ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು ವಾರದಿಂದ ಆರ್ಭಟಿಸಿ ಸದ್ಯಕ್ಕೆ ತಣ್ಣಗಾದ ವರುಣ

ಈ ಸುದ್ದಿಯನ್ನು ಶೇರ್ ಮಾಡಿ

kodaku-rain

ಬೆಂಗಳೂರು, ಜೂ.15- ಮಡಿಕೇರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕಳೆದ ವಾರ ನಿರಂತರವಾಗಿ ಸುರಿಯುತ್ತಿದ್ದ ಮಳೆ ನಿನ್ನೆಯಿಂದ ಕೊಂಚ ಬಿಡುವು ಕೊಟ್ಟಿದೆ.ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ ಕಡಿಮೆಯಾಗಿದ್ದು, ಭಾಗಮಂಡಲದಲ್ಲಿ ಪ್ರವಾಹ ಇಳಿಮುಖವಾಗಿದೆ. ಎಲ್ಲ ಕಡೆ ವಾಹನಗಳ ಸಂಚಾರ ಪ್ರಾರಂಭವಾಗಿದೆ. ಹುಣಸೂರು, ಗೋಣಿಕೊಪ್ಪಲು ಹೆದ್ದಾರಿ ಮುಕ್ತವಾಗಿದೆ. ಚಿಕ್ಕಮಗಳೂರಿನಲ್ಲಿ ನಿನ್ನೆ ಸಂಜೆಯಿಂದ ಮಳೆ ಕಡಿಮೆಯಾಗಿದ್ದು, ಜಲಾವೃತಗೊಂಡಿದ್ದ ರಸ್ತೆಗಳಲ್ಲಿ ಎಂದಿನಂತೆ ವಾಹನ ಸಂಚಾರ ಪ್ರಾರಂಭವಾಗಿದೆ.

ಎನ್‍ಆರ್ ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆಗಳಲ್ಲೂ ಮಳೆ ಕಡಿಮೆಯಾಗಿದ್ದು, ಕಾಫಿನಾಡು ಸಹಜ ಸ್ಥಿತಿಯತ್ತ ಬಂದಿದೆ. ತುಂಗ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ ಭಾಗದಲ್ಲಿ ಮುಳುಗಡೆಯಾಗಿದ್ದ ಸೇತುವೆ ಕೂಡ ಸಂಚಾರಕ್ಕೆ ಮುಕ್ತವಾಗಿದೆ. ಗುಡ್ಡಕುಸಿತ, ಮಣ್ಣು ಕುಸಿತದಿಂದ ಸಂಚಾರಕ್ಕೆ ಅಡಚಣೆಯಾಗಿದ್ದ ಚಾರ್ಮುಡಿಘಾಟ್‍ನಲ್ಲಿ ಈಗ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ.
ಚಿತ್ರದುರ್ಗ, ಉತ್ತರ ಕರ್ನಾಟಕ, ಕರಾವಳಿ ಭಾಗಗಳಲ್ಲೂ ಮಳೆ ಬಿಡುವು ಕೊಟ್ಟಿದೆ. ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳನ್ನು ರೈತರು ಬಿರುಸಿನಿಂದ ಪ್ರಾರಂಭಿಸಿದ್ದಾರೆ.

ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿ ಸಂತಸದಲ್ಲಿದ್ದ ರೈತರಿಗೆ ಭಾರೀ ಮಳೆಯಾಗಿದ್ದರಿಂದ ಬೆಳೆ ಎಲ್ಲಿ ಕೈಕೊಡುತ್ತದೋ ಎಂಬ ಆತಂಕವಿತ್ತು. ಈಗ ಮಳೆ ಕೊಂಚ ಬಿಡುವು ಕೊಟ್ಟಿದ್ದರಿಂದ ನಿರಾಳರಾಗಿದ್ದಾರೆ. ಒಂದು ವಾರ ಮಳೆ ಬಿಡುವು ಕೊಟ್ಟು ಮತ್ತೆ ಮಳೆ ಬಂದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ.

Facebook Comments

Sri Raghav

Admin