Wednesday, April 24, 2024
Homeರಾಜ್ಯರಾಜ್ಯದಲ್ಲಿ ಯಾವಾಗ ಬರುತ್ತೆ ಮಳೆ..? ಹವಾಮಾನ ಇಲಾಖೆ ಹೇಳೋದೇನು..?

ರಾಜ್ಯದಲ್ಲಿ ಯಾವಾಗ ಬರುತ್ತೆ ಮಳೆ..? ಹವಾಮಾನ ಇಲಾಖೆ ಹೇಳೋದೇನು..?

ಬೆಂಗಳೂರು,ಏ.6- ರಾಜ್ಯದಲ್ಲಿ ಸುಡು ಬಿಸಿಲಿನ ಬೇಗೆಯಿಂದ ಬಸವಳಿದಿರುವ ಜನರಿಗೆ ತುಸು ನಿರಾಳವಾಗುವ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯಿಲ್ಲ. ಗಣನೀಯವಾಗಿ ಏರಿಕೆಯಾಗಿರುವ ತಾಪಮಾನ ತಗ್ಗಿಸುವಂತಹ ಮಳೆ ಬರುವ ಸಾಧ್ಯತೆಯೂ ಇಲ್ಲ.

ಈಗಾಗಲೇ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳು ವಾಡಿಕೆಗಿಂತ ಒಂದೂವರೆಯಿಂದ 3 ಡಿ.ಸೆ.ನಷ್ಟು ಹೆಚ್ಚಾಗಿದ್ದು, ಜನರು ಬಿಸಿಲ ಬೇಗೆಗೆ ಹೈರಾಣರಾಗಿದ್ದಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏ.9ರಿಂದ 12ರವರೆಗೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಈ ಸಂದರ್ಭದಲ್ಲಿ ಕೆಲವೆಡೆ ಗುಡುಗು, ಮಿಂಚು ಬಿರುಗಾಳಿ ಸಮೇತ ಮಳೆಯಾಗುವ ಸಂಭವವಿದೆ. ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ಮಳೆಯಾಗುವ ಸಾಧ್ಯತೆ ತೀವ್ರ ವಿರಳ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಇನ್ನು ಎರಡುಮೂರು ದಿನ ಒಣಹವೆ ಇರಲಿದ್ದು, ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ.

ಕಲಬುರಗಿಯಲ್ಲಿ 43.3 ಡಿ.ಸೆ. ಉಷ್ಣಾಂಶ ದಾಖಲು:
ಬಿಸಿಲ ನಾಡು ಎಂದೇ ಪರಿಗಣಿತವಾಗಿರುವ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 43.3 ಡಿ.ಸೆ.ನಷ್ಟು ದಾಖಲಾಗಿದ್ದು, ರಾಜ್ಯದಲ್ಲೇ ಅತಿಹೆಚ್ಚು ಗರಿಷ್ಠ ತಾಪಮಾನ ಇದಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಗರಿಷ್ಠ ತಾಪಮಾನ 36 ಡಿ.ಸೆ. ಗಡಿ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ 37 ಡಿ.ಸೆ. ದಾಖಲಾಗಿದೆ. ವಿಜಯಪುರ 41, ಬಾಗಲಕೋಟೆ 42.1, ಧಾರವಾಡ 39.8, ಗದಗ 40.6, ಹಾವೇರಿ 39.8, ಕೊಪ್ಪಳ 41.1 ರಾಯಚೂರು 41.4, ಬೆಳಗಾವಿ 37.5, ಚಿತ್ರದುರ್ಗ, ಚಾಮರಾಜನಗರ 38.6, ದಾವಣಗೆರೆ 39, ಮಂಡ್ಯ 38.6, ಶಿವಮೊಗ್ಗ 38.4, ಮೈಸೂರು 37.5 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದೆ. ರಾಜ್ಯದಲ್ಲಿ ತೀವ್ರ ಬರದ ಛಾಯೆ ಆವರಿಸಿದ ಪರಿಣಾಮ ಈ ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಒಂದರ್ಥದಲ್ಲಿ ಬಿಸಿಲ ನಾಡಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

RELATED ARTICLES

Latest News