ಲೋಕಸಭೆಯಲ್ಲೂ ಪ್ರತಿಧ್ವನಿಸಿದ ರಾಜ್ಯ ರಾಜಕೀಯ ಹೈಡ್ರಾಮಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.8- ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಲೋಕಸಭೆಯಲ್ಲಿಂದು ಪ್ರತಿಧ್ವನಿಸಿತು. ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್‍ರಂಜನ್ ಚೌಧರಿ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸಮ್ಮಿಶ್ರ ಸರ್ಕಾರವನ್ನು ದುರ್ಬಲಗೊಳಿಸಲು ಬಿಜೆಪಿ ಕುತಂತ್ರ ನಡೆಸಿದೆ ಎಂದು ಆರೋಪಿಸಿದರು.

ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಕಾಂಗ್ರೆಸ್ ಮತ್ತು ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು.
ಸಭಾಧ್ಯಕ್ಷ ಓಂ ಬಿರ್ಲಾ ಪರಿಸ್ಥಿತಿ ತಿಳಿಗೊಳಿಸಿ ಈ ಬಗ್ಗೆ ಚರ್ಚಿಸಲು ನಂತರ ಅವಕಾಶ ನೀಡುವುದಾಗಿ ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದ್ದು, ಇದಕ್ಕೆ ಬಿಜೆಪಿ ಕೇಂದ್ರ ನಾಯಕರ ಕುಮ್ಮಕ್ಕು ಇದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಯಾವುದೇ ರೀತಿಯ ಕುದುರೆ ವ್ಯಾಪಾರದಲ್ಲಿ ನಿರತವಾಗಿಲ್ಲ ಎಂದು ಸ್ಪಷ್ಟಪಡಿಸಿದ ರಾಜನಾಥ್ ಸಿಂಗ್, ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ರುಚಿ ತೋರಿಸಿದವರು ರಾಹುಲ್ ಗಾಂಧಿ ಎಂದು ಲೇವಡಿ ಮಾಡಿದರು.

Facebook Comments