ಉತ್ತರ ಕರ್ನಾಟಕ ಜಲಪ್ರಳಯವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.11- ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ನೆರೆ ಹಾವಳಿಯಿಂದ ನಿರೀಕ್ಷೆಗೂ ಮೀರಿದ ನಷ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಪರಿಹಾರ ನೀಡಬೇಕೆಂದು ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದರು.

ನಿಯಮ 68ರಡಿ ವಿಧಾನಪರಿಷತ್‍ನಲ್ಲಿ ಮಾತನಾಡಿದ ಅವರು, 22 ಜಿಲ್ಲೆ, 103 ತಾಲ್ಲೂಕುಗಳಲ್ಲಿ ಪ್ರವಾಹ ಉಂಟಾಗಿ ಮನೆ-ಮಠ, ಆಸ್ತಿ-ಪಾಸ್ತಿ, ಬೆಳೆ ಎಲ್ಲವನ್ನು ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.

ಕೆಪಿಸಿಸಿ ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ನೆರೆ ಹಾವಳಿಯಿಂದ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಈವರೆಗೂ ಕೇವಲ 352 ಕೋಟಿ ಹಣ ಬಿಡುಗಡೆ ಮಾಡಿದೆ. ಇನ್ನುಳಿದ ಹಣ ಬಿಡುಗಡೆಗೆ ಏಕೆ ತಾತ್ಸಾರ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಸಚಿವ ಸಿ.ಟಿ.ರವಿ ಮಧ್ಯಪ್ರವೇಶಿಸಿ, ಸದಸ್ಯರು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು. ಒಂದು ಲಕ್ಷ ಕೋಟಿ ನಷ್ಟವಾಗಿದ್ದರೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿ. ಸರ್ಕಾರ ನಡೆಸಿದ ಸಮೀಕ್ಷೆಗೂ ನೀವು ಹೇಳುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಪ್ರತಿ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಸದಸ್ಯರಾದ ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಸೇರಿದಂತೆ ಮತ್ತಿತರರು ಸರ್ಕಾರದ ವಿರುದ್ಧ ಮುಗಿ ಬಿದ್ದರು.

ನಮ್ಮ ಪಕ್ಷದ ವತಿಯಿಂದಲೇ ನಡೆಸಿರುವ ಸಮೀಕ್ಷೆಯಂತೆ ರಾಜ್ಯದಲ್ಲಿ ನೆರೆಯಿಂದ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. ವಾಸ್ತವ ಸ್ಥಿತಿಯನ್ನು ಹೇಳಿದರೆ ಸಚಿವರು ಏಕೆ ಒಪ್ಪಿಕೊಳ್ಳುವುದಿಲ್ಲ. ಈಗಲೂ ಅನೇಕ ಕಡೆ ಜನರಿಗೆ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ರಸ್ತೆ ಪಕ್ಕದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ದೇವರಿಗೆ ಪ್ರೀತಿ. ನಿಮಗೆ ಇರುವುದನ್ನು ಹೇಳಿದರೆ ಏಕೆ ಸಂಕಟ ಎಂದು ತರಾಟೆಗೆ ತೆಗೆದುಕೊಂಡರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ಪ್ರಾಣೇಶ್ ಅವರು, ಸದಸ್ಯರು ಒಂದು ಲಕ್ಷ ಕೋಟಿ ನಷ್ಟವಾಗಿದೆ ಎಂದು ಹೇಳುತ್ತಿದ್ದಾರೆ. ಯಾವ ಜಿಲ್ಲೆಗಳಲ್ಲಿ ನಷ್ಟವಾಗಿದೆ ಎಂಬುದರ ಬಗ್ಗೆ ಅಂಕಿಸಂಖ್ಯೆ ಸಮೇತ ಸದನಕ್ಕೆ ಮಾಹಿತಿ ನೀಡಿ. 35ಸಾವಿರ ಕಿ.ಮೀ. ರಸ್ತೆ ಹಾಳಾಗಿದೆ ಎಂದು ಹೇಳುತ್ತಿದ್ದಾರೆ.

ವಾಸ್ತವವಾಗಿ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳೇ ಇಷ್ಟು ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ ಎಂದು ಮನವಿ ಮಾಡಿದರು.
ಇದರಿಂದ ಕೆರಳಿದ ಎಸ್.ಆರ್.ಪಾಟೀಲ್, ಸದಸ್ಯರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಬೇಡ. ಎಲ್ಲವನ್ನು ಚೆನ್ನಾಗಿ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿಬಿಡಿ ಎಂದು ಅಸಮಾಧಾನ ಹೊರ ಹಾಕಿದರು.

ಆಗ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ, ನಾವು ಎಲ್ಲಿಯೂ ಅವರು ಮಾತನಾಡಲು ಅಡ್ಡಿ ಪಡಿಸಿಲ್ಲ. ನೀವು ಏನೇ ಟೀಕೆ ಟಿಪ್ಪಣಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲು ಸರ್ಕಾರ ಸಿದ್ದವಿದೆ. ಆದರೆ, ಸದನಕ್ಕೆ ತಪ್ಪು ಮಾಹಿತಿ ನೀಡದಂತೆ ಸಭಾಪತಿ ಮೂಲಕ ಮನವಿ ಮಾಡಿದರು.

ಮಾತು ಮುಂದುವರೆಸಿದ ಪ್ರಕಾಶ್‍ರಾಥೋಡ್, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಇಷ್ಟು ಭೀಕರ ಪರಿಸ್ಥಿತಿ ಇದ್ದರೂ ಪ್ರಧಾನಿ ಮೋದಿ ಅವರು ಕನಿಷ್ಠ ಪಕ್ಷ ಟ್ವೀಟ್ ಮೂಲಕ ಸಾಂತ್ವನ ಹೇಳಲಿಲ್ಲ. ಕಡೆ ಪಕ್ಷ ಭೇಟಿಗೆ ಅವಕಾಶ ನೀಡುವಂತೆ ಸಿದ್ದರಾಮಯ್ಯ ಅವರ ಮೂಲಕ ಮನವಿ ಮಾಡಿದ್ದೆವು ಅದಕ್ಕೂ ಕೂಡ ಅವಕಾಶ ಕಲ್ಪಿಸಲಿಲ್ಲ. ಕೇಂದ್ರ ಸರ್ಕಾರ ಏಕೆ ಈ ರೀತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸರ್ಕಾರ ಇದೆಯೋ, ಇಲ್ಲವೇ ನಿದ್ದೆ ಮಾಡುತ್ತಿದೆಯೋ ಎಂದು ತರಾಟೆಗೆ ತೆಗೆದುಕೊಂಡರು.

Facebook Comments