ಜನಸಾಮಾನ್ಯನಿಗೆ ರಾಜ್ಯ ಸರ್ಕಾರದಿಂದ ತೆರಿಗೆ ಬರೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Tax-01

ಬೆಂಗಳೂರು,ಜು.2- ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲಮನ್ನಾ ಘೋಷಣೆ ಮಾಡಲು ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ಕೊಟ್ಟಿರುವ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ದರ ಹೆಚ್ಚಿಸಿ ರಜಾ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ರಜಾ ಭಾಗ್ಯ ನೀಡಿ ಇತರೆ ಯೋಜನೆಗಳ ವೆಚ್ಚದಲ್ಲಿ ಕಡಿತಗೊಳಿಸಲಿದೆ. ಗುರುವಾರ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡದೆ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡಿ ಮತ ಬ್ಯಾಂಕ್ ಯೋಜನೆಗಳಿಗೆ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ. ಸಣ್ಣ ಹಾಗೂ ಅತಿಸಣ್ಣ ರೈತರು ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಎರಡು ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಯೋಜನೆಯನ್ನು ಪ್ರಕಟಿಸಲಿದ್ದಾರೆ. ಮೊದಲ ಹಂತದಲ್ಲಿ 35 ಸಾವಿರ ಕೋಟಿ ಸಾಲ ಮನ್ನಾವಾದರೆ ಈ ಬಾರಿ ದೊಡ್ಡ ದೊಡ್ಡ ರೈತರ ಹಾಗೂ ಅತಿ ಹೆಚ್ಚು ಜಮೀನು ಹೊಂದಿರುವ ಹಿಡುವಳಿದಾರರ ಸಾಲಮನ್ನಾಕ್ಕೆ ಬ್ರೇಕ್ ಬೀಳಲಿದೆ.

ಸೆಸ್ ದರ ಹೆಚ್ಚಳ:

ಸಾಲ ಮನ್ನಾ ಮಾಡುವುದರಿಂದ ಆರ್ಥಿಕ ಅಶಿಸ್ತು ಉಂಟಾಗುತ್ತದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸಲಹೆ ಮಾಡಿದ್ದರೂ ಜನತೆಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕುಮಾರಸ್ವಾಮಿ ಅವರು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತಮ್ಮದೇ ಆದ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಸಾಲಮನ್ನಾ ಘೊಷಣೆಯಿಂದ ಹೆಚ್ಚುವರಿ ಯಾಗಿ 53 ಸಾವಿರ ಕೋಟಿ ಹೊರೆ ಬೀಳುವುದರಿಂದ ಈ ಬಾರಿ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆಯನ್ನು 1ರಿಂದ 1.50 ರೂ.ಗೆ ಹೆಚ್ಚಳ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಸುಮಾರು 8ರಿಂದ 10 ಸಾವಿರ ಕೋಟಿ ವಾರ್ಷಿಕ ಆದಾಯ ಬರಲಿದೆ. ಇನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಕೂಡ ಏರಿಕೆ ಮಾಡಲು ತೀರ್ಮಾನಿಸಿರುವುದರಿಂದ ಬೊಕ್ಕಸಕ್ಕೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಯತ್ನಿಸುತ್ತಿದ್ದಾರೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಸಾಲ ಮನ್ನಾ ಘೋಷಣೆ ಯಾಗುವುದರಿಂದ ಬ್ಯಾಂಕ್‍ಗಳಲ್ಲಿ ಬ್ಯಾಂಡ್ ಮೂಲಕವೂ ಸಾಲ ಪಡೆದಿರುವುದರಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುವ ಸಂಭವವಿಲ್ಲ ಎಂದು ನಿರೀಕ್ಷಿಸಲಾಗಿದೆ.

ಇಂದಿರಾ ಕ್ಯಾಂಟೀನ್‍ಗೆ ರಜೆ:

ಇನ್ನು ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದ್ದ ಇಂದಿರಾ ಕ್ಯಾಂಟೀನ್‍ಗಳು ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಬಂದ್ ಆಗಲಿವೆ. ಸರ್ಕಾರದ ಬೊಕ್ಕಸಕ್ಕೆ ಇದು ಕೂಡ ಹೊರೆಯಾಗುತ್ತಿರುವುದರಿಂದ ವೆಚ್ಚವನ್ನು ಸರಿದೂಗಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.  ಭಾನುವಾರ ಸರ್ಕಾರಿ ರಜೆ ದಿನದಂದು ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗಗಳಲ್ಲಿ ಕ್ಯಾಂಟೀನ್‍ಗಳು ಬಂದ್ ಆಗಲಿವೆ. ಇನ್ನು 8ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಲು ಉದ್ದೇಶಿಸಿದ್ದ ಉಚಿತ ಲ್ಯಾಪ್‍ಟಾಪ್ ಯೋಜನೆಗೆ ಕೊಕ್ಕೆ ಬೀಳಲಿದೆ. ಈ ಯೋಜನೆಯು ಕೂಡ ಬಿಳಿಯಾನೆಯಂತಾಗಿರುವುದರಿಂದ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿಯಲು ಚಿಂತನೆ ನಡೆಸಿದೆ.

ಗರ್ಭಿಣಿಯರಿಗೆ ತಿಂಗಳ ಮಾಶಾಸನ, ಆಶ್ರಯ ಮನೆ ಮಾಶಾಸನ ಹೆಚ್ಚಳ, ಹಿರಿಯ ನಾಗರಿಕರಿಗೆ ನೀಡುವ ಮಾಶಾಸನದಲ್ಲಿ ಏರಿಕೆ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ಬಾರಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸದಿರಲು ತೀರ್ಮಾನಿಸಿದ್ದಾರೆ.
ಪ್ರಮುಖ ಆದ್ಯತಾ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಸೇರಿದಂತೆ ಮತ್ತಿತರ ಇಲಾಖೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ.  ಜಲಸಂಪನ್ಮೂಲ ಇಲಾಖೆ ಹೊರತುಪಡಿಸಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,ಕೈಗಾರಿಕೆ, ಕಂದಾಯ, ಅರಣ್ಯ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳಿಗೆ ಹಿಂದಿನ ಬಾರಿಗಿಂತಲೂ ಅನುದಾನ ಗಣನೀಯ ಪ್ರಮಾಣದಲ್ಲಿ ಕಡಿತಗೊಳ್ಳಲಿದೆ.

Facebook Comments

Sri Raghav

Admin