ಚಿಕ್ಕಮಗಳೂರಿಗೆ ಹಿಂಗೆ ಬಂದು ಹಂಗೆ ಹೋದ ಸಿಎಂ, ನೆರೆ ಸಂತ್ರಸ್ತರಿಗೆ ನಿರಾಸೆ
ಚಿಕ್ಕಮಗಳೂರು, ಆ.28- ಬಾರಿ ಮಳೆಯಿಂದಾಗಿ ಜಿಲ್ಲೆಯ ಮೂಡಿಗೇರೆ ತಾಲೂಕಿನ ಮಲೆಮನೆ, ಮಧುಗುಂಡ, ದುರ್ಗದಹಳ್ಳಿ, ಆಲೆಕಾಲ್ಹೊರಟ್ಟಿ ಈ ಗ್ರಾಮಗಳ ಸಂತ್ರಸ್ತರು ಅಳಲು ತೊಡಿಕೊಳ್ಳಲು ನಾಡದೊರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದವರಿಗೆ ನಿರಾಸೆ ಉಂಟಾಯಿತು.
ಮಧ್ಯಾಹ್ನ 3ಗಂಟೆ ವೇಳೆಗೆ ಆಗಮಿಸಿದ ಸಿಎಂ ಸಂತ್ರಸ್ತರ ಅಳಲನ್ನು 10ನಿಮಿಷದಲ್ಲಿ ಕೇಳಿ ನೆರೆ ಪ್ರವಾಸ ಮುಗಿಸಿ ಹಿಂತಿರುಗಿದರು. ನೆರೆಯಿಂದ ಗುಡ್ಡ ಕುಸಿದು ಮನೆಗಳು ನೆಲಸಮವಾದ ಸ್ಥಳಕ್ಕೂ ಹೋಗದೆ, ದೂರದಿಂದಲೇ ಎಲ್ಲವನ್ನು ವೀಕ್ಷಣೆ ಮಾಡಿ ತುರ್ತು ಕೆಲಸದ ನೆಪವೊಡ್ಡಿ ಬೆಂಗಳೂರಿನತ್ತ ವಾಪಸ್ಸು ಆಗಿದ್ದು ನಿರಾಸೆ ಭಾವಕ್ಕೆ ಕಾರಣವಾಯಿತು.
ಮೂರು ಗ್ರಾಮಗಳ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಗೂಲಿ ಕೆಲಸ ಮಾಡುವ ಜನ ನಾಡದೊರೆ ಸಿಎಂ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಕೆಲಸಕ್ಕೂ ಹೋಗದೆ ಕಾಯುತ್ತಿದ್ದರು. ಆದರೆ ಮಲೆಮನೆ ಗ್ರಾಮಕ್ಕೆ ಬಂದ ಸಿಎಂ ಕುಸಿದ ಮನೆಗಳ ಅವಶೇಷಗಳನ್ನು ಹತ್ತಿರದಿಂದ ನೋಡದೇ ದೂರದಿಂದಲೇ ನಿಂತು ವೀಕ್ಷಣೆ ಮಾಡಿ. ಶಾಲಾ ಆವರಣದ ಬಳಿ ಸೇರಿದ್ದ ಗ್ರಾಮಸ್ಥರು ಮತ್ತು ನಿರಾಶ್ರಿತರ ಬಳಿ ತೆರಳಿ ಇಬ್ಬರ ಕಷ್ಟವನ್ನು ಆಲಿಸಿ 10 ನಿಮಿಷದಲ್ಲಿ ತುರ್ತು ಕೆಲಸದ ನೆಪವೊಡ್ಡಿ ಬೆಂಗಳೂರು ಕಡೆ ಮುಖ ಮಾಡಿದರು.
ಇದರಿಂದ ಗ್ರಾಮಸ್ಥರು ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದ ಮಲೆಮನೆ ಸಮೀಪದ ಜಯಂತ ಎಂಬುವರು ತಮ್ಮ ಅಳಲನ್ನು ತೋಡಿಕೊಂಡಿದ್ದ ಮನಕರಗುವಂತೆ ಮಾಡಿತ್ತು.
ಮೇಗೂರಿನ ಶಾಂತ ಎಂಬುವರು ಮಾತನಾಡಿ ನಮ್ಮ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳು ಹಾನಿಯಾಗಿ ರಸ್ತೆ ಮುಚ್ಚಿಹೋಗಿದೆ. ಈ ವರೆಗೂ ಗ್ರಾಮಕ್ಕೆ ಕಿಂಚಿತ್ತು ಪರಿಹಾರ ಬಂದಿಲ್ಲ. — ಮಲೆಮನೆ ವರೆಗೂ ಮಾತ್ರ ಬಂದು ಭೇಟಿ ನೀಡಿ ಹಿಂದಿರುಗುತ್ತಾರೆ ಎಂದು ರೋಧಿಸಿದರು. ನೆರೆ ಸಂತ್ರಸ್ತರ ಭೇಟಿಗಾಗಿ ಬಂದಿದ್ದ ಸಿಎಂ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 30ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದರು.
ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲಿಯವರೆಗೂ ಪ್ರಗತಿಯಲ್ಲಿರುವ ಕಮಗಾರಿಯನ್ನು ನಿಲ್ಲಿಸಿ. ನೆರೆ ಪರಿಹಾರ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ನೂತನ ಸಚಿವ ಸಿ.ಟಿ.ರವಿ, ಶಾಸಕರಾದ ಎನ್.ಪಿ.ಕುಮಾರಸ್ವಾಮಿ, ಟಿ.ಡಿ.ರಾಮೇಗೌಡ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಸಿಇಒ ಅಶ್ವತಿ, ಪೊಲೀಸ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಮತ್ತಿತರರು ಇದ್ದರು.