ಕರ್ನಾಟಕ ರಾಜಕೀಯ ಬೃಹನ್ನಾಟಕ ( Live Updates )

ಈ ಸುದ್ದಿಯನ್ನು ಶೇರ್ ಮಾಡಿ

 

ಬೆಂಗಳೂರು. ಜು. 10ರಾಜೀನಾಮೆ ನೀಡಿರುವ ಶಾಸಕರ ಪತ್ರವನ್ನು ಕೂಡಲೇ ಅಂಗೀಕರಿಸಲು ಸಾಧ್ಯವಿಲ್ಲ.
ಕಾನೂನು ಬದ್ದವಾಗಿಯೇ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ಪತನದ ಭೀತಿಯಲ್ಲಿದ್ದ ದೋಸ್ತಿ ಸರ್ಕಾರಕ್ಕೆ ವಿಧಾನಸಭೆಯ ಸ್ಪೀಕರ್ ಜೀವಧಾನ ನೀಡಿದ್ದಾರೆ. ಸ್ಪೀಕರ್ ಅವರ ತೀರ್ಮಾನದಿಂದ ಅತೃಪ್ತ ಶಾಸಕರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ.

ಜನರ ಭಾವನೆಗಳನ್ನು ಪರಿಗಣಿಸುವುದು ಹಾಗೂ ಕಾನೂನು ಬದ್ದವಾಗಿಯೇ ರಾಜೀನಾಮೆಯನ್ನು ಅಂಗೀಕರಿಸಲು ತೀರ್ಮಾನಿಸಿದ್ದೇನೆ.ಬೇರೆಯವರಿಗೆ ಆತುರವಿರಬಹುದು.ಆದರೆ, ನನಗೆ ಅಂತಹ ತುರ್ತು ಇಲ್ಲ.ನಾನು ಯಾವ ಶಕ್ತಿಗೂ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕರು ನೀಡಿದ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸಿದ್ದು ಅದನ್ನು ಅಂಗೀಕರಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸುಪ್ರೀಂ ಕೋರ್ಟಿನ ಆದೇಶದಂತೆಯೇ ಸಂಜೆ ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿ ಅವರಿಂದ ವಿವರಣೆ ಪಡೆದ ನಂತರ ಸ್ಪೀಕರ್

ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸದಸ್ಯರು ರಾಜೀನಾಮೆ ಸಲ್ಲಿಸುವಾಗ ಕೆಲವು ನಿಯಮಗಳನ್ನುಪಾಲಿಸಬೇಕೆಂದು ನಮೂನೆಗಳಿವೆ. ಆದರೆ 8 ರಾಜೀನಾಮೆಗಳು ಕ್ರಮಬದ್ಧವಾಗಿರಲಿಲ್ಲ. ರಾಜೀನಾಮೆ ಸರಿಯಿದ್ದವರನ್ನು ನಾನು ವಿಚಾರಣೆ ಮಾಡಿ, ಸ್ವಯಂಪ್ರೇರಿತವಾಗಿದೆಯಾ ಎಂದು ನೋಡಬೇಕಾದ ಹೊಣೆ ನನ್ನ ಮೇಲಿದೆ. ನಾನು ವಿಚಾರಣೆ ಮಾಡಿಯೇ ಕ್ರಮ ಕೈಗೊಳ್ಳುತ್ತೇನೆ.

ನಾನು ಸಂವಿಧಾನದ ಆಶಯಗಳ ಹಂಗಿನಲ್ಲಿ ಬದುಕುತ್ತೇನೆ ಎಂದರು. ಉಳಿದ ರಾಜೀನಾಮೆಗಳು ಸಹಜ, ಸ್ವಯಂ ಪ್ರೇರಿತವಾಗಿದೆಯೇ ಎಂಬುದನ್ನು ವಿಚಾರಣೆ ಮಾಡುವುದು ನನ್ನ ಹೊಣೆ. ಜುಲೈ 12 ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶಾಸಕರಿಗೆ ಸಂಜೆಯಿಂದ ಸಂದರ್ಶನಕ್ಕೆ ಅವಕಾಶ ನೀಡಿದ್ದೇನೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಾನು ಯಾರ ಒತ್ತಡಕ್ಕೂ ಮಣಿದು ಶಾಸಕರ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೆಲವರಿಗೆ ತಿರುಗೇಟು ನೀಡಿದರು.

