ತಗ್ಗಿದ ನೆರೆ, ಆದರೆ ಸಂತ್ರಸ್ತರ ಬದುಕಿಗೆ ಬರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ನೆರೆ ತಗ್ಗಿದೆ; ಆದರೆ ಬದುಕಿಗೆ ದೊಡ್ಡ ಬರೆ ಎಳೆದಿದೆ. ಬೀದಿಗೆ ಬಿದ್ದ ರೈತ, ವರ್ತಕರು, ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಅಳಿದುಳಿದ ವಸ್ತುಗಳೊಂದಿಗೆ ತಮ್ಮ ಬದುಕು ರೂಪಿಸಿಕೊಳ್ಳಲು ಹೆಣಗಾಡಬೇಕಾಗಿದೆ.

ತಮ್ಮೆದುರೇ ತಮ್ಮವರನ್ನು, ಮಕ್ಕಳನ್ನು, ಅಪಾರ ಆಸ್ತಿಯನ್ನು ಕಳೆದುಕೊಂಡು ಬೀದಿಪಾಲಾದವರ ಗೋಳಾಟ, ಆಘಾತದಿಂದ ಚೇತರಿಸಿಕೊಳ್ಳಲಾಗದೆ ನರಳಾಟ, ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಗರ್ಭಿಣಿಯರು, ವೃದ್ಧರು, ಮಹಿಳೆಯರ ಪರದಾಟ, ದಶಕಗಳ ಕಾಲ ಕಾಪಿಟ್ಟುಕೊಂಡ ಬದುಕು ಸರ್ವನಾಶವಾದವರ ದುಃಖದ ಕಟ್ಟೆಯೊಡೆದಿತ್ತು.

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಸೇರಿದಂತೆ ಹದಿನೇಳು ಜಿಲ್ಲೆಗಳಲ್ಲಿ ವರುಣನ ಆರ್ಭಟ, ಪ್ರವಾಹದ ಆವೇಗಕ್ಕೆ ಸಿಲುಕಿ ಬದುಕು ತರಗೆಲೆಯಂತಾಗಿ; ರಾಜ್ಯದ 1224 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 2.500 ಲಕ್ಷದಷ್ಟು ಸಂತ್ರಸ್ಥರು ಅತಂತ್ರರಾಗಿದ್ದಾರೆ.

ಸುಮಾರು 800 ಪರಿಹಾರ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಕಳೆದ ಒಂದು ವಾರದಿಂದ ಕನಿಷ್ಟ ಸೌಲಭ್ಯಗಳಿಲ್ಲದೆ ಅತ್ತ ಮನೆಗಳಿಗೂ ತೆರಳಲಾಗದೇ ಜನ ಪರಿತಪಿಸುತ್ತಿದ್ದಾರೆ.

ಮಳೆ ಸೃಷ್ಟಿಸಿದ ಅನಾಹುತ, ಪ್ರವಾಹ ಉಂಟು ಮಾಡಿದ ಅವಘಡಗಳಿಗೆ ಬಸವಳಿದಿರುವ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಮುಂದೇನು ಎಂಬ ಆತಂಕ ಮನೆ ಮಾಡಿದೆ. ರಾಜಕಾರಣಿಗಳು, ಜನಪ್ರತಿನಿಧಿಗಳು, ಸಮೀಕ್ಷೆ, ಭೇಟಿ ನೀಡಿ ಭರವಸೆ ನೀಡುತ್ತಿದ್ದಾರೆ.

ಆದರೆ ಕುಸಿದು ಬಿದ್ದ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವುದು, ನೀರಿನಲ್ಲಿ ಮುಳುಗಿ ಹೋದ ಹೊಲ ಗದ್ದೆಗಳಲ್ಲಿ ಮತ್ತೆ ಬೆಳೆ ಬೆಳೆಯುವಂತಾಗಲು ಅದೆಷ್ಟು ಕಾಲ ಬೇಕೋ..? ನಮ್ಮ ಬದುಕು ಮುಗಿದೇ ಹೋಯಿತೇ ಎಂಬ ಆತಂಕದಲ್ಲಿ ಕಾಲ ಹಾಕುತ್ತಿದ್ದಾರೆ. ಪ್ರವಾಹ ಇಳಿಮುಖವಾಗಿದೆ. ಗ್ರಾಮಕ್ಕೆ ನುಗ್ಗಿರುವ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲವರು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಆದರೂ ಸಾಂಕ್ರಾಮಿಕ ರೋಗದ ಭೀತಿ ಕಾಡತೊಡಗಿದೆ.

ಒಟ್ಟಾರೆ ಒಂದಲ್ಲಾ ಒಂದು ಸಮಸ್ಯೆ ಎದುರಾಗಿದೆ. ಸರ್ಕಾರ ನೀಡುವ ಪರಿಹಾರಕ್ಕಾಗಿ ಎದುರು ನೋಡುತ್ತಿರುವ ಸಂತ್ರಸ್ತರು ಅದಕ್ಕಾಗಿ ಸಾಕಷ್ಟು ದಾಖಲೆಗಳನ್ನು ಒದಗಿಸಬೇಕು. ಪ್ರಸ್ತುತ ದಾಖಲೆಗಳೆಲ್ಲ ನೀರಿನಲ್ಲಿ ಸಿಲುಕಿಕೊಂಡಿದೆ. ಏನು ಮಾಡುವುದು ಎಂದು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಬಂದವರ ಪರಿಸ್ಥಿತಿ ಶೋಚನೀಯವಾಗಿದೆ. ಮನೆಯಲ್ಲಿದ್ದ ಬಟ್ಟೆ, ಬರೆ, ಜಮೀನಿಗೆ ಸಂಬಂಧಿಸಿದ ದಾಖಲೆಗಳು, ಮಕ್ಕಳ ಪುಸ್ತಕ ಸೇರಿದಂತೆ ಎಲ್ಲವನ್ನೂ ನೀರು ಆಪೋಶನ ತೆಗೆದುಕೊಂಡಿದೆ. ಮುಂದೇನು ಮಾಡುವುದು? ಸಹಜ ಸ್ಥಿತಿಗೆ ಬರಲು ಇನ್ನೆಷ್ಟು ದಿನ ಬೇಕಾಗಬಹುದು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ.

ಮತ್ತೊಂದೆಡೆ ಕುಸಿದ ಮನೆಗಳು, ಸತ್ತು ಬಿದ್ದ ಜನುವಾರುಗಳು ಎಲ್ಲವನ್ನೂ ನೋಡಿ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಗುಲ್ಬರ್ಗ, ರಾಯಚೂರು, ಗದಗ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಹೊಡೆತ, ಪ್ರವಾಹದ ಸೆಳೆತಕ್ಕೆ ಸಿಲುಕಿ ಉಂಟಾದ ಅನಾಹುತಗಳಿಗೆ ಜನ ಪರಿತಪಿಸುತ್ತಿದ್ದಾರೆ. ನೆರೆ ತಗ್ಗಿದರೂ ಬದುಕಿನ ಮೇಲೆ ಎಳೆದಿರುವ ಬರೆ ಆರಿಲ್ಲ. ಇನ್ನು ನೀರಿನಲ್ಲಿ ಸಿಲುಕಿರುವ ಹಲವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

Facebook Comments