ಬ್ರೇಕಿಂಗ್ : ಮತ್ತೊಂದು ಪ್ಯಾಕೇಜ್ ಘೋಷಣೆಗೆ ಸಿಎಂ ಯಡಿಯೂರಪ್ಪ ತಯಾರಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 13- ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು, ನಿನ್ನೆಯಷ್ಟೇ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರಮಿಕರಿಗಾಗಿ ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಣೆ ಮಾಡಲು ಮುಂದಾಗಿದ್ದಾರೆ.

ಕಳೆದ ವಾರ ಶ್ರಮಿಕರು, ಸೇರಿದಂತೆ ವಿವಿಧ ವರ್ಗದವರಿಗೆ 1610 ಕೋಟಿಯ ಆರ್ಥಿಕ ನೆರವು ಘೋಷಣೆ ಮಾಡಿದ್ದರು. ಆದರೆ, ಅವರು, ಘೋಷಿಸಿದ ಪ್ಯಾಕೇಜ್‍ನಲ್ಲಿ ಕೆಲವು ವರ್ಗಗಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ನಾಳೆ ಇಲ್ಲವೆ ಯಾವುದೇ ಸಂದರ್ಭದಲ್ಲೂ ಸಿಎಂ ಬಿ.ಎಸ್.ಯಡಿಯೂರಪ್ಪ ಬಡವರಿಗಾಗಿ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಒಟ್ಟು, ಸುಮಾರು 500ರಿಂದ 800 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸಹಾಯ ಮಾಡುವುದು ಇದರ ಉದ್ದೇಶ ಎನ್ನಲಾಗುತ್ತಿದೆ.

ಇನ್ನು, ಬಳಕೆ ಬರದೆ ಹಾಳಾಗಿ ಹೋಗಿರುವ ಹಣ್ಣು ತರಕಾರಿ ಬೆಳೆಗಳಿಗೆ ಧನ ಸಹಾಯ ಮಾಡಲಾಗುತ್ತಿದೆ. ಎಕರೆ ಲೆಕ್ಕದಲ್ಲಿ ಒಂದೊಂದು ವರ್ಗಕ್ಕೆ ಒಂದು ರೀತಿ ಪ್ಯಾಕೇಜ್ ಹಣ ನೀಡಲಾಗುತ್ತಿದೆ. ಅರ್ಚಕರು, ಕಮ್ಮಾರ, ಸಮಿತಾ ಸಮಾಜದ ವಾದ್ಯ ನುಡಿಸುವ ವರ್ಗ ಮತ್ತು ಕುಂಬಾರರಿಗೆ ತಲಾ ಮೂರು ಸಾವಿರ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಿದ್ದತೆಯೂ ಮಾಡಿಕೊಳ್ಳಲಾಗಿದೆ ಎನ್ನುತ್ತಿವೆ ಮೂಲಗಳು.

ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಅರ್ಚಕರು, ಟೈಲರ್ ಗಳು, ಅಡುಗೆ ಕೆಲಸದವರು ಹಾಗೂ ಹೂಮಾರಾಟಗಾರರು ಸೇರಿ ಕೆಲವು ಕಾಯಕ ವರ್ಗಗಳಿಗೆ ಒಂದೇ ಹಂತದಲ್ಲಿ ಪರಿಹಾರ ನೀಡುವ ರೀಕ್ಷೆ ಇದೆ. ಪ್ರತೀ ಸಮುದಾಯಕ್ಕೆ ಈ ಸಲ 3,000ದಂತೆ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ.

ಭಾನುವಾರವೇ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆಯಾಗಬೇಕಿತ್ತು. ಆದರೆ, ಸೋಮವಾರ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಕಾರಣದಿಂದ ಮುಂದೂಡಿಕೆಯಾಗಿತ್ತು. ನಿನ್ನೆ ಮಂಗಳವಾರವೂ ಮೋದಿಯವರ ರಾಷ್ಟ್ರೀಯ ಭಾಷಣ ಕಾರಣದಿಂದ ಘೋಷಣೆಯಾಗಲಿಲ್ಲ. ಹಾಗಾಗಿ ನಾಳೆ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡಬಹುದು ಎಂಬುದಾಗಿ ತಿಳಿದುಬಂದಿದೆ.

ಕಳೆದ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು, 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.