ಪೂರ್ಣ ಪ್ರಮಾಣದಲ್ಲಿ ನಿಯಮಗಳನ್ನು ಪಾಲನೆ ಮಾಡಿ ರಾಜೀನಾಮೆ ಅಂಗೀಕರಿಸುತ್ತೇನೆ. ಶಾಸಕರು ಜು.6ರಂದು ನನ್ನ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಬರುವುದಕ್ಕೂ ಮೊದಲು ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ದರಿಂದ ಅವರು ಬರುವಾಗ ನಾನು ತಪ್ಪಿಸಿಕೊಂಡೆ ಎಂದು ಹಲವರು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರವಿವಾರ ರಜಾದಿನ. ಸೋಮವಾರ ಕಾರಣಾಂತರಗಳಿಂದ ನಾನು ಕಚೇರಿಗೆ ಬಂದಿರಲಿಲ್ಲ. ಮಂಗಳವಾರ ಕಚೇರಿಗೆ ಬಂದು ಪರಿಶೀಲನೆ ನಡೆಸಿದ್ದೆ. ಅದರಂತೆ 8 ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿರಲಿಲ್ಲ ಎಂದು ತಿಳಿಸಿದ್ದೆ ಎಂದು ಮಾಹಿತಿ ನೀಡಿದರು.

ಇಡೀ ಪ್ರಕ್ರಿಯೆ, ಯಾರನ್ನ ಉಳಿಸುವುದು ಅಥವಾ ಕಳಿಸುವುದು ನನ್ನ ಕೆಲಸವಲ್ಲ. ನಾನು ಅದಕ್ಕೆ ಎಂದೂ ಕೈಹಾಕುವುದಿಲ್ಲ. 40 ವರ್ಷದ ಸಾರ್ವಜನಿಕ ಜೀವನದಲ್ಲಿ ಮರ್ಯಾದೆಯಿಂದ ಬದುಕಿದ್ದೇನೆ. ಇಂದು ಬೆಳಗ್ಗೆ ಕೆಲ ಪತ್ರಿಕೆ ನೋಡಿದಾಗ ನನ್ನ ಮನಸ್ಸಿಗೆ ನೋವಾಯ್ತು,” ಎಂದು ತಮ್ಮ ನೋವು ಹೊರ ಹಾಕಿದರು.

“ಸ್ಪೀಕರ್​ ನಿಧಾನ ಮಾಡಿದ್ದರಿಂದ ಅತೃಪ್ತರು ಸುಪ್ರೀಂ ಕೋರ್ಟ್​ಗೆ ಹೋದರು ಎಂದು ಬರೆಯಲಾಗಿತ್ತು. ನನ್ನ ಕಚೇರಿಗೆ ರಾಜೀನಾಮೆ ಪತ್ರ ಬಂದಿದ್ದು 6ನೇ ತಾರೀಖು. ನಾನು ಆ ವೇಳೆ ಬೇರೆಡೆ ಹೋಗಿದ್ದೆ. ಶಾಸಕರು ಯಾರೂ ರಾಜೀನಾಮೆ ಸಲ್ಲಿಸಲು ಬರುತ್ತಿದ್ದೇನೆ ಎಂದು ನನಗೆ ಮೌಖಿಕವಾಗಿ, ಲಿಖಿತವಾಗಿ ಮಾಹಿತಿ ನೀಡಿರಲಿಲ್ಲ. ಅದರ ನಂತರ ಭಾನುವಾರ. ಅಂದು ರಜೆ. ಸೋಮವಾರ ಕಚೇರಿಗೆ ನಾನು ಬರಲು ಸಾಧ್ಯವಾಗಲಿಲ್ಲ,” ಎಂದು ವಿವರಣೆ ನೀಡಿದರು.”

ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಅತೃಪ್ತ ಶಾಸಕರಿಗೆ ತಿಳಿಸಿದ್ದೇನೆ. ರಾಜೀನಾಮೆ ಸ್ವೀಕೃತಿ ಮಾತ್ರ ಆಗಿದೆ. ರಾಜೀನಾಮೆ ಅಂಗೀಕಾರಕ್ಕೆ ಸಮಯ ಬೇಕಿದೆ ಎಂದು ಹೇಳಿದರು. ಕೆಲವು ಪತ್ರಿಕೆಗಳನ್ನು ನೋಡಿ ನನಗೆ ಬೇಸರವಾಗಿದೆ. ಸ್ಪೀಕರ್ ವಿಳಂಬ ಮಾಡಿದ್ದರಿಂದ ಅತೃಪ್ತರು ಸುಪ್ರಿಂ ಕೋರ್ಟ್ ಗೆ ಹೋಗಿದ್ದಾರೆ ಎಂಬುದನ್ನು ನೋಡಿ ನೋವಾಯಿತು.

