ಅಕಾಲಿಕ ಮಳೆ ಕಡಿಮೆಯಾದ ಬೆನ್ನಲ್ಲೇ ಹೆಚ್ಚಾಗಲಿದೆ ತಾಪಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22- ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಬೀಳುತ್ತಿರುವ ಮಳೆ ನಿನ್ನೆ ಕೂಡ ಮುಂದುವರೆದಿದ್ದು, ಇಂದಿನಿಂದ ಇಳಿಮುಖವಾಗುವ ಸಾಧ್ಯತೆಗಳಿವೆ. ಮೇಲ್ಮೈ ಸುಳಿಗಾಳಿ ಸೇರಿದಂತೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾದ ಹಿನ್ನೆಲೆಯಲ್ಲಿ ಅಕಾಲಿಕ ಮಳೆ ರಾಜ್ಯದಲ್ಲಾಗಿದ್ದು, ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಅರಬ್ಬಿಸಮುದ್ರ ಹಾಗೂ ಬಂಗಾಳಕೊಲ್ಲಿಯಿಂದ ತೇವಾಂಶ ಭರಿತವಾದ ಮೋಡಗಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚು, ಆಲಿಕಲ್ಲು ಸಹಿತ ಮಳೆಯಾಗಿದೆ.

ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ನಾಳೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಗರಿಷ್ಠ ತಾಪಮಾನದಲ್ಲಿ ಏರಿಕೆ ಉಂಟಾಗಲಿದೆ ಎಂದು ಹೇಳಿದರು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಬಾಗಲಕೋಟೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ವಿಜಯಪುರ, ಗದಗ, ಹಾವೇರಿ, ಧಾರವಾಡ, ಉತ್ತರಕನ್ನಡ, ಕೊಪ್ಪಳ, ರಾಯಚೂರು, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ದಕ್ಷಿಣಕನ್ನಡ, ಉಡುಪಿ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ.

ಕೆಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದ್ದರೆ, ಕೆಲವು ಅಲ್ಲಲ್ಲಿ ಮಳೆಯಾಗಿದೆ. ಇನ್ನು ಕೆಲವು ಕಡೆ ಸಾಧಾರಣ ಪ್ರಮಾಣದಲ್ಲಿ ಮಳೆಯಾದ ವರದಿಯಾಗಿದೆ.

Facebook Comments

Sri Raghav

Admin