ಮತ್ತಷ್ಟು ಚುರುಕುಗೊಂಡ ಮುಂಗಾರು, ರಾಜ್ಯದಲ್ಲಿ ಜು.21ರವರೆಗೆ ಮಳೆ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ತುಸು ಬಿಡುವು ಕೊಟ್ಟಿದ್ದ ಮುಂಗಾರು ಮಳೆ, ರಾತ್ರಿಯಿಂದ ಮತ್ತೆ ಚುರುಕುಗೊಂಡಿದ್ದು, ಹಲವೆಡೆ ಧಾರಾಕಾರವಾಗಿ ಸುರಿದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜು.21ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಇಂದು ಕೂಡ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆಯ ನರ್ತನ ಮುಂದುವರೆದಿದ್ದು, ಬಾಗಲಕೋಟೆ, ವಿಜಯಪುರ, ದಾವಣಗೆರೆ, ಕೊಪ್ಪಳ, ಬೀದರ್‍ನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ಕೇರಳದಿಂದ ಮಹಾರಾಷ್ಟ್ರದೆಡೆಗೆ ವೇಗವಾದ ಮೇಳ್ಮೈ ಸುಳಿಗಾಳಿ ಬೀಸುತ್ತಿದೆ. ಇದರ ಪ್ರಭಾವದಿಂದಾಗಿ ರಾಜ್ಯ ಕರಾವಳಿ ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಲಿದೆ. ಜೊತೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಸಾಕಷ್ಟು ಮಳೆಯಾಗಲಿದೆ ಎಂದು ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ದೀರ್ಘಕಾಲದವರೆಗೆ ಮುಂದುವರೆಯಲಿದೆ. ಸದ್ಯ ರಾಜ್ಯದೆಲ್ಲೆಡೆ ಕೃಷಿ ಚಟುವಟಿಕೆ ಚುರುಕಾಗಿದೆ. ಆದರೆ ಮಳೆ ಬಿಡದಂತೆ ನಿರಂತರವಾಗಿ ಸುರಿಯುತ್ತಿದ್ದರೆ ಕೊಳೆ ರೋಗಗಳು ಬರುವ ಆತಂಕವೂ ಎದುರಾಗಿದೆ.

ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಲಬಾಳದಲ್ಲಿ ನದಿ ಉಕ್ಕಿ ಗುಂಡಿಬೈಲ್ ಗ್ರಾಮದ ಹಲವು ಮನೆಗಳು ಜಲಾವೃತವಾಗಿವೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹಾಸನದ ಸಕಲೇಶಪುರ, ಆಲೂರು ಭಾಗದಲ್ಲಿ ಕಾರ್ಮೋಡ ಕವಿದಿದ್ದು, ಆಗಾಗ್ಗೆ ಮಳೆ ಆಗುತ್ತಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ದಾವಣಗೆರೆ ಸಮೀಪದ ಮಾಗಾನಹಳ್ಳಿ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆ- ಹರಪನಹಳ್ಳಿ ಪ್ರಮುಖ ಸಂಪರ್ಕ ಸೇತುವೆ ಇದಾಗಿದ್ದು, ಮಳೆ ಮುಂದುವರಿದರೆ ಈ ಭಾಗದ ಸಂಪರ್ಕ ಸ್ಥಗಿತವಾಗುವ ಭೀತಿ ಎದುರಾಗಿದೆ. ಕಾಡಜ್ಜಿ ಬಳಿ ಇರುವ ಕೆಇಬಿ ಸ್ಟೇಷನ್‍ಗೆ ನೀರು ನುಗ್ಗಿದೆ. ಪರಿಣಾಮ ಕಚೇರಿಯಲ್ಲಿ ಇಬ್ಬರು ಸಿಲುಕಿದ್ದು ಅವರನ್ನು ರಕ್ಷಣೆ ಮಾಡಲಾಗಿದೆ.

ವಿಜಯಪುರ ನಗರದ ಎಲ್‍ಬಿಎಸ್ ಮಾರ್ಕೆಟ್‍ಗೆ ಮಳೆ ನೀರು ನುಗ್ಗಿದೆ. ಪರಿಣಾಮ ಬಟ್ಟೆ, ಪುಸ್ತಕ ಹಾಗೂ ವಿವಿಧ ಅಂಗಡಿಗಳ ಮಾಲೀಕರು ಪರದಾಡುವಂತಾಗಿದೆ. ಮಳೆ ನೀರನ್ನು ಹೊರಹಾಕಲು ಹರಸಾಹಸ ಪಡುವಂತಾಗಿದೆ.ಕೊಪ್ಪಳ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿದ್ದು, ಮೆಳ್ಳಿಕೇರಿಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಭಾರೀ ಮಳೆಗೆ ಮಂಜುನಾಥ್ ಎಂಬವರಿಗೆ ಸೇರಿದ ಮನೆ ನೆಲಸಮವಾಗಿದೆ.

ಬೀದರ್, ಔರಾದ್, ಹುಮ್ನಾಬಾದ್, ಚಿಟ್ಟಗುಪ್ಪ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಜಿಲ್ಲಾ ರಂಗಮಂದಿರ ಜಲಾವೃತವಾಗಿದೆ. ರಂಗಮಂದಿರದಲ್ಲಿ 3 ರಿಂದ 4 ಅಡಿಯಷ್ಟು ನೀರು ನಿಂತಿದೆ. ತಗ್ಗು ಪ್ರದೇಶಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಬಳಿಯ ಕಾರಹಳ್ಳಿ ಕ್ರಾಸ್ ನಲ್ಲಿ ಬೃಹತ್ ಮರಗಳು ರಸ್ತೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಜೋರಾಗಿದ್ದು, ಕೃಷ್ಣಾ ನದಿಗೆಯಲ್ಲಿ 56 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ಬೆಳಗಾವಿಯ ಚಿಕ್ಕೋಡಿ ಭಾಗದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರು ಕಲ್ಲೋಳ ಜಲಾವೃತವಾಗಿದೆ.

Facebook Comments

Sri Raghav

Admin