ಜು.6ಕ್ಕೆ ಶಾಸಕರು ರಾಜೀನಾಮೆ ಸಲ್ಲಿಸಿದರು. ನನ್ನ ಜೊತೆ ಮಾತುಕತೆ ನಡೆಸಲು ಅವರಿಗೆ ಸಮಯವಿಲ್ಲ. ಅವರು ರಾಜ್ಯಪಾಲರ ಬಳಿ ಓಡಿದರು. ಸ್ಪೀಕರ್ ಅವರನ್ನು ಭೇಟಿಯಾಗುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇವರನ್ನು ತಡೆದು ನಿಲ್ಲಿಸಿದ್ಯಾರು. ಅವರು ನನ್ನನ್ನು ಭೇಟಿಯೇ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಕಚೇರಿಗೆ ಬಂದ ನಂತರ, ಕರ್ನಾಟಕ ವಿಧಾನಸಭೆಯ ನಿಯಮಾವಳಿಯನ್ನು ನೋಡಿದೆ. ನಮ್ಮ ಕಚೇರಿಗೆ ತಲುಪಿದ್ದ 13 ರಾಜೀನಾಮೆಗಳಲ್ಲಿ 8 ರಾಜೀನಾಮೆ ಪತ್ರ ವಿಧಾನಸಭೆಯ ನಿಯಮ ನಡಾವಳಿ 202ರ ಪ್ರಕಾರ ಕ್ರಮಬದ್ಧವಾಗಿರಲಿಲ್ಲ. ಉಳಿದ ಐವರ ರಾಜೀನಾಮೆ ಕ್ರಮಬದ್ಧವಾಗಿದ್ದವು. ಸಂವಿಧಾನದ 190ರ ಪ್ರಕಾರ, ನಾನು ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮನವರಿಕೆ ಮಾಡಿಕೊಳ್ಳುವ ಹೊಣೆ ನನ್ನ ಮೇಲಿದೆ,”
ಎಂದರು.

ನಾನು ಇಂದು ಶಾಸಕ ರಾಜೀನಾಮೆ ಸ್ವೀಕರಿಸಿದ್ದು, ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೆಲವರು ಅಡ್ಡಿ ಪಡಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಈ ಬಗ್ಗೆ ನನಗೆ ಶಾಸಕರು ಮಾಹಿತಿ ನೀಡಿದ್ದರೆ ನಾನು ರಕ್ಷಣೆ ನೀಡುತ್ತಿದೆ.

ಈವರೆಗಿನ ಎಲ್ಲಾ ಮಾಹಿತಿಯನ್ನು ನಾನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದೇನೆ. ಅಲ್ಲದೇ ಇಂದಿನ ಘಟನೆಯ ಬಗ್ಗೆ ಸಂಪೂರ್ಣ ಚಿತ್ರೀಕರಣ ಮಾಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾನು ಕರ್ನಾಟಕ ಜನರಿಗೆ ಮತ್ತು ಸಂವಿಧಾನಕ್ಕೆ ಮಾತ್ರ ಅಧೀನವಾಗಿರುತ್ತೇನೆ ಎಂದರು.

ಯಾವುದೇ ಶಾಸಕರು ನನಗೆ ಫೋನ್​​ ಮಾಡಿ ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿರಲಿಲ್ಲ. ಶಾಸಕರು ನಮ್ಮ ಕಚೇರಿಗೆ ರಾಜೀನಾಮೆ ನೀಡಿದ ಬಳಿಕ ಪರಿಶೀಲಿಸಿದ್ದೇನೆ. 17 ಶಾಸಕರು ನೀಡಿದ್ದ ರಾಜೀನಾಮೆಗಳ ಪೈಕಿ ಕೇವಲ ಐವರದ್ದು ಮಾತ್ರ ಕ್ರಮ ಬದ್ಧವಾಗಿತ್ತು. ಉಳಿದ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ ಎಂದು ಹೇಳಿದರು.

