ಆಪತ್ಭಾಂಧವರಂತೆ ಬಂದು ಜೀವ ಉಳಿಸಿದ ಧೀರ ಯೋಧರಿಗೆ ಆತ್ಮೀಯ ಬೀಳ್ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.13- ನಿಮ್ಮ ನೆರವನ್ನು ನಾವು ಮರೆಯುವುದಿಲ್ಲ. ಸಂಕಷ್ಟದಲ್ಲಿದ್ದ ನಮ್ಮನ್ನು ನೀವು ರಕ್ಷಿಸಿದ್ದೀರಿ. ನಮ್ಮ ಪಾಲಿನ ಆಪತ್ಭಾಂಧವರು ನೀವು ಎಂದು ಆರತಿ ಎತ್ತಿ ರಾಖಿ ಕಟ್ಟಿ ಭಾರತೀಯ ಯೋಧರನ್ನು ಬೀಳ್ಕೊಟ್ಟರು.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಕಂಡುಬಂದ ಹೃದಯ ಸ್ಪರ್ಶಿ ಸನ್ನಿವೇಶವಿದು. ಕಳೆದ 10 ದಿನಗಳಿಂದ ಎಡಬಿಡದೆ ಸುರಿದ ಮಳೆಯಿಂದ ಗುಡ್ಡ ಕುಸಿದು ಹಲವು ಜನ ಅಪಾಯದಲ್ಲಿ ಸಿಲುಕಿದ್ದರು. ಇವರ ನೆರವಿಗೆ ಧಾವಿಸಿದ ಸೇನಾಪಡೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸಿದರು.

ಇಂದು ಹಿಂದಿರುಗುವ ಸಮಯದಲ್ಲಿ ಮೂಡಿಗೆರೆ ಸುತ್ತಮುತ್ತಲ ಗ್ರಾಮಸ್ಥರು, ಮಹಿಳೆಯರು ಯೋಧರಿಗೆ ಆರತಿ ಎತ್ತಿ ರಾಖಿ ಕಟ್ಟಿ ಬೀಳ್ಕೊಟ್ಟರು. ಯಾವಾಗ ಕರೆದರೂ ನಿಮ್ಮ ಸೇವೆಗೆ ನಾವು ಬದ್ಧರಾಗಿರುತ್ತೇವೆ. ಭಾರತೀಯ ಸೇನೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಕಾರ್ಯಪಡೆಯ ಮುಖ್ಯಸ್ಥರು ತಿಳಿಸಿದರು.

ಇತ್ತ ಚಿಕ್ಕೋಡಿಯಲ್ಲಿ ಕಾರ್ಯಾಚರಣೆ ಮುಗಿಸಿ ಹೊರಟ ಯೋಧರನ್ನು ಕೂಡ ಇದೇ ರೀತಿ ಬೀಳ್ಕೊಡಲಾಯಿತು. ಇಲ್ಲಿನ ಸಂತ್ರಸ್ತರು ತಮ್ಮ ಪ್ರಾಣ ರಕ್ಷಿಸಿದ ಯೋಧರಿಗೆ ನಮಸ್ಕರಿಸಿ ನಿಮ್ಮಿಂದ ನಾವು ಬಚಾವಾದೆವು. ನಿಮಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ ಎಂದು ಹೇಳಿದರು.

ನಗುಮೊಗದಿಂದ ಎಲ್ಲರತ್ತ ಕೈ ಬೀಸಿ ಯಾವುದೇ ರೀತಿಯ ಭಯ ಬೇಡ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಹೊರಟರು. ಯೋಧರ ನಿರ್ಗಮನದ ಸುದ್ದಿ ಕೇಳಿ ಸಂತ್ರಸ್ತರೆಲ್ಲ ಓಡೋಡಿ ಬಂದಿದ್ದು ವಿಶೇಷವಾಗಿತ್ತು.

Facebook Comments