ಜನರ ಜೀವನವನ್ನು ಹೈರಾಣು ಮಾಡಿದ ಲಾಕ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.14- ರಾಜ್ಯ ಸರ್ಕಾರ ಬೆಂಗಳೂರು ಮತ್ತು ಇತರ ಕೆಲವು ಜಿಲ್ಲೆಗಳಲ್ಲಿಗಳಲ್ಲಿ ಜಾರಿಗೊಳಿಸಿರುವ ಲಾಕ್‍ಡೌನ್ ಮತ್ತೆ ಜನಜೀವನವನ್ನು ಹೈರಾಣು ಮಾಡಿದೆ.

ಒಂದೆಡೆ ಸರ್ಕಾರ ಜನ ಹೊರಗಡೆ ಓಡಾಡಬಾರದು ಎಂದು ಕಟ್ಟಪ್ಪಣೆ ಮಾಡಿದೆ. ಮತ್ತೊಂದೆಡೆ ಖಾಸಗಿ ಕಂಪೆನಿಗಳು, ಸರ್ಕಾರಿ ಕಚೇರಿಗಳು ಕರ್ತವ್ಯ ನಿರ್ವಹಿಸುತ್ತಿವೆ. ಕಚೇರಿಗೆ ಮತ್ತು ಕೆಲಸಕ್ಕೆ ಹೋಗಬೇಕಾದವರು ಲಾಕ್‍ಡೌನ್ ನಿಯಮಾವಳಿಗಳಿಂದ ತತ್ತರಿಸಿ ಹೋಗಿದ್ಧಾರೆ.

ಲಾಕ್‍ಡೌನ್ ಘೋಷಣೆ ಮಾಡಿರುವ ಸರ್ಕಾರ ತನ್ನ ಕಚೇರಿಗಳಿಗೆ ರಜೆ ವಿಷಯವಾಗಿ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲ. ಮೇಲಾಧಿಕಾರಿಗಳು ಶೇ.50ರಷ್ಟು ಸಿಬ್ಬಂದಿಗಳು ದಿನ ಬಿಟ್ಟು ದಿನ ರೋಸ್ಟರ್ ಪದ್ಧತಿ ಮೇಲೆ ಕಚೇರಿಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.

ಅಗತ್ಯ ಸೇವೆಗಳ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ಇದೆ. ಉಳಿದವರು ಓಡಾಡುವಂತಿಲ್ಲ ಎಂದು ಹೇಳುವ ಮೂಲಕ ಪೊಲೀಸರು ಮೊದಲ ದಿನದ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.

ನಾಳೆ ಮತ್ತೆ ಓಡಾಡಿದರೆ ವಾಹನ ಜಪ್ತಿ ಮಾಡುತ್ತೇವೆ. ಪ್ರಕೃತಿ ವಿಕೋಪ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ. ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಸರ್ಕಾರಿ ನೌಕರರ ಸ್ಥಿತಿ.

ಇದು ಸರ್ಕಾರಿ ನೌಕರರ ಕತೆಯಾದರೆ, ಖಾಸಗಿ ವಲಯದಲ್ಲೂ ಸಿಬ್ಬಂದಿ ಮತ್ತು ಕಾರ್ಮಿಕರ ಪಾಡು ಇನ್ನಷ್ಟು ಅದ್ವಾನವಾಗಿದೆ. ಬಹಳಷ್ಟು ಉದ್ಯಮಗಳು, ಕಚೇರಿಗಳು, ವ್ಯಾಪಾರ, ವಹಿವಾಟುಗಳು ಬಾಗಿಲು ಮುಚ್ಚದೆ ಚಾಲ್ತಿಯಲ್ಲಿವೆ.

ಈ ಮೊದಲಿನ ಲಾಕ್‍ಡೌನ್ ವೇಳೆಯಲ್ಲಿ ಉಂಟಾದ ನಷ್ಟದಿಂದ ಮತ್ತು ಕೊರೊನಾ ಸೋಂಕಿನ ಭಯದಿಂದ ವ್ಯಾಪಾರೋದ್ಯಮ ನೆಲ ಕಚ್ಚಿತ್ತು. ಇತ್ತೀಚೆಗೆ ಸ್ವಲ್ಪ ಚೇತರಿಕೆ ಕಾಣುವ ಹಂತದಲ್ಲಿ ಮತ್ತೆ ಲಾಕ್‍ಡೌನ್ ಮಾಡಲಾಗಿದೆ. ಸಿಬ್ಬಂದಿಗಳಿಗೆ ವೇತನ ನೀಡದಿದ್ದರೆ ಅವರ ಜೀವನ ನಿರ್ವಹಣೆ ಕಷ್ಟವಾಗುತ್ತದೆ, ಕೆಲಸ ಬಿಟ್ಟು ಊರಿಗೆ ಹೋಗುತ್ತಾರೆ.

