ಕೊಡಗು ಮತ್ತು ಹಾಸನ ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲಾ ಚಟುವಟಿಕೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.5-ಕೊಡಗು ಮತ್ತು ಹಾಸನ ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಬಹುತೇಕ ವ್ಯಾಪಾರ-ವಹಿವಾಟು ಆರಂಭಗೊಂಡಿವೆ. ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿವೆ. ಕಳೆದೆರಡು ತಿಂಗಳಿನಿಂದ ಲಾಕ್‍ಡೌನ್‍ನಿಂದಾಗಿ ಸ್ತಬ್ದವಾಗಿದ್ದ ಎಲ್ಲ ಚಟುವಟಿಕೆಗಳು ಇಂದಿನಿಂದ ಪ್ರಾರಂಭವಾಗಿದ್ದು, ಮಾರ್ಕೆಟ್, ಮಾಲ್, ದೇವಸ್ಥಾನ, ಬಸ್, ಮೆಟ್ರೊ ಸೇರಿದಂತೆ ಎಲ್ಲವೂ ಜನರಿಗೆ ಮುಕ್ತವಾದವು.

ಸಾರ್ವಜನಿಕ ಪ್ರವೇಶಕ್ಕೆ ದೇವಸ್ಥಾನಗಳು ಮುಕ್ತವಾಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ದೇವಸ್ಥಾನಗಳಿಗೆ ತೆರಳಿದ ಜನ ದೇವರ ದರ್ಶನ ಪಡೆದರು. ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ ಶಾರದಾಂಬ, ಮೈಸೂರು ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕ ದೇವಸ್ಥಾನ, ದುರ್ಗಾಪರಮೇಶ್ವರಿ, ಯಲ್ಲಮ್ಮ ದೇವಿಯ ದೇಗುಗಳಿಗೆ ತೆರಳಿದ ಭಕ್ತರು ದೇವರ ದರ್ಶನ ಪಡೆದರು.

ದೇವಸ್ಥಾನಗಳಲ್ಲಿ ಕೋವಿಡ್ ನಿಯಮಗಳ ಪಾಲನೆಗೆ ಸೂಚನಾ ಫಲಕಗಳನ್ನು ಹಾಕಲಾಗಿತ್ತು. ಸಾಮಾಜಿಕ ಅಂತರಕ್ಕೆ ಬಾಕ್ಸ್‍ಗಳನ್ನು ಹಾಕಲಾಗಿತ್ತು. ಸರತಿ ಸಾಲಿನಲ್ಲಿ ಬಂದ ಭಕ್ತರು ದರ್ಶನ ಪಡೆದರು.
ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆತಂಕ ಮರೆತ ಜನ ಬೆಳಗ್ಗೆಯಿಂದಲೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಎಪಿಎಂಸಿ ಯಾರ್ಡ್, ವಿವಿಧ ಮಾರುಕಟ್ಟೆಗಳಲ್ಲಿ ಜನಜಂಗುಳಿ ಇತ್ತು.

ಎಲ್ಲ ಅಂಗಡಿ-ಮುಂಗಟ್ಟುಗಳು ಗ್ರಾಹಕರಿಗಾಗಿ ತೆರೆದಿದ್ದವು. ಮಾಲ್‍ಗಳು ಕೂಡ ತೆರೆದಿದ್ದು, ದೊಡ್ಡ ದೊಡ್ಡ ಮಾಲ್‍ಗಳು ಸೇರಿದಂತೆ ವಿವಿಧ ಮಾಲ್‍ಗಳಿಗೆ ಜನರು ತೆರಳಿ ತಮ್ಮ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಾಲ್‍ಗಳಲ್ಲಿ ಕೂಡ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಗ್ರಾಹಕರಿಗೆ ಸ್ಪಷ್ಟ ಸೂಚನೆ ನೀಡುತ್ತಿದ್ದರು. ಮಾಲ್‍ಗಳ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು.

ಬಿಎಂಟಿಸಿ ಬಸ್‍ಗಳಲ್ಲಿ 100ರಷ್ಟು ಪ್ರಯಾಣಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಬಸ್‍ಗಳಲ್ಲಿ ಪ್ರಯಾಣಿಕರು ನಿರ್ಭೀತಿಯಿಂದ ಸಂಚರಿಸುತ್ತಿದ್ದರು. ನಿಂತು ಪ್ರಯಾಣಿಸಲು ಅವಕಾಶ ಇರಲಿಲ್ಲ. ನಾಲ್ಕು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್‍ಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲಾಗಿತ್ತು. ಮೆಜೆಸ್ಟಿಕ್, ಸ್ಯಾಟಲೈಟ್, ಮಾರ್ಕೆಟ್, ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಜನ ಜಂಗುಳಿ ಇತ್ತು.

ಮೆಟ್ರೋ ರೈಲು ಸೇವೆ ಒದಗಿಸಿರುವ ಹಿನ್ನೆಲೆಯಲ್ಲಿ ಜನರು ಇಂದು ಮೆಟ್ರೋದಲ್ಲೂ ಸಂಚರಿಸಿದರು. ಪ್ರಯಾಣಿಕರ ದಟ್ಟಣೆ ಆಧರಿಸಿ ಮೆಟ್ರೋ ಸೇವೆಯನ್ನು ಒದಗಿಸಲಾಗಿದ್ದು, ಟೋಕನ್ ಪಡೆದ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದದ್ದು ಕಂಡುಬಂತು.

