ಮತ್ತೆ ಕಂಪ್ಲೀಟ್ ಲಾಕ್‍ಡೌನ್ ಆಗುತ್ತಾ ಕರ್ನಾಟಕ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೋನಾ ಸೋಂಕು ಅಂಕೆಮೀರಿ ಹಬ್ಬುತ್ತಿರುವ ಹಿನ್ನೆಲೆ, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಏಕೆಂದರೆ,ಒಂದೆರಡು ದಿನದ ಲಾಕ್ ಡೌನ್ ಪರಿಣಾಮಕಾರಿಯಾಗಬಹುದೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿರುವುದು, ಮತ್ತೆ ಲಾಕ್ ಡೌನ್ ಗುಮ್ಮ ಕಾಡುವಂತೆ ಮಾಡಿದೆ.

ಒಂದು ಅಥವಾ 2 ದಿನ ಲಾಕ್ ಡೌನ್ ಮಾಡಿದರೆ ಹೇಗೆ? ಪರಿಣಾಮಕಾರಿಯಾಗುತ್ತಾ ಈ ಬಗ್ಗೆ ಸರ್ಕಾರಗಳು ಪರಾಮರ್ಶೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.  ಇದರ ಜೊತೆಯಲ್ಲಿ ಮೈಕ್ರೋ ಕಂಟೆನ್ಮೆಂಟ್‌ ವಲಯಗಳ ಬಗ್ಗೆ ಗಮನ ನೀಡಿ. ಲಾಕ್‌ಡೌನ್‌ ಜಾರಿ ಮಾಡಿದರೆ ಆರ್ಥಿಕತೆಗೆ ಪೆಟ್ಟು ಬೀಳದಂತೆ ನೋಡಿಕೊಳ್ಳಬೇಕು. ಮುಂದಿನ 7 ದಿನ ಸಿಎಂಗಳು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕೆಂದು ಸೂಚಿಸಿದ್ದಾರೆ.

ಸ್ಥಳೀಯವಾಗಿ ಒಂದೆರಡು ದಿನದ ಲಾಕ್ ಡೌನ್ ಜಾರಿಗೊಳಿಸಿದರೆ ಕೊರೊನಾ ತಡೆಯಲು ಇದರಿಂದ ಏನಾದರೂ ಪ್ರಯೋಜನವಾಗಲಿದೆಯೇ? ಲಾಕ್ ಡೌನ್ ಜಾರಿಗೊಳಿಸಿದರೆ ಆರ್ಥಿಕ ಚಟುವಟಿಕೆಗಳಿಗೆ ಏನಾದರೂ ಸಮಸ್ಯೆ ಆಗಲಿದೆಯೇ? ಇವೆರಡು ವಿಷಯಗಳ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕೆಂದು ಮನವಿ ಮಾಡುತ್ತೇನೆ’ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೈಕ್ರೋ ಕಂಟೇನ್ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿ, ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಈ ಬಗ್ಗೆ ಗಮನ ಹರಿಸಿ, ಲಾಕ್ ಡೌನ್ ಮಾಡುವುದರಿಂದ, ಕೊರೊನಾ ನಿಯಂತ್ರಣಕ್ಕೆ ತರಬಹುದೇ ಎನ್ನುವುದರ ಬಗ್ಗೆ ಗಮನಹರಿಸಿ’ಎಂದು ಮೋದಿ, ರಾಜ್ಯಕ್ಕೆ ಸೂಚನೆಯನ್ನು ನೀಡಿದ್ದಾರೆ.

ಅಧಿವೇಶನದ ಬಳಿಕ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.  ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ,ಪುನಃ ಲಾಕ್ ಡೌನ್ ಜಾರಿಗೊಳಿಸುವ ಕುರಿತಂತೆ ಈಗಾಗಲೇ ಚರ್ಚೆ ಆರಂಭವಾಗಿದೆ.

ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಕೆಲ ಸಚಿವರು ಪರೋಕ್ಷವಾಗಿ ಸುಳಿವು ನೀಡಿರುವುದು ಹಲವು ಅನುಮಾನಗಳಿಗೆ ಸಂಶಯ ಮಾಡಿಕೊಟ್ಟಿದೆ. ಆದರೆ,ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಮಾತ್ರ ಲಾಕ್ ಡೌನ್ ಜಾರಿ ಮಾಡುವುದಕ್ಕೆ ಸುತರಾಂ ಒಪ್ಪುತ್ತಿಲ್ಲ.

ಮೊದಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲಕಚ್ಚಿದೆ.ಬೊಕ್ಕಸಕ್ಕೆ ಬರಬೇಕಾದ ಆದಾಯವು ಬರುತ್ತಿಲ್ಲ.ಮತ್ತೆ ಲಾಕ್ ಡೌನ್ ಜಾರಿ ಮಾಡಿದರೆ, ಸರ್ಕಾರ ನಿರ್ವಾಹಣೆ ಮಾಡುವುದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿದ್ದಾರೆ.
ಅಬಕಾರಿ, ಸಾರಿಗೆ, ಮುದ್ರಣ ಮತ್ತು ನೊಂದಣಿ ಸೇರಿದಂತೆ ಬೊಕ್ಕಸಕ್ಕೆ ವರಮಾನ ತರತ್ತಿದ್ದ ಇಲಾಖೆಗಳಲ್ಲಿ ಈ ಬಾರಿ ಆದಾಯ ನಿರೀಕ್ಷೆಗೂ ಮೀರಿ ಕುಸಿತ ಕಂಡಿದೆ.

ಜನರು ಕೊರೋನಾ ಕಾರಣದಿಂದಾಗಿ ಮನೆಯಿಂದ ಆಚೆ ಯಾರೊಬ್ಬರೂ ಹೊರಬರುತ್ತಿಲ್ಲ.ಪರಿಣಾಮ ಆರ್ಥಿಕ ಚಟುವಟಿಕೆಗಳು ನಡೆಯದ ಕಾರಣ, ವರಮಾನವು ಇಲ್ಲದಂತಾಗಿದೆ. ಮತ್ತೆ ಲಾಕ್ ಡೌನ್ ಎಂದರೆ, ಸರ್ಕಾರಿ ನೌಕರರಿಗೆ ತಿಂಗಳ ವೇತನ ಕೊಡುವುದು ಕಷ್ಟಕರವಾಗುತ್ತದೆ ಎಂದು ಯಡಿಯೂರಪ್ಪ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಗೊತ್ತಾಗಿದೆ.

ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜುಲೈ ತಿಂಗಳಿನಲ್ಲಿ ಶೇ.2.6ರಷ್ಟಿದ್ದ ಸಾವಿನ ಪ್ರಮಾಣ ಇದೀಗ ಶೇ.1.54ಕ್ಕೆ ಇಳಿದಿದೆ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯ ಕೊರೋನಾ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದರು.

ರಾಜ್ಯದಲ್ಲಿ 136 ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದು, ಪ್ರತೀನಿತ್ಯ ಸುಮಾರು 70,000 ಸ್ಯಾಂಪಲ್ಸ್ ಗಳ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೂ ರಾಜ್ಯದಲ್ಲಿ ಸುಮಾರು 43 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ವೈದ್ಯಕೀಯ ವರದಿ ಬರುತ್ತಿದ್ದಂತೆಯೇ ರೋಗಲಕ್ಷಣ ಇರುವ ಸೋಂಕಿತರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ಸಂಪರ್ಕ ಹೊಂದಿರುವವರನ್ನು 24 ರಿಂದ 48 ಗಂಟೆಗಳಲ್ಲಿ ಗುರುತಿಸಿ ಮತ್ತು ಅವರನ್ನು ಸಂಪರ್ಕಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದರು.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ವೇಳೆ ಸೋಂಕು ನಿಯಂತ್ರಣಕ್ಕೆ ಸಣ್ಣ ಪ್ರಮಾಣದ ಲಾಕ್ ಡೌನ್ ಜಾರಿಮಾಡುವ ಅನಿವಾರ್ಯತೆಯನ್ನು ಮುಂದಿಟ್ಟಿದ್ದರು.
ಹೆಚ್ಚು ಹೆಚ್ಚು ಸೋಂಕು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಸಾದ್ಯವಾದರೆ, ಪುನಃ ವಾರದ ಎರಡು ದಿನ ಲಾಕ್ ಡೌನ್ ಜಾರಿಮಾಡಿ ಎಂಬ ಸುಳಿವು ನೀಡಿದ್ದರು.  ಈ ಹಿಂದೆ ಕರ್ನಾಟಕದಲ್ಲಿ ಅನ್‌ಲಾಕ್‌ 2 ಸಮಯದಲ್ಲಿ ವೀಕೆಂಡ್‌ ಲಾಕ್‌ಡೌನ್‌ ಜಾರಿಯಾಗಿತ್ತು.

# ಸುಳಿವು ನೀಡಿದ ಸಚಿವ ರವಿ :
ಇದರ ಬೆನ್ನಲ್ಲೇ ಸಚಿವ ಸಿಟಿ ರವಿ ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಟಿ ರವಿ, ಕೊರೊನಾ ನಮ್ಮ ಊಹೆಗೂ ನಿಲುಕದ ವೈರಸ್ ಆಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು.

ಹಲವು ಕೊರೊನಾ ಪ್ರಕರಣದಲ್ಲಿ 90 ವರ್ಷದವರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ 30 ವರ್ಷಗಳ ವಯಸ್ಸಿನವರು ಸಾವನ್ನಪ್ಪುತ್ತಿದ್ದಾರೆ. ಈಗ ಕೊರೊನಾವನ್ನು ನಿರ್ಲಕ್ಷ್ಯ ಮಾಡುವ ಸ್ಥಿತಿ ಇಲ್ಲ. ಅಚಾನಕ್ ಸಾವುಗಳು ಸಂಭವಿಸುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ಎಚ್ಚರಿಕೆಗಳನ್ನು ವೈಯುಕ್ತಿಕವಾಗಿಯೂ ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಸಂದೇಶ ಲಭಿಸಿದೆ ಎಂದರು.

ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಆದರೆ ಕೆಲವರು ಇದನ್ನೂ ಕೇವಲ ಸರ್ಕಾರದ ಜವಾಬ್ದಾರಿ ಅಷ್ಟೇ ಎಂದುಕೊಂಡಿದ್ದಾರೆ. ಕೊರೊನಾ ವಿಚಾರದಲ್ಲಿ ಸರ್ಕಾರಕ್ಕಿಂತ ವೈಯುಕ್ತಿಕ ಜವಾಬ್ದಾರಿ ಬಹಳ ಹೆಚ್ಚಿದೆ. ಆದ್ದರಿಂದ ಎಲ್ಲರೂ ನಿಯಮಗಳನ್ನು ಪಾಲಿಸಿ ಕೊರೊನಾವನ್ನು ದೂರ ಮಾಡೋಣ ಎಂದು ರವಿ ಮನವಿ ಮಾಡಿದರು.

# ಕಂಪ್ಲೀಟ್ ಲಾಕ್‍ಡೌನ್ ಮಾಡಬೇಕು :
ಕೇಂದ್ರ ಹಾಗೂ ರಾಜ್ಯಗಳು ಕೊರೊನಾದೊಂದಿಗೆ ಬದುಕಿ ಎಂದು ಹೇಳುವ ಮೂಲಕ ನಮ್ಮ ಕೈಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಶನಿವಾರ, ಭಾನುವಾರದ ಲಾಕ್‍ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾಡಿದರೇ ಕಂಪ್ಲೀಟ್ ಲಾಕ್‍ಡೌನ್ ಮಾಡಬೇಕಿದೆ ಎಂದು ಮಾಜಿಸ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಈ ಹಿಂದೆ ಲಾಕ್‍ಡೌನ್ ತೆಗೆದು ಹಾಕಿದಾಗ ಕೋವಿಡ್ ಹೆಚ್ಚಳ ಆಗಿತ್ತು. ಆದರೆ ಆಗ ಲಾಕ್‍ಡೌನ್ ಮುಂದುವರಿಸಬೇಕಿತ್ತು. ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ತಪ್ಪು ನಿರ್ಧಾರ ಮಾಡಿತ್ತು. ಈಗ ಸಣ್ಣ ಪ್ರಮಾಣದ ಲಾಕ್‍ಡೌನ್ ಮಾಡಿದರೆ ಏನು ಪ್ರಯೋಜನಾ? ಸೋಂಕು ವ್ಯಾಪಕವಾಗಿ ಹರಡಿದೆ, ಒಂದು ದಿನ ಲಾಕ್‍ಡೌನ್ ಮಾಡಿದರೆ ಪ್ರಯೋಜನಾ ಇಲ್ಲ, ಕಂಪ್ಲೀಟ್ ಲಾಕ್‍ಡೌನ್ ಮಾಡಿ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಮೊದಲು ಲಾಕ್‍ಡೌನ್ ಮಾಡುವಾಗ ನೋಟ್ ಬ್ಯಾನ್ ಮಾಡಿದಂತೆ ಏಕಾಏಕಿ ಮಾಡಿದರು. ಆದರೆ ಸಣ್ಣ ದೇಶ ಸಿಂಗಪೂರ್ ನಲ್ಲಿ ನೋಟಿಸ್ ಕೊಟ್ಟು ಎಚ್ಚರಿಸಿ ಆ ಬಳಿಕ ಲಾಕ್‍ಡೌನ್ ಮಾಡಿದರು.

ಈಗ ಸೋಂಕು ಹೆಚ್ಚಾಗಿದ್ದು, ಹಳ್ಳಿಗಳಲ್ಲಿ ಜನ ಮಾಸ್ಕ್ ಹಾಕೋದನ್ನೇ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಿದೆ. ನಗರದಿಂದ ಈಗ ಕೊರೊನಾ ಹಳ್ಳಿಗಳಿಗೆ ತಲುಪಿದೆ. ಆದರೆ ಈಗ ಮತ್ತೆ ಲಾಕ್ ಡೌನ್ ವಿಚಾರವಾಗಿ ಚರ್ಚೆಯ ಅಗತ್ಯವಿದೆ. ಹಳ್ಳಿಗಳನ್ನು ಲಾಕ್‍ಡೌನ್ ಮಾಡಬೇಕಾ ಅಥವಾ ಹೆಚ್ಚು ಜನಸಾಂದ್ರತೆ ಇರುವ ಕಡೆ ಲಾಕ್‍ಡೌನ್ ಮಾಡಬೇಕಾ ಎಂಬ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದರು.

Facebook Comments

Sri Raghav

Admin