ಇಂದಿನ ರಾಜ್ಯ ರಾಜಕೀಯ ಸ್ಥಿತಿಯಲ್ಲಿ ರಾಜೀನಾಮೆ ಸ್ವಯಂ ಪ್ರೇರಿತವಾ ಅಲ್ಲವಾ ಎಂಬುದನ್ನು ನಿರ್ಧರಿಸುವುದು ಸಾರ್ವಜನಿಕರಿಗೆ ಬಿಡುತ್ತೇನೆ. ಆದರೆ ನನ್ನ ಜವಾಬ್ದಾರಿಗಳ ಪ್ರಕಾರ ನಾನು ತನಿಖೆ ಮಾಡಬೇಕಾಗುತ್ತದೆ. ರಾಜ್ಯದ ಜನರ ಹಂಗಿನ ಮೇಲೆ ನಾನು ಬದುಕುತ್ತೇನೆ, ಸಂವಿಧಾನದ ಆಶಯದ ಮೇಲಿನ ಹಂಗಿನ ಮೇಲೆ ನಾನು ಬದುಕುತ್ತೇನೆ.

ಇದನ್ನು ಹೊರತುಪಡಿಸಿ ಇನ್ಯಾರ ಹಂಗಲ್ಲೂ ನಾನಿಲ್ಲ,” ಎಂದು ತಮ್ಮ ಸ್ವಾಭಿಮಾನ ಮತ್ತು ಸಂವಿಧಾನ ಪರವಾದ ನಿಲುವನ್ನು ಸ್ಪಷ್ಟಪಡಿಸಿದರು.”ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ. ನಾನೇನು ಇನ್ನೂ ನೂರು ವರ್ಷ ಬದುಕುವುದಿಲ್ಲ. ಆದರೆ ನೆಮ್ಮದಿಯ ಸಾವಾದರೂ ಬೇಕು. ಬೆಳಗ್ಗೆ ತಿಂಡಿಗೊಂದು ಪಕ್ಷ, ಮಧ್ಯಾಹ್ನ ಊಟಕ್ಕೊಂದು ಪಕ್ಷ, ರಾತ್ರಿ ಊಟಕ್ಕೆ ಮತ್ತೊಂದು ಪಕ್ಷ ಎಂದರೆ ಎಷ್ಟು ಸರಿ.

ನಾನು ರಾಜೀನಾಮೆ ನೀಡಿದ ಶಾಸಕರಿಗೆ ಕೇಳಲು ಬಯಸುತ್ತೇನೆ? ನಿಮ್ಮ ಸದನದ ಸ್ಪೀಕರ್​ ಅವರನ್ನು ಭೇಟಿ ಮಾಡಲು ಸುಪ್ರೀಂ ಕೋರ್ಟ್​ನ ಅವಶ್ಯಕತೆ ಇತ್ತಾ? ಕರ್ನಾಟಕದಲ್ಲಿರುವವರು ಸಮಯ ನೋಡಿ ಬಂದು ಭೇಟಿ ಆಗುವ ಬದಲು, ಮುಂಬೈಗೆ ಹೋಗಿ ಕೂತು ನಂತರ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದು ಸರಿಯೇ? ನನಗೆ ಮಾಹಿತಿ ನೀಡಿ ಬಂದು ಭೇಟಿ ಮಾಡಬೇಕಿತ್ತು.

ಅವರೇ ಬರದೇ, ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ,” ಎಂದು ಪ್ರಶ್ನೆ ಮಾಡಿದರು.ಇಷ್ಟೆಲ್ಲಾ ಪೊಲೀಸ್​ ಭದ್ರತೆಯಲ್ಲಿ ಬಂದು ರಾಜೀನಾಮೆ ನೀಡಬೇಕಿತ್ತೇ. ಸುಪ್ರೀಂಕೋರ್ಟ್​ನಿಂದ ರಕ್ಷಣೆ ಬಯಸಬೇಕಿತ್ತಾ. ಅವರು ನೇರವಾಗಿ ನನ್ನನ್ನೇ ಬಂದು ಭೇಟಿಯಾಗಿದ್ದರೆ, ನಾನೇ ಅವರ ಬೇಕಾದ ರಕ್ಷಣೆ ಒದಗಿಸುತ್ತಿದ್ದೆ. ಅದನ್ನು ಬಿಟ್ಟು ಇವರು ಮುಂಬೈಗೆ ಹೋಗಿ, ಕುಳಿತು, ಸುಪ್ರೀಂಕೋರ್ಟ್​ ಮೆಟ್ಟಿಲೇರಿದರು ಎಂದು ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು.

