ಕೂಡಲೇ ನೇಕಾರ ಅಭಿವೃದ್ಧಿ ನಿಗಮ ರಚನೆ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ರಾಜ್ಯದ ನೇಕಾರರ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಈ ಕೂಡಲೇ ನೇಕಾರ ಅಭಿವೃದ್ಧಿ ನಿಗಮ ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಗುರು ಪೀಠಗಳ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ. ಮಾಜಿ ಉಪ ಮಹಾಪೌರ ಎಸ್.ಹರೀಶ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾ ಸ್ವಾಮೀಜಿ, ದಿವ್ಯ ಜ್ಞಾನಾನಂದಗಿರಿ ಮಹಾ ಸ್ವಾಮೀಜಿ ಹಾಗೂ ಪ್ರಭು ಲಿಂಗ ಮಹಾ ಸ್ವಾಮಿ ನೇತೃತ್ವದ ಗುರು ಪೀಠ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ನೇಕಾರ ಸಮುದಾಯವಿದೆ. ಇತ್ತೀಚೆಗೆ ನೇಕಾರಿಕೆ ಕುಸಿಯುತ್ತಿದ್ದು , ಸಾಂಪ್ರದಾಯಿಕ ನೇಕಾರಿಕೆ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಈ ಸಮುದಾಯದ ಅಭಿವೃದ್ಧಿಗೆ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ 3 ಕೋಟಿ ಅನುದಾನ ಮೀಸಲಿಡಬೇಕು ಎಂದು ವೇದಿಕೆ ಮನವಿ ಮಾಡಿಕೊಂಡಿತು.

ಕೈ ಮಗ್ಗ ಅಭಿವೃದ್ಧಿ ನಿಗಮ , ಕರ್ನಾಟಕ ಜವಳಿ ನಿಗಮ ಮತ್ತು ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮಗಳ ಅಧ್ಯಕ್ಷ ಸ್ಥಾನವನ್ನು ನೇಕಾರ ಸಮುದಾಯದವರಿಗೆ ಮೀಸಲಿಡಬೇಕು ಎಂದು ಶ್ರೀಗಳು ಮನವಿ ಮಾಡಿಕೊಂಡರು.

ಕೊರೊನಾ ಸೋಂಕಿನ ಸಂದರ್ಭದಲ್ಲಿ ನೇಕಾರರು ಉತ್ಪಾದಿಸಿದ ಉತ್ಪನ್ನಗಳು ಮಾರಾಟವಾಗದೆ ಸಾಲದ ಶೂಲಕ್ಕೆ ಸಿಲುಕಿ ಹಲವಾರು ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ನೇಕಾರರು ಉತ್ಪಾದಿಸಿದ ಉತ್ಪನ್ನಗಳನ್ನು ಖರೀದಿಸುವ ಭರವಸೆ ನೀಡಿತ್ತು.

ಆದರೆ ಇದುವರೆಗೂ ತಮ್ಮ ಬೇಡಿಕೆ ಈಡೇರಲಿಲ್ಲ. ಹೀಗಾಗಿ ನೇಕಾರ ಸಮುದಾಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಬೇಡಿಕೆ ಈಡೇರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments