ರಾಜ್ಯದ ಇತಿಹಾಸದಲ್ಲೇ ಇದೆ ಮೊದಲ ಬಾರಿ ಅಧಿವೇಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಅಧಿವೇಶನಕ್ಕೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ವಿಧಾನಸಭೆ, ವಿಧಾನಪರಿಷತ್‍ನ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶ ಬಂದ್ ಮಾಡಲಾಗಿದೆ.

ಕೆಳ ಮಟ್ಟದ ಅಧಿಕಾರಿ, ನೌಕರರಿಗೆ ಹಾಗೂ ಪತ್ರಿಕಾ ಮಾಧ್ಯಮದವರಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಪ್ರತಿ ಅಧಿವೇಶನ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ದೇಶಗಳಿಂದ ಆಗಮಿಸುವ ಗಣ್ಯರು ಸೇರಿದಂತೆ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣ ಎಲ್ಲಾ ಶಾಸಕರು, ಸಚಿವರು, ಅಧಿಕಾರಿಗಳು, ಮಾಧ್ಯಮದವರು ಸೇರಿದಂತೆ ಎಲ್ಲರೂ ಕೊರೋನಾ ತಪಾಸಣೆಗೊಳಪಟ್ಟು ದೃಢೀಕರಣ ಪತ್ರ ತಂದರೆ ಮಾತ್ರ ಪ್ರವೇಶ. ಹಾಗಾಗಿ ಸಾರ್ವಜನಿಕರ ಪ್ರವೇಶವನ್ನು ಈ ಬಾರಿ ನಿರ್ಬಂಧಿಸಲಾಗಿದೆ.

ಹಲವು ವಿಶೇಷ ಸಂದರ್ಭದಲ್ಲಿ ಅಂದರೆ ಮುಖ್ಯಮಂತ್ರಿಗಳ ವಿರುದ್ಧದ ಅವಿಶ್ವಾಸ ಮಂಡನೆ, ವಿಶ್ವಾಸ ಮತ ಯಾಚನೆ ಅಂತಹ ಸಂದರ್ಭದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಗೊಳಿಸಲಾಗುತ್ತಿತ್ತು. ಅದನ್ನು ಹೊರತುಪಡಿಸಿದರೆ ಅಧಿವೇಶನ ವೀಕ್ಷಿಸಲು ಎಲ್ಲರಿಗೂ ಮುಕ್ತ ಅವಕಾಶವಿರುತ್ತಿತ್ತು.

ಪ್ರಸ್ತುತ ಅಧಿವೇಶನದಲ್ಲಿ ಕಲಾಪ ನಡೆಯುವ ವಿಧಾನಸಭೆ, ವಿಧಾನ ಪರಿಷತ್‍ಗೆ 2 ಬಾರಿ ಸ್ಯಾನಿಟೈಸರ್ ಮಾಡಲಾಗುತ್ತದೆ. ಅದೇ ರೀತಿ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಸಂಖ್ಯೆ ಕೂಡ ಸೀಮಿತಗೊಳಿಸಲಾಗಿದೆ.

Facebook Comments