ದೇಶದಲ್ಲೇ ಅತಿಹೆಚ್ಚು ಲಸಿಕೆ ನೀಡಿದ ರಾಜ್ಯ ಕರ್ನಾಟಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.18-ದೇಶಾದ್ಯಂತ ನಡೆದ ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನದಲ್ಲಿ ಕರ್ನಾಟಕ 31 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಿ ಗುರಿ ಮೀರಿದ ಸಾಧನೆ ಮಾಡಿದ್ದು, ದೇಶದಲ್ಲೇ ಅತಿಹೆಚ್ಚು ಲಸಿಕೆ ರಾಜ್ಯವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿನ್ನೆಯವರೆಗೆ 5 ಕೋಟಿ ಕೋವಿಡ್ ಲಸಿಕೆ ನೀಡಿದ ಮೈಲುಗಲ್ಲನ್ನು ಸ್ಥಾಪಿಸಿದ್ದೇವೆ ಎಂದರು.

ಇಡೀ ರಾಷ್ಟ್ರದಲ್ಲೇ ಬಿಬಿಎಂಪಿ 9.90 ಲಕ್ಷ ಲಸಿಕೆ ನೀಡಿದ್ದು, ಸುಮಾರು 5 ಲಕ್ಷ ಲಸಿಕೆ ನೀಡಿದಂತಾಗಿದ್ದು, ರಾಷ್ಟ್ರದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಬೆಳಗಾವಿಯಲ್ಲಿ 2,54,600 ಲಸಿಕೆ ನೀಡಿ ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ 2ನೇ ಜಿಲ್ಲೆಯಾಗಿದೆ ಎಂದರು. ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ದೇಶಾದ್ಯಂತ ಮಹಾಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಒಟ್ಟು 2.5 ಕೋಟಿ ಲಸಿಕೆಯನ್ನು 10 ಗಂಟೆ ಅವಧಿಯಲ್ಲಿ ನೀಡಲಾಗಿದೆ.ಇದು ಯಾವ ದೇಶದಲ್ಲೂ ನಡೆದಿಲ್ಲ. ಆಸ್ಟ್ರೇಲಿಯಾ ತಂಡದ ಜನಸಂಖ್ಯೆ 2 ಕೋಟಿ. 8 ಗಂಟೆಯಲ್ಲಿ ಆ ತಂಡಕ್ಕೆ ಲಸಿಕೆ ನೀಡಲು ಭಾರತಕ್ಕೆ ಸಾಧ್ಯವಾಗಲಿದೆ ಎಂದರು.

ರಾಜ್ಯದಲ್ಲಿ 30 ಲಕ್ಷ ಲಸಿಕೆ ನೀಡುವ ಗುರಿ ನೀಡಲಾಗಿತ್ತು. ಬೆಳಗ್ಗೆ 8.30ರವರೆಗೆ 29,50,093 ಲಸಿಕೆ ನೀಡಿರುವುದನ್ನು ಕೋವಿನ್ ಆ್ಯಪ್‍ನಲ್ಲಿ ನೋಂದಣಿ ಮಾಡಲಾಗಿದೆ. ಇನ್ನು 1.68 ಲಕ್ಷ ಲಸಿಕೆ ನೀಡಿರುವುದನ್ನು 5 ಗಂಟೆಯೊಳಗೆ ನೋಂದಣಿ ಮಾಡಿ ಅಪ್‍ಲೋಡ್ ಮಾಡಲಾಗುವುದು. 10 ಲಕ್ಷ ಜನಸಂಖ್ಯೆಗೆ ಕರ್ನಾಟಕದಲ್ಲಿ 62 ಸಾವಿರ 2ನೇ ಡೋಸ್ ನೀಡಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ 50 ಸಾವಿರ ಲಸಿಕೆ ನೀಡಿ 2ನೇ ಸ್ಥಾನದಲ್ಲಿದೆ. ದೇಶದ ಲಸಿಕೆ ನೀಡಿಕೆಯಲ್ಲಿ ರಾಜ್ಯದ ಪಾಲು ಶೇ.11ರಷ್ಟಿದೆ ಎಂದರು.