ಮುಂದುವರೆದ ಅವರು, “ಸಂವಿಧಾನದ ಕಲಂ 190ರ ಪ್ರಕಾರ ಕ್ರಮಬದ್ಧವಾಗಿ ರಾಜೀನಾಮೆ ಈಗ ನೀಡಿದ್ದಾರೆ, ಅದನ್ನು ಸ್ವೀಕರಿಸಿದ್ದೇನೆ. ಆದರೆ ಈಗಿಂದೀಗಲೇ ರಾಜೀನಾಮೆ ಅಂಗೀಕರಿಸಬೇಕು ಎಂದರೆ ಸಾಧ್ಯವಿಲ್ಲ. ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರ ಎಂಬ ಬಗ್ಗೆ ನಾನು ರಾತ್ರಿಯೆಲ್ಲಾ ಕುಳಿತು ಯೋಚಿಸಬೇಕು.

ಯಾಕೆಂದರೆ ನಾನಿಲ್ಲದ ಹೊತ್ತಲ್ಲಿ ರಾಜೀನಾಮೆ ನೀಡಿ, ಮುಂಬೈಗೆ ಹೋಗಿ, ಪತ್ರಿಕಾಗೋಷ್ಠಿ ಮಾಡಿದ್ದಾರೆ. ಅವರು ಯಾಕೆ ಅಲ್ಲಿಗೆ ಹೋದರು, ಅಲ್ಲೇನು ನಡೆಯಿತು. ಎಲ್ಲವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ತನಿಖೆ ನಡೆಸಿ, ಸಮಾಲೋಚಿಸಿ, ಚಿಂತಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ. ಈ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿಸಿದ್ದೇನೆ. ನಾಳೆ ಎಲ್ಲಾ ದಾಖಲೆಗಳು, ವಿಡಿಯೋವನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸುತ್ತೇನೆ” ಎಂದು ಸ್ಪೀಕರ್​ ರಮೇಶ್​ ಕುಮಾರ್​ ಸ್ಪಷ್ಟಪಡಿಸಿದರು.

ಈಗಾಗಲೇ ಇತಿಹಾಸದಲ್ಲಿ ಹಲವು ಬಾರಿ ಶಾಸಕರು ಮಂತ್ರಿಗಿರಿಗಾಗಿಯೇ ಪಕ್ಷಾಂತರ ಮಾಡಿದ್ದಾರೆ. ಇದಕ್ಕೆ ತಡೆ ನೀಡಲು ರಾಜೀವ್ ಗಾಂಧಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಸ್ವಚ್ಛ ರಾಜಕಾರಣ ದೇಶಕ್ಕೆ ನೀಡಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು ಎಂದು ಕೆಲ ಗಣ್ಯರ ಹೇಳಿಕೆಗಳನ್ನು ಸ್ಪೀಕರ್ ಪ್ರಸ್ತಾಪ ಮಾಡಿದರು. ನನಗೆ 100 ವರ್ಷ ಬದುಕುವ ಆಸೆ ಇಲ್ಲ, ಈಗ 70 ವರ್ಷ ಆಗಿದ್ದು ನೆಮ್ಮದಿಯಿಂದ ಸಾವು ಬಯಸುತ್ತೇನೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆದೇಶ ಪಡೆದು ಸ್ಪೀಕರ್ ಭೇಟಿಗೆ ಆಗಮಿಸಿದ್ದಾರೆ. ಆದರೆ ನನ್ನನ್ನು ಭೇಟಿ ಮಾಡಲು ನ್ಯಾಯಾಲಯದ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸುತ್ತೇನೆ ಸತ್ಯವನ್ನು ವರದಿ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ನಾನು ನಿಯಮಗಳನ್ನು ಪಾಲಿಸದೆ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದರು.

ಶುಕ್ರವಾರದಿಂದ ಅಧಿವೇಶನ ನಡೆಯಲಿದೆ ಹಣಕಾಸು ಮಸೂದೆ ಅಂಗೀಕಾರವಾಗಬೇಕಿದೆ. ಶಾಸಕರಿಗೆ ವಿಪ್ ಜಾರಿಯಾಗಿದೆ ಹೀಗಾಗಿ ಸ್ಪೀಕರ್ ಅವರಿಗೆ ಜವಾಬ್ದಾರಿ ಏನು ಎಂದು ಪ್ರಶ್ನೆ ಕೇಳಿದ್ದಕ್ಕೆ ನಮಗೆ ಯಾವುದೇ ಜವಾಬ್ದಾರಿ ಇಲ್ಲ. ಸರಿಯಾದ ಸಮಯಕ್ಕೆ ಬೆಲ್ ಹೊಡೆಯುವುದು ಅಜೆಂಡಾ ತಯಾರಿಸುವುದು, ಮೃತರಾದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರುವುದು ಅಷ್ಟೇ ಕೆಲಸ ಎಂದು ಉತ್ತರಿಸಿದರು.

