ಬ್ರೇಕಿಂಗ್ : ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.24- ಜನವರಿ ತಿಂಗಳ ಸಂಕ್ರಾಂತಿ ನಂತರ ರಾಜ್ಯರಾಜ ಕಾರಣದಲ್ಲಿ ಯಾರೂ ನಿರೀಕ್ಷೆ ಮಾಡದ ಭಾರೀ ಬದಲಾವಣೆಯಾಗಲಿದೆ. ಗುಜರಾತ್‍ನಂತೆ ಹೊಸ ನಾಯಕತ್ವ ಮತ್ತು ಸಂಪುಟ ಅಸ್ಥಿತ್ವಕ್ಕೆ ಬರಲಿದೆ ಎಂಬ ವದಂತಿ ಹಬ್ಬಿದೆ. ಗುಜರಾತ್‍ನಲ್ಲಿ ಮುಖ್ಯಮಂತ್ರಿ ವಿಜಯ್‍ರೂಪಾನಿ ಸೇರಿದಂತೆ ಇಡೀ ಸಂಪುಟವನ್ನು ಬದಲಾವಣೆ ಮಾಡಿ ಹೊಸದಾಗಿ ಮುಖ್ಯಮಂತ್ರಿ ಹಾಗೂ ಸಂಪುಟವನ್ನು ರಚಿಸಲಾಯಿತು.

ಇದೀಗ ಜನವರಿ 14ರ ಸಂಕ್ರಾಂತಿನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸಂಭವವಿದ್ದು, ಕೇಂದ್ರ ವರಿಷ್ಟರು ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲಿದ್ದಾರೆ ಎಂಬ ಪುಕಾರು ಹಬ್ಬಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುವುದರಿಂದ ಮುಂದಿನ ತಿಂಗಳು ಅವರು ಆಸ್ಪತ್ರೆಗೆ ದಾಖಲಾಗಲಿದ್ದಾರೆ.

ಇದೇ ಕಾರಣವನ್ನು ಮುಂದಿಟ್ಟುಕೊಂಡಿರುವ ವರಿಷ್ಠರು ನಾಯಕತ್ವ ಹಾಗೂ ಸಂಪುಟವನ್ನು ಬದಲಾಯಿಸಿ ಸಂಘ ಪರಿವಾರದ ಹಿನ್ನೆಲೆಯುಳ್ಳ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಚಿಂತನೆ ನಡೆಸಿದ್ದಾರೆ. 2006ರ ಸಮ್ಮಿಶ್ರ ಸರ್ಕಾರ 2008ರಿಂದ 13 ಹಾಗೂ 2019ರಿಂದ ಈವರೆಗೂ ಅಕಾರ ಅನುಭವಿಸಿರುವ ಹಿರಿಯ ಸಚಿವರಿಗೆ ಕೋಕ್ ನೀಡಿ ಕಿರಿಯರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಈ ಪ್ರಕಾರವಾಗಿ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದಕಾರಜೋಳ, ಮುರುಗೇಶನಿರಾಣಿ , ವಿ.ಸೋಮಣ್ಣ ಸೇರಿದಂತೆ ಸುಮಾರು ಒಂದು ಡಜನ್‍ಗೂ ಅಕ ಸಚಿವರು ಸಂಪುಟದಿಂದ ಗೇಟ್‍ಪಾಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇಲ್ಲದೇ ತಾಳ ಮೇಳ ತಪ್ಪಿದಂತಾಗಿದ್ದು, ಹೆಚ್ಚಾಗಿ ಆರ್‍ಎಸ್‍ಎಸ್ ಹಿನ್ನೆಲೆ, ಕ್ಷೇತ್ರದಲ್ಲಿ ಮತದಾರರ ಜತೆ ಹೊಂದಿರುವ ಸಂಪರ್ಕ, ಪಕ್ಷ ನಿಷ್ಠೆ, ವೈಯಕ್ತಿಕತೆ ಇವೆನ್ನವನ್ನೂ ಗಮನದಲ್ಲಿಟ್ಟುಕೊಂಡು ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ವರಿಷ್ಠರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ವರಿಷ್ಠರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ನೀಡಲು ಸೂಚನೆ ಕೊಟ್ಟರೆ ಉತ್ತರಕಾಂಡ್ ಮತ್ತು ಗುಜರಾತ್‍ನಂತೆ ಹೊಸ ಮುಖ್ಯಮಂತ್ರಿ ಜತೆಗೆ 34 ಮಂದಿ ನೂತನ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಮತ್ತು ಇನ್ನಿತರ ರಾಜ್ಯಗಳ ವಿಧಾನಸಭೆ ಚುನಾವಣೆ ತುಸು ವಿಳಂಬವಾಗುವ ಸಾಧ್ಯತೆ ಇದ್ದು, ಅಷ್ಟರೊಳಗೆ ಕರ್ನಾಟಕದಲ್ಲಿ ಯಾವುದಾದರೊಂದು ಗಟ್ಟಿನಿಲುವು ತೆಗೆದುಕೊಳ್ಳಲು ವರಿಷ್ಠರು ಮುಂದಾಗಿದ್ದಾರೆ.

