ಕರ್ನಾಟಕ ಅನ್‌ಲಾಕ್‌ : ದೈನಂದಿನ ಚಟುವಟಿಕೆಗಳು ಆರಂಭ, ಬೆಂಗಳೂರು ಬಿಟ್ಟು ಹೊರಟ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಜಾರಿಯಲ್ಲಿದ್ದ ಲಾಕ್‍ಡೌನ್ ಇಂದು ಸಡಿಲಿಕೆಯಾಗುತ್ತಿದ್ದಂತೆ ಕರುನಾಡು ಮತ್ತೆ ಸಹಜ ಸ್ಥಿತಿಗೆ ಮರಳಿದೆ.

ಲಾಕ್‍ಡೌನ್‍ನಿಂದ ಬಹುತೇಕ ಸ್ತಬ್ದಗೊಂಡಿದ್ದ ವ್ಯಾಪಾರ ವಹಿವಾಟು, ಸಾರಿಗೆ, ಆಟೋ, ಟ್ಯಾಕ್ಸಿ, ಕ್ಯಾಬ್, ಬಾರ್, ರೆಸ್ಟೋರೆಂಟ್, ಮಾರುಕಟ್ಟೆಗಳು, ವಾಣಿಜ್ಯಕೇಂದ್ರಗಳು, ಖಾಸಗಿ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲ ಕಡೆ ದೈನಂದಿನ ಚಟುವಟಿಕೆಗಳು ಆರಂಭವಾಗಿವೆ.

ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳು, ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಬೆಳಗ್ಗಿನಿಂದಲೇ ವಾಹನಗಳ ಸದ್ದು ಗಿಜಿಗುಡುತ್ತಿತ್ತು.

ಬೆಂಗಳೂರು ಮಾತ್ರವಲ್ಲದೆ ವಾಣಿಜ್ಯನಗರಿ ಮೈಸೂರು, ಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಕಲಬುರಗಿ, ಬೀದರ್, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲ ಕಡೆ ದೈನಂದಿನ ಜನಜೀವನ ಬಿರುಸುಗೊಂಡಿದೆ.

ಇದ್ದುದ್ದರಲ್ಲೇ ಬೆಂಗಳೂರಿನಲ್ಲಿ ಮೊದಲ ದಿನವಾದ ಇಂದು ಮನೆಯಿಂದ ಆಚೆ ಬರಲು ಹಿಂದೇಟು ಹಾಕಿದ ದೃಶ್ಯ ಕಂಡುಬಂದಿತು. ಪ್ರಾರಂಭದಲ್ಲಿ ಪ್ರಮುಖ ರಸ್ತೆಗಳಲ್ಲಿ ಹೇಳಿಕೊಳ್ಳುವಂತಹ ವಾಹನಗಳು ಇರಲಿಲ್ಲ.

ಹೊರವರ್ತುಲ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಆನಂದರಾವ್ ವೃತ್ತ, ಕೋರಮಂಗಲ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ 10 ಗಂಟೆಯ ನಂತರ ವಾಹನಗಳು ಸಂಚರಿಸಿದವು.

ಇನ್ನು ಕೆಂಪೇಗೌಡ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲೂ ಹೇಳಿಕೊಳ್ಳುವಂತಹ ಪ್ರಯಾಣಿಕರು ಇರಲಿಲ್ಲ. ಡಿಪೆÇೀಗಳಿಗೆ ಬಸ್ ಬಂದರೂ ಪ್ರಯಾಣಿಕರಿಲ್ಲದೆ ಖಾಲಿ ಹೊಡೆಯುತ್ತಿದ್ದ ದೃಶ್ಯ ಆರಂಭದಲ್ಲಿ ಕಂಡುಬಂದಿತು.

ಇನ್ನು ಎಂದಿನಂತೆ ಜನರು ಮುಗಿಬಿದ್ದು ಅಗತ್ಯವಸ್ತುಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯಗಳು ವಿರಳವಾಗಿದ್ದವು. ತರಕಾರಿ, ಹಾಲುಹಣ್ಣು, ಔಷಧಿ ಅಂಗಡಿಗಳಲ್ಲಿ ಸಹಜ ಸ್ಥಿತಿಯಿತ್ತು.

ದಿನಪೂರ್ತಿ ಅಂಗಡಿಗಳು ತೆರೆಯಲಿವೆ ಎಂಬ ನಂಬಿಕೆಯಿಂದ ಜನರು ಮುಗಿಬಿದ್ದು ಖರೀದಿ ಮಾಡುವ ಗೋಜಿಗೆ ಹೋಗಲಿಲ್ಲ.

# ಮುಕ್ತ ಮುಕ್ತಮುಕ್ತ:
ಕಳೆದ ಒಂದು ವಾರದಿಂದ ಬೆಂಗಳೂರಿಗೆ ಸಂಪರ್ಕ ನೀಡುವ ಬಹತೇಕ ಗಡಿಭಾಗಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಇಂದು ಮುಂಜಾನೆಯಿಂದಲೇ ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ಪೊಲೀಸರು ಮುಂಜಾನೆಯಿಂದಲೇ ತೆರವುಗೊಳಿಸಿದರು.

ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಗೊರಗುಂಟೆಪಾಳ್ಯ, ಹೊರವರ್ತುಲ ರಸ್ತೆ, ಹೆಬ್ಬಾಳ ಫ್ಲೈಓವರ್, ಆನಂದರಾವ್ ವೃತ್ತ ಫ್ಲೈಓವರ್, ಜಯನಗರ, ಬಸವನಗುಡಿ, ಮೈಸೂರು ರಸ್ತೆ ಸೇರಿದಂತೆ ನಗರಕ್ಕೆ ಹೊಂದಿಕೊಂಡಿರುವ ಎಲ್ಲ ಗಡಿಗಳನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

# ದಾಂಗುಡಿ ಇಟ್ಟ ಜನರು:
ಇನ್ನು ಲಾಕ್‍ಡೌನ್‍ಗೆ ಹೆದರಿ ಬೆಂಗಳೂರಿನಿಂದ ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ನಗರವಾಸಿಗಳು ಮತ್ತೆ ರಾಜಧಾನಿಯತ್ತ ಮುಖ ಮಾಡಿದ್ದಾರೆ. ಕಳೆದ 10 ದಿನಗಳ ಹಿಂದೆ ಬೆಂಗಳೂರಿನಿಂದ ದೊಡ್ಡ ಮಟ್ಟದಲ್ಲಿ ಜನರು ವಲಸೆ ಹೋಗಿದ್ದರು.

ಸಿಎಂ ಲಾಕ್‍ಡೌನ್ ಮುಕ್ತಗೊಳಿಸುತ್ತಿದ್ದಂತೆ ಕಳೆದ ರಾತ್ರಿಯಿಂದಲೇ ತಂಡೋಪತಂಡವಾಗಿ ನಗರಕ್ಕೆ ಜನರು ಆಗಮಿಸುತ್ತಿದ್ದಾರೆ. ಇದರಿಂದ ಬೆಳ್ಳಂಬೆಳಗ್ಗೆ ಕೆಲವು ಕಡೆ ವಾಹನ ಸಂಚಾರ ದಟ್ಟಣೆಯಾದ ದೃಶ್ಯ ಕಂಡುಬಂದಿತು.

ಮುಖ್ಯವಾಗಿ ನೆಲಮಂಗಲ, ವಿಮಾನ ನಿಲ್ದಾಣ ರಸ್ತೆಯ ನವಯುಗ, ಮೈಸೂರು ರಸ್ತೆ, ಹೊಸಕೋಟೆ ಸೇರಿದಂತೆ ಬಹುತೇಕ ಕಡೆ ದಟ್ಟಣೆ ಹೆಚ್ಚಾಗಿತ್ತು.

ಉಳಿದಂತೆ ರಾಜ್ಯದ ಇತರೆ ಭಾಗಗಳಲ್ಲೂ ದೈನಂದಿನ ಜನಜೀವನ ನಿಧಾನವಾಗಿ ಮರಳುತ್ತಿದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ ಜೊತೆಗೆ ರಾಜ್ಯದೆಲ್ಲೆಡೆ ಈ ಬಾರಿ ಮುಂಗಾರು ಚುರುಕುಗೊಂಡಿರುವುದರಿಂದ ರೈತರ ಕೃಷಿ ಚಟುವಟಿಕೆಗಳು ಕೂಡ ಚುರುಕುಗೊಂಡಿವೆ.

ಬಹುತೇಕ ಎಲ್ಲಾ ಕಡೆ ರೈತರು ಬಿತ್ತನೆಯತ್ತ ಗಮನಹರಿಸಿದ್ದಾರೆ. ಅಗತ್ಯವಿರುವ ಗೊಬ್ಬರ, ಬೀಜ ಖರೀದಿಸುವುದರಲ್ಲಿ ಮಗ್ನರಾಗಿದ್ದಾರೆ.  ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಹೀಗಾಗಿ ವ್ಯಾಪಾರಸ್ಥರು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಎಲ್ಲರಲ್ಲೂ ಮಂದಹಾಸ ಮೂಡಿದೆ.

# ಕೊರೊನಾ ಭಯಕ್ಕೆ ಬೆಂಗಳೂರು ಬಿಟ್ಟ ಜನ:
ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದ್ದರೂ ಜನತೆಯಲ್ಲಿ ಕೊರೊನಾ ಭಯ ಮಾತ್ರ ಇನ್ನೂ ದೂರವಾಗಿಲ್ಲ. ಏಕೆಂದರೆ ನಗರದಿಂದ ಇಂದು ಕೂಡ ವಲಸೆ ಹೋಗುತ್ತಿರುವುದೇ ಇದಕ್ಕೆ ಸಾಕ್ಷಿ.

ಬೆಳಗ್ಗೆ ನಗರದ ವಲಸೆ ಕಾರ್ಮಿಕರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ತಮ್ಮೂರಿಗೆ ತೆರಳಲು ಆಗಮಿಸಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಜನ ಸರತಿಯಲ್ಲಿ ನಿಂತಿದ್ದರು.

ಟಿಕೆಟ್ ಕೌಂಟರ್ ಬಳಿ 500 ಮೀಟರ್ ವರೆಗೂ ಕ್ಯೂ ನಿಂತಿತ್ತು.  ಬೆಂಗಳೂರಿನಲ್ಲಿ ಇರುವುದಕ್ಕೆ ಭಯ ಆಗ್ತಿದೆ. ಹಾಗಾಗಿ ಊರಿಗೆ ಹೋಗುತ್ತಿದ್ದೇವೆ ಎಂದ ವಲಸೆ ಕಾರ್ಮಿಕರು ತಮ್ಮ ನೋವನ್ನು ಹೊರಹಾಕಿದರು. ದೆಹಲಿ, ಮಹಾರಾಷ್ಟ್ರ, ಬಿಹಾರ ಸೇರಿ ವಿವಿಧ ರಾಜ್ಯಗಳ ಜನರು ತಮ್ಮ ತಮ್ಮ ರಾಜ್ಯಗಳತ್ತ ಪ್ರಯಾಣ ಬೆಳೆಸಿದರು.

Facebook Comments

Sri Raghav

Admin