ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕು, ಇನ್ನೂ 4 ದಿನ ಉತ್ತಮ ಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.24- ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯ ಹಲವೆಡೆ ಉತ್ತಮ ಮಳೆಯಾದ ವರದಿಯಾಗಿದೆ.

ಹವಾ ಮುನ್ಸೂಚನೆ ಪ್ರಕಾರ ನಾಳೆಯಿಂದ ಮೂರ್ನಾಲ್ಕು ದಿನ ಮಳೆಯ ಪ್ರಮಾಣ ಇಳಿಮುಖವಾಗುವ ಸಾಧ್ಯತೆಗಳಿವೆ. ಮುಂಗಾರು ಚುರುಕಾಗಿದ್ದರೂ ಮಲೆನಾಡು ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.

ಇದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳಹರಿವು ಹೆಚ್ಚಳವಾಗಿಲ್ಲ. ಕೊಡಗು ಹಾಸನ ಚಿಕ್ಕಮಗಳೂರು ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ.

ಭಾರಿ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯಗಳ ಒಳಹರಿವು ಹೆಚ್ಚಾಗಿಲ್ಲ. ಕಳೆದ ವರ್ಷ ಭಾರಿ ಮಳೆ ಯಾಗಿದ್ದ ಪರಿಣಾಮ ಈ ಬಾರಿಯೂ ಜಲಾಶಯಗಳಲ್ಲಿ ಸಾಕಷ್ಟು ನೀರಿತ್ತು. ಹೀಗಾಗಿ ವರ್ಷಕ್ಕಿಂತ ಕೆಆರ್ ಎಸ್, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದ ಬೆಳೆಗಳಿಗೆ ಹಾನಿಯಾಗುವ ಇದೆ ಎಂದರು. ಇಂದು ಕೂಡ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಆದರೆ ನಾಳೆಯಿಂದ ಮಳೆ ಪ್ರಮಾಣ ರಾಜ್ಯದ ಒಳನಾಡಿನಲ್ಲಿ ಇಳಿಕೆಯಾಗಲಿದೆ‌. ಆದರೂ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರಿಯಲಿದೆ ಎಂದು ಹೇಳಿದರು.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿಯಲಿದೆ. ಈ ವರ್ಷ ಮಲೆನಾಡು ಭಾಗಕ್ಕಿಂತ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು.

Facebook Comments

Sri Raghav

Admin