ಸರ್ಕಾರದ ಮೇಲೆ ಪದೇ ಪದೇ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು, ಬಿಟ್‍ಕಾಯಿನ್, 40ಪರ್ಸೆಂಟ್ ಕಮಿಷನ್ ಇವೆಲ್ಲವನ್ನೂ ಮುಂದಿಟ್ಟುಕೊಂಡು ಹೋದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಕಾರಕ್ಕೆ ಬರುವುದಿಲ್ಲ ಎಂಬ ಚಿಂತೆ ಎದುರಾಗಿದೆ.
ಇವೆಲ್ಲವನ್ನೂ ಅಳೆದು ತೂಗಿರುವ ಸಂಘ ಪರಿವಾರದ ನಾಯಕರು ಪ್ರಬಲ ಸಮುದಾಯದ ಪ್ರಮುಖರಿಗೆ ಸಿಎಂ ಪಟ್ಟ (ರೇಸ್‍ನಲ್ಲಿ ಜಗದೀಶ್ ಶೆಟ್ಟರ್ ಹಾಗೂ ಶೋಭಾ) ಕಟ್ಟಲು ಮುಂದಾಗಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಂಕ್ರಾಂತಿಯ ನಂತರ ಭಾರೀ ಬದಲಾವಣೆಯಾಗುವುದು ಖಚಿತ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರದ ಹಾಲಿ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರುಗಳು ಕೇಳಿ ಬರುತ್ತಿವೆ. ಈ ಹಿಂದೆ ಶೆಟ್ಟರ್ ಒಂದು ಬಾರಿ ಮುಖ್ಯಮಂತ್ರಿ, ವಿಧಾನಸಭೆ ಸಭಾಧ್ಯಕ್ಷ, ಹಲವು ಮುಖ್ಯ ಖಾತೆಗಳನ್ನು ನಿಭಾಯಿಸಿದ್ದಾರೆ. ಜತೆಗೆ ಪಕ್ಷ ನಿಷ್ಠೆ ಹಾಗೂ ಆರ್‍ಎಸ್‍ಎಸ್‍ಗೂ ನಿಷ್ಠೆಯಿಂದಿದ್ದಾರೆ.

ಇನ್ನು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ವಿಚಾರದಲ್ಲೂ ಆರ್‍ಎಸ್‍ಎಸ್ ಹಾಗೂ ಪಕ್ಷ ನಿಷ್ಠೆಯ ಬಗ್ಗೆ ಎರಡು ಮಾತುಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾದ ನಂತರ ಅವರು ಯಾವುದೇ ವಿವಾದ ಮಾಡಿಕೊಳ್ಳುತ್ತಿಲ್ಲ. ತಾವಾಯಿತು ತಮ್ಮ ಇಲಾಖೆ ಆಯಿತು ಎಂಬಂತೆ ರಾಜ್ಯ ರಾಜಕಾರಣಕ್ಕೆ ಬಂದು ಮಧ್ಯ ಮೂಗು ತೋರಿಸುವ ಕೆಲಸ ಮಾಡಿಲ್ಲ.

ಲಿಂಗಾಯಿತ ಸಮುದಾಯದ ಜಗದೀಶ್ ಶೆಟ್ಟರ್, ಒಕ್ಕಲಿಗ ಸಮುದಾಯದ ಶೋಭಾಕರಂದ್ಲಾಜೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಈಗಾಗಲೇ ಬಿಜೆಪಿ ಪಾಳಯದಲ್ಲಿ ಸುದ್ದಿ ಹಬ್ಬಿವೆ.

ಜತೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ಬೆಳಗಾವಿ ಅವೇಶನದಲ್ಲಿ ಕೆಲವು ಸಚಿವರು ಹಾಗೂ ಶಾಸಕರನ್ನು ಪ್ರತ್ಯೆಕವಾಗಿ ಭೇಟಿ ಮಾಡಿ ಮಾತುಕತೆ ನಡೆಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

ನಿಷ್ಕ್ರಿಯ ಹಾಗೂ ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲದಂತೆ ಸಮನ್ವಯತೆ ಸಾಸುವ ಸಂಪುಟ ಅಸ್ಥಿತ್ವಕ್ಕೆ ಬರಲಿದೆ ಎನ್ನಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಸಂಕ್ರಾಂತಿಯ ನಂತರ ನಡೆಯುವ ವಿದ್ಯಮಾನಗಳ ಬಗ್ಗೆ ಅವಲಂಬಿತವಾಗಿವೆ.

Facebook Comments