ತರಬೇತಿ ಕೇಂದ್ರಗಳು, ಮಾಹಿತಿ ಕೇಂದ್ರ, ಸಾಂಸ್ಕøತಿಕ ಕೇಂದ್ರಗಳು, ಕೆಎಸ್‍ಟಿಡಿಸಿ ಹೋಟೆಲ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಿದೆ.

ಕರ್ನಾಟಕ ಸೇರಿದಂತೆ ಕಣಿವೆ ರಾಜ್ಯಕ್ಕೆ ಪ್ರತಿದಿನ ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿಗೆ ಬರುವವರಿಗೆ ಸೂಕ್ತವಾದ ಹೋಟೆಲ್‍ಗಳು, ವಸತಿ ವ್ಯವಸ್ಥೆ, ಮಾಹಿತಿ ಕೇಂದ್ರಗಳು ಇಲ್ಲದಿರುವ ಕಾರಣ ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದನ್ನು ತಪ್ಪಿಸುವುದು ಹಾಗೂ ಕರ್ನಾಟಕದ ಪರಂಪರೆ, ಸಂಸ್ಕøತಿ ಹಾಗೂ ಪ್ರವಾಸಿ ತಾಣಗಳನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಶೀಘ್ರದಲ್ಲೇ ಅಧಿಕಾರಿಗಳ ತಂಡ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿ ಯಾವ ಯಾವ ಸ್ಥಳಗಳಲ್ಲಿ ತೆರೆಯಲು ಸಾಧ್ಯವಿದೆ ಎಂಬುದನ್ನು ಪರಿಶೀಲಿಸುತ್ತಾರೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕಣಿವೆ ರಾಜ್ಯದಲ್ಲಿ ಹೋಟೆಲ್, ಮಾಹಿತಿ ಕೇಂದ್ರಗಳು, ಯೋಗ ತರಬೇತಿ ಕೇಂದ್ರ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒಳಗೊಂಡ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕವು ಜಾಗತಿಕವಾಗಿ ಅತ್ಯಂತ ಸಂಪದ್ಬರಿತ ರಾಜ್ಯವಾಗಿದೆ. ಇಲ್ಲಿನ ವಿಶ್ವ ಪ್ರಸಿದ್ದ ಹಂಪಿ, ಮೈಸೂರು, ಬೇಲೂರು, ಹಳೆಬೀಡು ಸೇರಿದಂತೆ ರಾಜ್ಯದ ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರಪಡಿಸಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.

Facebook Comments