ಮುಂದೆ ತಮ್ಮ ಉದ್ಯಮ ನಡೆಸಲು ಮಾನವಸಂಪನ್ಮೂಲದ ಕೊರತೆಯಾಗಲಿದೆ. ಹಾಗಂತ ವೇತನ ಕೊಡಲು ಮಾಲೀಕರಲ್ಲೂ ಹಣವಿಲ್ಲ. ದುಡಿಮೆ ಇಲ್ಲ, ಆದಾಯ ಇಲ್ಲ.

ಹರಸಾಹಸ ಪಟ್ಟರು ಆರರ ಜಾಗದಲ್ಲಿ ಮೂರರಷ್ಟು ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಅಂತಹ ಸಂದರ್ಭದಲ್ಲಿ ಹೇಗೋ ಎಣಗಾಡುತ್ತಿದ್ದಾಗಲೇ ಮತ್ತೆ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ.

ಇದು ಖಾಸಗಿ ವಲಯದ ಅಸಹನೆಗೆ ಕಾರಣವಾಗಿದ್ದು, ಸರ್ಕಾರದ ನಿರ್ಧಾರಕ್ಕೆ ಸಡ್ಡು ಹೊಡೆಯುವಂತೆ ತಮ್ಮ ವಹಿವಾಟು ಮತ್ತು ಕಚೇರಿಗಳನ್ನು ತೆರೆದಿದ್ದಾರೆ. ಕಚೇರಿ ತೆರೆದಿರುವುದರಿಂದಹೋಗಲೇಬೇಕಾದ ಅನಿರ್ವಾಯತೆ ಸಿಬ್ಬಂದಿಗಳದು.

ಆದರೆ ರಸ್ತೆಯಲ್ಲಿ ನಿಂತ ಪೊಲೀಸರು ಸರ್ಕಾರದ ಆದೇಶ ಪಾಲಿಸುತ್ತಿದ್ದಾರೆ, ಓಡಾಟಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಇದೆ.

ಅನಂತರ ವಾಹನ ಜಪ್ತಿ ಮಾಡುತ್ತಿದ್ದೇವೆ ಎಂದು ಹೇಳಿದಾಗ ವಾಹನ ಸವಾರರು ಪೆÇಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದರು.
ಬೆಂಗಳೂರಿನ ಬಹುತೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಎತ್ತಲಿಂದ ಎತ್ತ ಹೋದರು ಮುಂದೆ ರಸ್ತೆ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ರಸ್ತೆ ಮುಚ್ಚಿದ್ದ ಬ್ಯಾರಿಕೇಡ್‍ಗಳನ್ನು ತೆಗೆದು ಹೋಗಲು ಸವಾರರು ಪ್ರಯತ್ನಿಸಿದಾಗ ವಾಗ್ವಾದಗಳಾದವು.

ಸರ್ಕಾರದಲ್ಲಿ ಅನುಭವದ ಕೊರತೆಯಿಂದಾಗಿ ಲಾಕ್‍ಡೌನ್ ಅವಗಡಗಳು ವಿಪರೀತವಾಗುತ್ತಿವೆ. ದಿನೇ ದಿನೇ ಲಾಕ್‍ಡೌನ್ ಕಠಿಣಗೊಳ್ಳಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಉದ್ಯಮದಲ್ಲಿ ಸುಮಾರು 5 ಸಾವಿರ ಕೋಟಿ ನಷ್ಟವಾಗಲಿದೆ, ಹಾಗಾಗಿ ಲಾಕ್‍ಡೌನ್ ಬೇಕಿಲ್ಲ ಎಂದು ಕೈಗಾರಿಕೋದ್ಯಮಿಗಳು ವಾದಿಸುತ್ತಿದ್ದಾರೆ.

ಈ ಜಂಜಾಟದಲ್ಲಿ ಜನ ಹೈರಾಣಾಗಿದ್ದು, ಕೊರೊನಾ ಸೋಂಕಿಗಿಂತಲೂ ಸರ್ಕಾರದ ಅವೈಜ್ಞಾನಿಕ ನಿಯಮಗಳಿಂದಲೇ ಹೆಚ್ಚು ಪೀಡಿತವಾದಂತಿದೆ.

Facebook Comments

Sri Raghav

Admin