ಈ ಪ್ಯಾಕೇಜ್‍ನಿಂದ ಸುಮಾರು ಜನ ವಂಚಿತರಾಗಿದ್ದರು. ಕೆಲವರಿಗೆ ಮಾತ್ರ ಈ ಪ್ಯಾಕೇಜ್ ಹಣ ಸಿಕ್ಕಿತ್ತು. ರಾಜ್ಯದಲ್ಲಿ 2 ಲಕ್ಷ ಕೈಮಗ್ಗ ನೇಕಾರರು ಮತ್ತು 4 ಲಕ್ಷ ವಿದ್ಯುತ್ ಮಗ್ಗಗಳ ಬಡ ನೇಕಾರರಿದ್ದಾರೆ. ಇದರಲ್ಲಿ ಕೇವಲ ಶೇ. 10 ನೇಕಾರರಿಗೆ ಮಾತ್ರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಉಳಿದ ನೇಕಾರರ ಸ್ಥಿತಿ ಅತಂತ್ರವಾಗಿದೆ ಎಂದು ರಾಜಕೀಯ ಪಕ್ಷಗಳು ಕಿಡಿಕಾರಿದ್ದವು.

# ದುಂದು ವೆಚ್ಚಕ್ಕೆ ಕಡಿವಾಣ:
ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಈ ಸಂಕಷ್ಟದಿಂದ ಪಾರಾಗಲು ಯಡಿಯೂರಪ್ಪ ಸಪ್ತ ಸೂತ್ರ ಹೆಣೆದಿದ್ದಾರೆ.ಆರ್ಥಿಕ ಶಿಸ್ತು ಸರಿದೂಗಿಸುವ ವಿಚಾರವಾಗಿ ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಬೊಕ್ಕಸಕ್ಕೆ ಹೊರಯಾಗುವ ಯಾವುದೇ ಹೊಸ ಯೋಜನೆ,ವಾಹನಗಳ ಖರೀದಿ, ಸಿಬ್ಬಂದಿ ನೇಮಕಾತಿ ಸೇರಿದಂತೆ ದುಂದು ವೆಚ್ಚಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ನನ್ನ ಅನುಮತಿ ಇಲ್ಲದೆ ಹಣ ಬಿಡುಗಡೆ ಮಾಡಬಾರದು. ಕೆಲ ತಿಂಗಳ ಮಟ್ಟಿಗೆ ಹಣಕಾಸು ಪರಿಸ್ಥಿತಿ ಸುಧಾರಿಸುವವರೆಗೂ ಇದು ಅನಿವಾರ್ಯವಾಗಿದ್ದು, ಸ್ವಯಂ ನಿಯಂತ್ರನ ಹಾಕಿಕೊಳ್ಳುವಂತೆ ಸ್ವತಃ ಯಡಿಯೂರಪ್ಪ ಅಧಿಕಾರಿಗಳು, ಸಚಿವರು , ಶಾಸಕರು ಸೇರಿದಂತೆ ಮತ್ತಿತರರಲ್ಲೂ ಮನವಿ ಮಾಡಿಕೊಂಡಿದ್ದಾರೆ.

# ಸಪ್ತ ಸೂತ್ರಗಳು
1 ಅನಗತ್ಯ ವೆಚ್ಚಕ್ಕೆ ಕಡಿವಾಣ, ಸಂಪನ್ಮೂಲ ಕ್ರೋಡೀಕರಣಕ್ಕೆ ಉತ್ತೇಜನ, ಅಧಿಕಾರಿಗಳ ಅನಗತ್ಯ ವಾಹನ ವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ಹೊಸ ವಾಹನಗಳ ಖರೀದಿಗೆ ಬ್ರೇಕ್.
2.ಸಾಮಾಜಿಕ ಭದ್ರತಾ ಯೋಜನೆ ಹೊರತುಪಡಿಸಿ ಇತರೆ ಯೋಜನೆಗಳಿಗೆ ಕತ್ತರಿ. ಅನುತ್ಪಾದಕ ವೆಚ್ಚಗಳ ಸಂಪೂರ್ಣ ನಿಯಂತ್ರಣಕ್ಕೆ ಒತ್ತು.
3.ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು.
4.ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು.
5.ಸರ್ಕಾರದ ಅದ್ಧೂರಿ ಜಯಂತಿ, ಕಾರ್ಯಕ್ರಮಗಳಿಗೆ ಕತ್ತರಿ.
6.ಸಚಿವರು ಹಾಗೂ ಅಧಿಕಾರಿಗಳ ಅನಗತ್ಯ ಆಪ್ತ ಸಿಬ್ಬಂದಿ ನೇಮಕಕ್ಕೆ ತಡೆ.
7.ಅಧಿಕಾರಿಗಳ ವಿದೇಶ ಪ್ರವಾಸ, ಪಂಚತಾರಾ ಹೋಟೆಲ್‍ಗಳ ವಾಸ್ತವ್ಯಕ್ಕೆ ಕಡಿವಾಣ.

Facebook Comments

Sri Raghav

Admin