ರಾಜ್ಯದ 14 ಜಿಲ್ಲೆಗಳು ಗುರಿ ಮೀರಿದ ಸಾಧನೆ ಮಾಡಿದರೆ ನಾಲ್ಕು ಜಿಲ್ಲೆಗಳು ನಿಗದಿಪಡಿಸಿದ ಗುರಿಗಿಂತ ಕಡಿಮೆ ಸಾಧನೆ ಮಾಡಿವೆ ಎಂದು ಹೇಳಿದರು. ನಿನ್ನೆಯ ಲಸಿಕಾ ಅಭಿಯಾನದಲ್ಲಿ 14.96 ಲಕ್ಷ ಮಹಿಳೆಯರು ಲಸಿಕೆ ಪಡೆದು ಮೊದಲ ಸ್ಥಾನದಲ್ಲಿದ್ದರೆ, 14.53 ಲಕ್ಷ ಪುರುಷರು ಲಸಿಕೆ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಕಳೆದ 20 ದಿನದಲ್ಲಿ ಒಂದು ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಒಂದು ಕೋಟಿ ಜನರಿಗೆ 2 ಕೋಟಿ ಲಸಿಕೆ ನೀಡಲಾಗಿದೆ. ಕಲಬುರಗಿ ಶೇ.41, ಕೊಪ್ಪಳ ಶೇ.62, ಉಡುಪಿ ಶೇ.63, ರಾಯಚೂರು ಶೇ.64ರಷ್ಟು ನಿಗದಪಡಿಸಿದ ಗುರಿಗಿಂತ ಕಡಿಮೆ ಲಸಿಕೆ ನೀಡಿವೆ. ಬೆಂಗಳೂರು ನಗರ ಶೇ.143, ಶಿವಮೊಗ್ಗ ಶೇ.134, ಹಾಸನ, ಧಾರವಾಡ, ರಾಮನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳು ಶೇ.120ಕ್ಕೂ ಹೆಚ್ಚು ಲಸಿಕೆ ನೀಡಿ ಗುರಿ ಮೀರಿದ ಸಾಧನೆ ಮಾಡಿವೆ ಎಂದು ಹೇಳಿದರು.

ನಿನ್ನೆಯಿಂದ ರಕ್ತದಾನ ಶಿಬಿರವನ್ನು ಆರಂಭಿಸಿದ್ದು, ರಾಜ್ಯಾದ್ಯಂತ ಒಂದು ಲಕ್ಷ ಯೂನಿಟ್ ಸಂಗ್ರಹಿಸುವ ಗುರಿ ಹೊಂದಲಾಗಿದೆ. 31 ಜಿಲ್ಲೆಗಳಲ್ಲಿ 143 ಕಡೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 450 ಎಂಎಲ್ ಸಂಗ್ರಹವಿರುವ 5,201 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1240, ಬೆಂಗಳೂರು ನಗರ ಜಿಲ್ಲೆಯಲ್ಲಿ 473, ಬಳ್ಳಾರಿಯಲ್ಲಿ 298, ದಕ್ಷಿಣ ಕನ್ನಡದಲ್ಲಿ 295, ಉತ್ತರ ಕನ್ನಡ 15, ಚಾಮರಾಜನಗರ 24, ಕೊಡಗಿನಲ್ಲಿ 5 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.

ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು. ಋತುಮಾನ ಆಧರಿತ ಜ್ವರ ಕೆಲವೆಡೆ ಕಂಡುಬರುತ್ತಿವೆ. ಕೋವಿಡ್ ಪ್ರಕರಣ ಕಡಿಮೆಯಾಗಿದ್ದರೂ ಯಾರೂ ಎಚ್ಚರ ತಪ್ಪಬಾರದು. ಕಾರವಾರದಲ್ಲಿ ನಿಫಾ ವೈರಸ್ ಪರೀಕ್ಷೆಗೊಳಗಾಗಿದ್ದ ವ್ಯಕ್ತಿಯ ಫಲಿತಾಂಶ ಬಂದಿಲ್ಲ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

Facebook Comments