ಬಿಗ್ ಬ್ರೇಕಿಂಗ್ : ಜುಲೈ 6ರಿಂದ ರಾಜ್ಯಾದ್ಯಂತ ಮತ್ತೆ 12 ದಿನ ಲಾಕ್‍ಡೌನ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.30-ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುಲು ಮುಂದಾಗಿದ್ದು, ಜುಲೈ 6ರಿಂದ ಮತ್ತೆ ಲಾಕ್‍ಡೌನ್ ಜಾರಿಗೆ ಬರಲಿದೆ.

ಕೊರೊನಾ ಸೋಂಕು ಪ್ರಕರಣಗಳು ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಲಾಕ್‍ಡೌನ್‍ನ್ನು ಮತ್ತಷ್ಟು ಬಿಗಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಜುಲೈ 6ರಿಂದ ರಾಜ್ಯಾದ್ಯಂತ ಮತ್ತೆ 12 ದಿನಗಳ ಕಾಲ ಲಾಕ್‍ಡೌನ್ ಜಾರಿಗೆ ತರಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಎರಡೂ ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೇ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸೋಂಕು ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ತಜ್ಞರು ವರದಿ ನೀಡಿದ್ದು, ಸಿಎಂ ಒಪ್ಪಿದ್ದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ಬಳಿಕ ರಾಜ್ಯದಲ್ಲಿ ಮತ್ತೆ ಜುಲೈ 6ರಿಂದ ಲಾಕ್‍ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ.

ಈಗಾಗಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರುವ ಮಹಾರಾಷ್ಟ್ರ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಅಂದರೆ ಮತ್ತೆ ಒಂದು ತಿಂಗಳ ಕಾಲ ಲಾಕ್‍ಡೌನ್ ಮುಂದುವರಿಕೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿವೆ.

ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್‍ಡೌನ್ ಜಾರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನು ಮುಂದೆ ಸರ್ಕಾರ ಕೆಲವು ಕಠಿಣ ನಿಬಂಧನೆಗಳನ್ನು ಜಾರಿ ಮಾಡಲು ಮುಂದಾಗಿದೆ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಿಂದ ಹೊರ ಹೋಗುವವರು ಹಾಗೂ ಬರುವವರಿಗೆ ನಿಬಂಧನೆಗಳನ್ನು ಜಾರಿ ಮಾಡಲಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಹೊರ ಹೋಗುವವರು ಇಲ್ಲವೇ ನಗರಕ್ಕೆ ಆಗಮಿಸುವವರು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಗಾಗಬೇಕೆಂಬ ನಿಯಮ ಜಾರಿಗೆ ಬರಲಿದೆ. ಹೊರಗಿನಿಂದ ಬಂದವರಿಂದಲೇ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹೋಂ ಕ್ವಾರಂಟೈನ್ ಜಾರಿ ಮಾಡುವುದು ಅನಿವಾರ್ಯವಾಗಿದೆ. ಜತೆಗೆ ಇನ್ನು ಮುಂದೆ ಅಂತರ್ ಜಿಲ್ಲಾ ಪ್ರವಾಸಕ್ಕೂ ಕಡಿವಾಣ ಬೀಳಲಿದೆ.

ಅಂತರ್ ಜಿಲ್ಲಾ ಪ್ರವಾಸಕ್ಕೆ ಅನುಮತಿ ನೀಡಿದ್ದರಿಂದಲೇ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಬೆಳೆಸಿದ ಕಾರಣ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಇದನ್ನು ತಡೆಗಟ್ಟಲು ಅಂತರ್ ಜಿಲ್ಲಾ ಪ್ರವಾಸಕ್ಕೆ ಕಡಿವಾಣ ಹಾಕುವಂತೆ ಸಮಿತಿ ಸಲಹೆ ಕೊಟ್ಟಿದೆ.

ಒಂದು ಮೂಲದ ಪ್ರಕಾರ ಜು.5ರ ನಂತರ ವಾರದ ಎರಡು ದಿನ ಅಗತ್ಯ ಸೇವೆ, ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ರಾಜ್ಯದಲ್ಲಿ ಕಠಿಣ ಲಾಕ್‍ಡೌನ್ ಜಾರಿ ಮಾಡಲು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದು, ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಭೂತ ಎದುರಾಗಲಿದೆ.

ಸ್ಮಾರ್ಟ್ ಲಾಕ್‍ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಐಟಿ – ಬಿಟಿಯವರಿಗೆ ಶೇ.50ರಷ್ಟು ಕೆಲಸ ಮಾಡಲು ಅವಕಾಶ ದೊರೆಯಲಿದೆ. ಕೋರೋನಾ ಪೀಡಿತ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುವ ಬಗ್ಗೆ ಚರ್ಚೆ ನಡೆದಿದೆ.

ರೆಡ್, ಆರೆಂಜ್ ಮತ್ತು ಗ್ರೀನ್ ವಿಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ. ರೆಡ್ ಜೋನ್ ನಲ್ಲಿ ಭದ್ರತೆಯನ್ನು ಕಠಿಣ ನಿಯಮಗಳನ್ನು ಹೇರಲಾಗುತ್ತದೆ. ಆದರೆ ಆರೆಂಜ್ ಜೋನ್ ನಲ್ಲಿ ಸೋಂಕಿತ ಪ್ರಕರಣ ಇರುವ ಕಡೆ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.

ಗ್ರೀನ್ ಜೋನ್‍ನಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.  ಆಯಾ ಜಿಲ್ಲೆಗಳು ಹಾಗೂ ಪ್ರದೇಶಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗುತ್ತದೆ. ವ್ಯಾಪಾರ ವಹಿವಾಟು, ಅಂಗಡಿ ಮುಗ್ಗಟ್ಟು ತೆರಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಉದ್ಯೋಗ ತೆರೆಯುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಸಿಗಲಿದೆ.

ರಾಷ್ಟ್ರೀಯ ಗ್ರಾಮೀಣ ಮಹಾತ್ಮ ಗಾಂಧಿ ಯೋಜನೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಸಿಗಲಿದ್ದು, ಗ್ರಾಮೀಣ ಭಾಗದವರಿಗೆ ಕೆಲಸ ಕೊಡಲು ಅವಕಾಶ ಮಾಡಲಾಗುತ್ತದೆ. ಎಲ್ಲೆಲ್ಲಿ ಕೊರೋನಾ ಪ್ರಕರಣ ಜಾಸ್ತಿ ಇವೆಯೋ ಅಲ್ಲಲ್ಲಿ ಬಿಗಿ ಕ್ರಮ ಕೈಗೊಂಡು, ಕೊರೋನಾ ಕಡಿಮೆ ಇರುವ ಕಡೆ ಲಾಕ್‍ಡೌನ್ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.

ಈ ಮೂಲಕ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲಗಳಿಗೆ ಕ್ರೋಢೀಕರಣಕ್ಕೆ ಮರು ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ. ತಜ್ಞರ ಸಮಿತಿಯಲ್ಲಿರುವ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ, ಜಯ ದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಹಾಗೂ ಇತರರನ್ನೊಳಗೊಂಡ ತಜ್ಞರ ಸಮಿತಿ ರಾಜ್ಯದಲ್ಲಿ ಸೋಂಕು ತಡೆಗಟ್ಟಬೇಕಾದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಸಲಹೆ ನೀಡಿದ್ದಾರೆ.

Facebook Comments