ಗುರುವಾರ ಸಂಜೆ 6 ಗಂಟೆಯೊಳಗೆ ಸ್ಪೀಕರ್‍ ಅವರ ಭೇಟಿಗೆ ಸುಪ್ರೀಂ ಕೋರ್ಟು ಆದೇಶ ನೀಡಿದ ಹಿನ್ನೆಲೆಯಲ್ಲಿ 10 ಮಂದಿ ಅತೃಪ್ತ ಶಾಸಕರು ಮುಂಬಯಿನಿಂದ ವಿಶೇಷ ವಿಮಾನದಲ್ಲಿ ಬೆಂಗಳುರಿಗೆ ಧಾವಿಸಿಬಂದು ಕಡೇ ಕ್ಷಣದಲ್ಲಿ ಸ್ಪೀಕರ್ ಕಚೇರಿ ತಲುಪಿದರು.

ವಿಶ್ವನಾಥ್, ಕೆ. ಗೋಪಾಲಯ್ಯ, ನಾರಾಯಣ ಗೌಡ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ಬಿ‌.ಸಿ.ಪಾಟೀಲ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಬಾರೀ ಬಿಗಿ ಭದ್ರತೆಯಲ್ಲಿ ವಿಧಾನ ಸೌಧದ ಸ್ಫೀಕರ್ ಕೊಠಡಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.

# ಅತೃಪ್ತ ಅಚ್ಚು ಶಾಸಕರು ಇಂದು ಎಚ್ಎಎಲ್ ವಿಮಾನ ನಿಲ್ದಾಣದಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ಜೀರೋ ಟ್ರಾಫಿಕ್ನಲ್ಲಿ ವಿಧಾನಸೌಧಕ್ಕೆ ತಲುಪಿದರು

# ಬಿಜೆಪಿ ಶಾಸಕರು ವಿಧಾನ ಸೌಡಕ್ಕೆ ಆಗಮಿಸಿದ ಹಿನ್ನೆಲೆ ಸಭಾಧ್ಯಕ್ಷರ ಹೋಗುವ ಗೇಟ್ ಗೆ ಪೊಲೀಸ್ ರು ಬೀಗ ಜಡಿದರು. ಒಳಗೆ ಬರಲು ಸಾಧ್ಯವೇ ಆಗದೆ ಬಿಜೆಪಿ ಶಾಸಕರು ಹೊರ ನಡೆದರು

# ಶಾಸಕರ ರಾಜೀನಾಮೆಯಿಂದ ಸರ್ಕಾರ ಅಸ್ಥಿರಗೊಳ್ಳುವ ಆತಂಕ ಇದ್ದರೂ ತಲೆ ಕೆಡಿಸಿಕೊಳ್ಳದೆ ಸಚಿವ ಸಂಪುಟ ಸಭೆ ನಂತರ ಲೋಕಾಭಿರಾಮವಾಗಿ ಮಾತನಾಡಿಕೊಂಡು ಬರುತ್ತಿದ್ದ ಸಿಎಂ ಕುಮಾರಸ್ವಾಮಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಕೀಲರ ಕೋಟಿನಲ್ಲಿ ಎದುರಿಗೆ ಬರುತ್ತಿದ್ದಂತೆ ಬಹಳ ಗಂಭೀರವಾಗಿ ಚರ್ಚೆ ನಡೆಸಿದರು. ಸಚಿವ ಡಿ.ಕೆ.ಶಿವಕುಮಾರ್ ಅದೇ ಸಮಯಕ್ಕೆ ಬಂದು ಚರ್ಚೆಯಲ್ಲಿ ಭಾಗವಹಿಸಿದ್ದಲ್ಲದೆ ಸಿಎಂ ಅವರನ್ನು ಪಕ್ಕೆ ಕರೆದುಕೊಂಡು ಹೋಗಿ ರಹಸ್ಯ ಮಾತುಕತೆ ನಡೆಸಿದರು.

ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 10 ಮಂದಿ ಭಿನ್ನಮತೀಯರ ಹಣೆಬರಹವನ್ನು ಇಂದು ಸಂಜೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೀರ್ಮಾನಿಸಲಿದ್ದಾರೆ.

ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಸಲ್ಲಿಸಿರುವ ಶಾಸಕರೆಲ್ಲರೂ ಕರ್ನಾಟಕದ ವಿಧಾನಸಭೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಬೇಕು. ಅವರು ನೀಡಿರುವ ರಾಜೀನಾಮೆ ಪತ್ರದ ಬಗ್ಗೆ ಸ್ಪೀಕರ್ ಇಂದೇ ತೀರ್ಮಾನಿಸಬೇಕು. ಸ್ಪೀಕರ್ ಆದೇಶದ ಬಗ್ಗೆ ನಾವು ನಾಳೆ ತೀರ್ಪು ನೀಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಾಲಯದ ಈ ತೀರ್ಪಿನಿಂದಾಗಿ ಕಳೆದ 5 ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರೆಲ್ಲರೂ ಬೆಂಗಳೂರಿಗೆ ಆಗಮಿಸಲೇಬೇಕಾಗಿದೆ. ಶಾಸಕರು ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಉದ್ದೇಶ ಪೂರ್ವಕವಾಗಿಯೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಭಿನ್ನಮತೀಯ ಶಾಸಕರು ನಿನ್ನೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠ, ಸ್ಪೀಕರ್ ಮುಂದೆ ಎಲ್ಲ ಶಾಸಕರು ಸಂಜೆ 6 ಗಂಟೆಯೊಳಗೆ ಹಾಜರಾಗಬೇಕು. ಅವರ ರಾಜೀನಾಮೆ ಪತ್ರ ಕುರಿತಂತೆ ಇಂದೇ ತೀರ್ಮಾನ ಕೈಗೊಂಡು ಆದೇಶ ನೀಡಿ ಎಂದು ಸೂಚಿಸಿ ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಕಚೇರಿಗೆ ನೋಟಿಸ್ ನೀಡಿತು.

ಭಿನ್ನಮತೀಯ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಕರ್ನಾಟಕದಲ್ಲಿ 10 ಮಂದಿ ಶಾಸಕರು ಖುದ್ದು ಸ್ಪೀಕರ್ ಕಚೇರಿಯನ್ನು ಭೇಟಿಯಾಗಿ ರಾಜೀನಾಮೆ ಪತ್ರ ನೀಡಿದ್ದಾರೆ. ಆದರೆ ಸ್ಪೀಕರ್ ಯಾವ ಕಾರಣಕ್ಕಾಗಿ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಕೂಡಲೇ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಜನಪ್ರತಿನಿಧಿಯೊಬ್ಬರು ಸ್ವಯಂಪ್ರೇರಿತರಾಗಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದರೆ ಅದನ್ನು ಅಂಗೀಕರಿಸಬೇಕಾಗುತ್ತದೆ. ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ನ್ಯಾಯಾಲಯದಿಂದಲೇ ಆದೇಶ ನೀಡಬೇಕೆಂದು ಕೋರಿದರು.

ಶಾಸಕರೊಬ್ಬರು ರಾಜೀನಾಮೆ ನೀಡಿರುವುದನ್ನು ಸ್ವೀಕರಿಸಬೇಕೆ ಇಲ್ಲವೇ ತಿರಸ್ಕಾರ ಮಾಡಬೇಕೆ ಎಂಬುದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು, ಸಂಜೆಯೊಳಗೆ ನಿಮ್ಮ ತೀರ್ಮಾನವನ್ನು ಪ್ರಕಟಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಸರ್ಕಾರದ ಪರ ವಾದ ಮಂಡಿಸಲು ಅಭಿಷೇಕ್ ಮನುಸಿಂಘ್ವಿ ಮುಂದಾದರಾದರೂ ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಕಚೇರಿಗೆ ನೋಟಿಸ್ ಜಾರಿ ಮಾಡಿ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

ಕಳೆದ ಶನಿವಾರ ಕಾಂಗ್ರೆಸ್‍ನ 10 ಮಂದಿ, ಜೆಡಿಎಸ್‍ನ ಮೂವರು ಶಾಸಕರು ರಾಜೀನಾಮೆ ನೀಡಿದ್ದರು. ವಿಧಾನಸಭೆಯ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದರು. ಮಂಗಳವಾರ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದ ರಮೇಶ್‍ಕುಮಾರ್, ಶಾಸಕರಾದ ಆನಂದ್‍ಸಿಂಗ್, ಪ್ರತಾಪ್‍ಗೌಡ ಪಾಟೀಲ, ನಾರಾಯಣಗೌಡ, ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರ ಪತ್ರಗಳನ್ನು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದರು.

