ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರಿಯಲಿದೆ ಮಳೆಯ ಆರ್ಭಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಭಾಗಶಃ ಮೋಡಕವಿದ ವಾತಾವರಣವಿದ್ದು, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಹವಾ ಮನ್ಸೂಚನೆ ಪ್ರಕಾರ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಅರಬ್ಬಿಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲೂ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡು ಬಂದಿವೆ. ನಾಳೆಯಿಂದ ರಾಜ್ಯದ ಎಲ್ಲಾ ಭಾಗಗಳಲ್ಲಿ ಮಳೆಯಾಗುವವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.

ಜೂ.3ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೂ ಐದು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯಲಿದೆ. ಉತ್ತರ ಒಳನಾಡಿನಲ್ಲು ಸಾಧಾರಣ ಪ್ರಮಾಣದ ಮಳೆಯಾಗಿದೆ ಎಂದರು.

ಮೇ 31ರಿಂದ ಜೂ.3ರವರೆಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಅರಬ್ಬಿಸಮುದ್ರಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ವಾಯುಭಾರ ಕುಸಿತವಾಗಿ ಮಾರ್ಪಾಡಾಗುವ ಸಾಧ್ಯತೆಗಳು ಹೆಚ್ವಾಗಿದ್ದು, ಇದರಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಿದರು.ಚಂಡ ಮಾರುತದ ನಂತರ ಸಾಕಷ್ಟು ಬದಲಾವಣೆಯಾಗಿದ್ದು, ನೈರುತ್ಯ ಮುಂಗಾರು ಮಳೆಗೆ ಪೂರಕವಾದ ವಾತಾವರಣ ಕಂಡು ಬರುತ್ತಿದೆ.

ಜೂ.5ರ ವೇಳೆಗೆ ಮುಂಗಾರು ಪ್ರವೇಶವಾಗುವ ನಿರೀಕ್ಷೆ ಇದೆ. ಆದರೂ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು. ಮುಂಗಾರಿನಲ್ಲಿ ಉಂಟಾಗಬಹುದಾದ ಪ್ರವಾಹದ ಬಗ್ಗೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ.

ಕಳೆದ ವರ್ಷ ಉಂಟಾದ ಭಾರೀ ಪ್ರವಾಹದಿಂದ ಪಾಠ ಕಲಿತಿದ್ದು, ಪ್ರವಾಹ ಉಂಟಾಗುವವರೆಗೂ ಕಾಯದೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಯಾ ಜಿಲ್ಲೆಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

Facebook Comments