ಕೊರೊನಾಗೆ ಮೊದಲ ಬಲಿಯಾದ ಕಲಬುರ್ಗಿಯಲ್ಲಿ ಕಟ್ಟೆಚ್ಚರ, ಶರಣ ಬಸವೇಶ್ವರ ಜಾತ್ರೆ ಮುಂದೂಡಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರ್ಗಿ, ಮಾ.13- ಕೊರೊನಾ ವೈರಸ್‍ನಿಂದ ವೃದ್ದನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಕಲಬುರ್ಗಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇವರು ವಾಸಿಸುತ್ತಿದ್ದ ಬಡಾವಣೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ .ಕಲಬುರ್ಗಿಯಲ್ಲಿ ಇಂದಿನಿಂದ ಪ್ರಾರಂಭವಾಗಬೇಕಾಗಿದ್ದ ಶರಣ ಬಸವೇಶ್ವರ ಜಾತ್ರೆಯನ್ನು ಮುಂದೂಡಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ.

ವೃದ್ಧರೊಬ್ಬರು ಕೊರೊನಾ ವೈರಸ್‍ನಿಂದ ಮೃತಪಟ್ಟಿರುವ ಸುದ್ದಿ ನಿನ್ನೆ ರಾತ್ರಿ ದೃಢಪಡುತ್ತಿದ್ದಂತೆ ಇತ್ತ ಕಲಬುರ್ಗಿಯಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿಯಿಂದಲೇ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಜಿಲ್ಲಾಧಿಕಾರಿ ಬಿ.ಶರತ್ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಚೆಕ್‍ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.

ಇಂದಿನಿಂದ ನಡೆಯುತ್ತಿದ್ದ ಜಾತ್ರೆಯನ್ನು ರದ್ದುಪಡಿಸಿದ್ದು, ಜಾತ್ರೆಗೆ ಬರುತ್ತಿದ್ದ ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.ಕಲಬುರ್ಗಿ ಇಎಸ್‍ಐ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣೆಗೆಂದು 200 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. 50 ಬೆಡ್‍ಗಳ ಐಸೋಲೇಶನ್ ಘಟಕ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪತ್ತೆಯಾದ ಕೂಡಲೇ ಸಮರೋಪಾದಿಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು. ಕೊರೊನಾ ವೈರಸ್‍ನಿಂದ ಸಾವು ಸಂಭವಿಸಿದರೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದೆ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡದೆ ನಿರ್ಲಕ್ಷ್ಯ ವಹಸಿದೆ ಎಂದು ಸಾರ್ವಜನಿಕರು ಆರೋಪ ಮಾಡಿರುವುದರ ಬಗ್ಗೆ ಪತ್ರಕರ್ತರು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮರೋಪಾದಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಆರೋಗ್ಯ, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಜನರು ಆತಂಕಕ್ಕೊಳಗಾಗುವುದು ಬೇಡ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಗುಂಪು-ಗುಂಪಾಗಿ ಸೇರುವುದು, ಜಾತ್ರೆಗಳಲ್ಲಿ ಭಾಗವಹಿಸುವುದನ್ನು ನಿಯಂತ್ರಿಸಬೇಕು ಎಂದು ಹೇಳಿದರು.

# ಮಣಿಪಾಲ್ ಆಸ್ಪತ್ರೆಗೆ ಇಬ್ಬರು ವಿದ್ಯಾರ್ಥಿಗಳು ದಾಖಲು:
ಅಮೆರಿಕ ಮತ್ತು ಕುವೈತ್‍ನಿಂದ ಬಂದ ಇಬ್ಬರು ವಿದ್ಯಾರ್ಥಿಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಪಾಸಣೆಗೆ ಒಳಪಡಿಸಲಾಗಿದೆ.

# ವಿಜಯಪುರದಲ್ಲಿ ಐವರಿಗೆ ಕೊರೊನಾ ಶಂಕೆ:
ವಿಜಯಪುರದಲ್ಲಿ ಐವರಿಗೆ ಕೊರೊನಾ ವೈರಸ್ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ರಕ್ತ ಮತ್ತು ಗಂಟಲು ತೇವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಇಬ್ಬರ ಪರೀಕ್ಷೆ ನೆಗೆಟೀವ್ ಬಂದಿದೆ. ಇನ್ನು ಮೂವರ ವರದಿ ಬರಬೇಕಾಗಿದೆ.

Facebook Comments

Sri Raghav

Admin