ಎಚ್.ವಿಶ್ವನಾಥ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಭೈರತಿ ಬಸವರಾಜ್, ಮುನಿರತ್ನ, ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಮತ್ತು ರೋಷನ್‍ಬೇಗ್ ಅವರ ರಾಜೀನಾಮೆ ಪತ್ರಗಳು ಕಾನೂನು ಬದ್ಧವಾಗಿಲ್ಲ ಎಂದು ತಿರಸ್ಕರಿಸಿ ಮತ್ತೊಮ್ಮೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

# ಅತೃಪ್ತ ಶಾಸಕರ ದೂರು ಏನು?
ಜುಲೈ 6ರಂದು 13 ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇದರಲ್ಲಿ ಎಂಟು ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ, ಐವರ ಶಾಸಕರ ಪತ್ರಗಳು ಕ್ರಮಬದ್ಧವಾಗಿದೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ತಿಳಿಸಿದ್ದಾರೆ.

ಜುಲೈ 12ರಂದು ವಿಚಾರಣೆಗೆ ಹಾಜರಾಗಬೇಕೆಂದು ಐವರಲ್ಲಿ ಮೂವರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ಸ್ವೀಕರ್ ಅವರಿಗೆ ಅರ್ಜಿ ಸಲ್ಲಿಸಿದ್ದರು.

ನಮ್ಮ ರಾಜೀನಾಮೆ ಅಂಗೀಕಾರವಾಗದೆ ಇರುವುದು ಸಂವಿಧಾನದ 14ನೇ ಪರಿಚ್ಚೇದದ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಕರ್ನಾಟಕ ವಿಧಾನಸಭಾ ನಿಯಮಾವಳಿಯ ರೂಲ್ ನಂಬರ್ 202 ಪ್ರಕಾರ ರಾಜೀನಾಮೆ ಪತ್ರ ಸಲ್ಲಿಸಿದೇವೆ.

ಪರಿಚ್ಛೇಧ 190 ರ ಪ್ರಕಾರ ರಾಜೀನಾಮೆ ಪತ್ರದಲ್ಲಿ ಕೇವಲ ಸಹಿ ಇದ್ದರೆ ಸಾಕು. ರಾಜೀನಾಮೆ ಪತ್ರ ಹೀಗೆ ಇರಬೇಕು ಎಂಬ ಕಾನೂನು ಇಲ್ಲ ಎಂದು ಅತೃಪ್ತರು ತಮ್ಮ ನಿರ್ಧಾರವನು ಸಮರ್ಥಿಸಿಕೊಂಡಿದ್ದರು.

# ಸ್ಪೀಕರ್ ವಾದವೇನು?:
ಸದನದ ನಡಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಲ್ಲಿಕೆಯಾಗಿರುವ 13 ರಾಜೀನಾಮೆ ಪತ್ರಗಳ ಪೈಕಿ 5 ರಾಜೀನಾಮೆ ಪತ್ರಗಳು ನಿಯಮ ಬದ್ಧವಾಗಿವೆ. ಖುದ್ದು ಹಾಜರಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ನೀಡುವಂತೆ ಶಾಸಕರಿಗೆ ತಿಳುವಳಿಕೆ ಪತ್ರದ ಮೂಲಕ ಸೂಚಿಸಿದ್ದೇನೆ.

ಕ್ರಮಬದ್ಧವಾಗಿ ರಾಜೀನಾಮೆ ನೀಡಿದವರಿಗೆ ವಿಚಾರಣೆಗೆ ಆಗಮಿಸಲು ಸಮಯ ನಿಗದಿಪಡಿಸಿ, ಈ ಎಲ್ಲಾ ಪ್ರಕ್ರಿಯೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದರು. ಸ್ಪೀಕರ್ ಅವರ ಈ ಕ್ರಮಕ್ಕೆ ಅತೃಪ್ತರು ಅಸಮಾಧಾನಗೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Facebook Comments