ಹೋಟೆಲ್‍ಗಳಲ್ಲಿ ಕುಳಿತು ಊಟ, ತಿಂಡಿ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಇಂದು ಬೆಳಗ್ಗೆ ಹೋಟೆಲ್‍ಗಳಿಗೆ ತೆರಳಿ ತಿಂಡಿ ಸವಿದರು. ಮೆಜೆಸ್ಟಿಕ್ ಸುತ್ತಮುತ್ತ ಹೋಟೆಲ್‍ಗಳು ಜನರಿಂದ ರಷ್ಷಾಗಿದ್ದವು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಕೆಲವು ನಿರ್ಬಂಧ ವಿಸಲಾಗಿತ್ತು. ಇಂದಿನಿಂದ ಎಲ್ಲವೂ ಮುಕ್ತವಾಗಿದ್ದು, ಸರ್ಕಾರಿ ಖಾಸಗಿ ಕಚೇರಿ, ಕೈಗಾರಿಕಾ ವಾಣಿಜ್ಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದವು.

ಮದುವೆ ಮತ್ತಿತರ ಶುಭಸಮಾರಂಭಗಳಲ್ಲಿ 100 ಜನರಿಗೆ ಮಾತ್ರ ಅವಕಾಶ ನೀಡಿರುವ ಕಾರಣ ಇಂದು ಹಲವೆಡೆ ನಿಶ್ಚಿತಾರ್ಥ, ಮದುವೆ ಸಮಾರಂಭ, ಗೃಹಪ್ರವೇಶ ಮತ್ತಿತರ ಶುಭ ಕಾರ್ಯಗಳು ಕೂಡ ಸರಾಗವಾಗಿ ನಡೆದವು.ಈಜುಕೊಳ, ಕ್ರೀಡಾ ಸಂಕೀರ್ಣ, ಕ್ರೀಡಾಪಟುಗಳಿಗೆ ಮಾತ್ರ ಇಂದಿನಿಂದ ತೆರೆಯಲಿದ್ದು, ಹಲವು ಕ್ರೀಡಾಪಟುಗಳು ಅಲ್ಲಿಗೆ ತೆರಳಿ ತಾಲೀಮ್‍ನಲ್ಲಿ ತೊಡಗಿಸಿಕೊಂಡರು.

ಬಾರ್‍ಗಳಲ್ಲಿ ಕುಳಿತು ಮದ್ಯ ಸೇವನೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ಗಳು ತೆರೆದಿದ್ದು, ಎರಡುಮೂರು ತಿಂಗಳಿನಿಂದ ಬಾರ್‍ಗಳಿಗೆ ಅವಕಾಶವೇ ಇರಲಿಲ್ಲ. ಈಗ ಇಂದಿನಿಂದ ಅವಕಾಶ ಸಿಕ್ಕಿದ್ದು, ಬೆಳಗ್ಗೆ ಬಾರ್‍ಗಳು ಓಪನ್ ಆಗುತ್ತಿದ್ದಂತೆ ಎಣ್ಣೆ ಪ್ರಿಯರು ಬಾರ್‍ಗಳಿಗೆ ತೆರಳಿ ಎಣ್ಣೆ ಹೀರುತ್ತಿದ್ದದ್ದು ಕಂಡುಬಂತು.

ಕೊರೊನಾ ಹಿನ್ನೆಲೆಯಲ್ಲಿ ಊರುಗಳಲಿದ್ದ ಹಿಂದಿರುಗಿದ ಜನ ಸಂಪೂರ್ಣ ಅನ್‍ಲಾಕ್ ಆದ ಕಾರಣ ಎಲ್ಲರೂ ನಗರಪ್ರದೇಶಗಳಿಗೆ ವಾಪಸ್ ಆಗಿದ್ದಾರೆ. ಕಳೆದೆರಡು ಮೂರು ದಿನಗಳಿಂದಲೇ ನಗರಪ್ರದೇಶಗಳಿಗೆ ಹಿಂದಿರುಗಿ ತಮ್ಮ ಚಟುವಟಿಕೆಗಳಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದಾರೆ.

ನಿನ್ನೆ ಮತ್ತು ಇಂದು ಹಲವರು ನಗರಗಳತ್ತ ಮುಖ ಮಾಡಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆಯಷ್ಟೇ. ಕೊರೊನಾ ಸೋಂಕು ದೂರವಾಗಿಲ್ಲ. ಜನರು ಎಚ್ಚರ ವಹಿಸಬೇಕು. ಕೋವಿಡ್-19 ನಿಯಮಾವಳಿಗಳನ್ನು ತಪ್ಪದೆ ಪಾಲಿಸಬೇಕು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ನಾವು ಕೊರೊನಾಕ್ಕೆ ತುತ್ತಾಗಬೇಕಾಗುತ್ತದೆ.

Facebook Comments

Sri Raghav

Admin