ರಾಜ್ಯದಲ್ಲಿ ಮಳೆ ಅವಾಂತರ : ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20-ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೊಡಗು, ಚಿಕ್ಕಮಗಳೂರು, ರಾಯಚೂರು, ಯಾದಗಿರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ವರುಣನ ಆರ್ಭಟಕ್ಕೆ ಕಲಬುರಗಿ ಜಿಲ್ಲೆ ಅಳಂದ ತಾಲ್ಲೂಕಿನ ಬೊಮ್ಮನಹಳ್ಳಿ ಬಳಿ ಬೆಸ್ಕಾಂ ಇಂಜಿನಿಯರ್ ಕೊಚ್ಚಿಹೋಗಿದ್ದು, ಇತ್ತ ಮಂಗಳೂರಿನಲ್ಲಿ ಸುರಿದ ಮಳೆಯಿಂದ ಕಾಂಪೌಂಡ್ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.

ಅಫ್ಜಲ್‍ಪುರ ಬೆಸ್ಕಾಂ ಎಇಇ ಆಗಿದ್ದ ಸಿದ್ದರಾಜು ಯಳಸಗಿಯಲ್ಲಿರುವ ತನ್ನ ತಾಯಿಯನ್ನು ಮಾತನಾಡಿಸಿಕೊಂಡು ಹಿಂದಿರುಗುವಾಗ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.  ಮಂಗಳೂರಿನ ಬಂಗ್ರಾಕೂಳೂರಿನ ಬಳಿ ತೋಟದ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಕಾಪೌಂಡ್ ಕುಸಿದು, ನೀರುಮಾರ್ಗದ ನಿವಾಸಿ ಉಮೇಶ್(38) ಎಂಬುವರು ಮೃತಪಟ್ಟಿದ್ದಾರೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡುಗು, ಹಾಸನ ಸೇರಿದಂತೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿಯಲ್ಲಿ ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನದಿ, ಹಳ್ಳಕೊಳ್ಳಗಳು ತುಂಬಿ ಹರಿದು ಊರುಗಳಿಗೆ ನೀರು ನುಗ್ಗಿದೆ. ಉಡುಪಿಯ ಬಹುತೇಕ ಪ್ರದೇಶಗಳು ಜಲಾವೃತ್ತಗೊಂಡಿದೆ.  ಇಲ್ಲಿನ ಸ್ವರ್ಣನದಿ ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಭಾಗಗಳಲ್ಲಿ ಇರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ. ಮಲ್ಪೆ, ಮೊಣಕಾಲ್ಮೂರು, ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ.

ಉಡುಪಿ ಶ್ರೀಕೃಷ್ಣ ಮಠದ ಸಮೀಪ ಇರುವ ರಾಜಾಂಗಣ ಯಾತ್ರಿಕ ವಾಹನ ನಿಲುಗಡೆ ಜಾಗದಲ್ಲಿ ಕೂಡ ನೀರು ನುಗ್ಗಿ ನೂರಾರು ಕಾರುಗಳು, ಬೈಕ್‍ಗಳು ಜಲಾವೃತವಾಗಿದೆ. ಇಂದ್ರಾಣಿ ನದಿ ಮತ್ತು ಅಕ್ಕಪಕ್ಕದ ಪ್ರದೇಶಗಳು ಕೂಡ ನೀರಿನಿಂದ ಆವೃತವಾಗಿವೆ.  ಗೋಪಾಲ್ ಮೀನಾ ನೇತೃತ್ವದ ಎನ್‍ಡಿಆರ್‍ಎಫ್ ತಂಡ ಪ್ರವಾಹ ಪೀಡಿತ ಸ್ಥಳಗಳಿಗೆ ದೌಡಾಯಿಸಿ ನೀರಿನಲ್ಲಿ ಸಿಲುಕಿದ್ದ ಹಲವು ಜನರನ್ನು ರಕ್ಷಿಸಿದ್ದಾರೆ.

ಮಳೆಯಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದ ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಎಸ್‍ಡಿಆರ್‍ಎಫ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ದೊಡ್ಡ ದೊಡ್ಡ ಬೋಟ್‍ಗಳ ಮೂಲಕ ಪ್ರವಾಹದಲ್ಲಿ ಸಿಲುಕಿರುವ ಜನರನ್ನ ರಕ್ಷಣೆ ಮಾಡಲಾಗಿದೆ. ಬಜೆ ಡ್ಯಾಂ ಪಕ್ಕದಲ್ಲಿನ ವಿದ್ಯುತ್ ಉತ್ಪಾದನಾ ಘಟಕ ನೀರಿನಿಂದ ಮುಳುಗಿದ್ದು, ಅಲ್ಲಿ ಸಿಲುಕಿಕೊಂಡಿರುವ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಉಡುಪಿಯ ಮಾಳಿಘಾಟಿ ಸಮೀಪ ಗುಡ್ಡ ಕುಸಿದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಅಗತ್ಯ ಕ್ರಮ ಕೈಗೊಂಡು ಸಂತ್ರಸ್ತರ ನೆರವಿಗೆ ಧಾವಿಸುವಂತೆ ಗೃಹ ಸಚಿವ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.  ರಕ್ಷಣಾ ಕಾರ್ಯಕ್ಕೆ ಅಗತ್ಯಬಿದ್ದರೆ ಹೆಲಿಕಾಪ್ಟರ್ ಬಳಸುವಂತೆ ಸೂಚಿಸಲಾಗಿದ್ದು, ಈ ಬಗ್ಗೆ ಕಂದಾಯ ಸಚಿವರೊಂದಿಗೂ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಬ್ರಹ್ಮಾವರ ತಾಲ್ಲೂಕಿನ ನೀಲಾವರಿ ಮಟ್ಪಾಡಿ ಗ್ರಾಮಗಳಲ್ಲಿನ ಜಮೀನು ತೋಟಗಳಿಗೆ ನೀರು ನುಗ್ಗಿದೆ. ಉತ್ತರಕರ್ನಾಟಕದ ಹಲವೆಡೆ ಕೂಡ ಮಳೆಯ ಆರ್ಭಟ ಮುಂದುವರೆದಿದೆ. ಬಿಸಿಲ ನಾಡು ರಾಯಚೂರು ಮಳೆಯ ನಾಡಾಗಿದೆ. ರಾಯಚೂರು ನಗರದ ಬೆಸ್ಕಾಂ ಉಗ್ರಾಣ, ಕಚೇರಿಗೆ ರಾಜಕಾಲುವೆ ನೀರು ಹರಿದಿದೆ.  ಯಾದಗಿರಿಯಲ್ಲೂ ಕೂಡ ಮಳೆಯ ಅರ್ಭಟ ಜೋರಾಗಿದ್ದು, ಭೀಮಾನದಿ ಉಕ್ಕಿ ಹರಿಯುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಭಾಗಮಂಡಲ, ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಈ ಹಿಂದೆ ಮಳೆಯಾದ ಪರಿಣಾಮ ಗುಡ್ಡ ಕುಸಿದು ಅನಾಹುತಗಳು ಸಂಭವಿಸಿದ್ದವು. ಮತ್ತೆ ಮಳೆಯಾಗಿ ಇನ್ನೇನು ಅವಾಂತರ ಸೃಷ್ಟಿಯಾಗುತ್ತದೋ ಎಂದು ಜನ ಭೀತಿಗೊಳಗಾಗಿದ್ದಾರೆ.  ಚಿಕ್ಕಮಗಳೂರಿನ ಹಲವೆಡೆ ಕೂಡ ಭಾರೀ ಮಳೆಯಾಗುತ್ತಿದ್ದು, ಕಳಸಾ, ಹೊರನಾಡು ನಡುವಿನ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರ ಕಾರೊಂದು ನೀರಿನ ಪ್ರವಾಹಕ್ಕೆ ಸಿಲುಕಿದ್ದು, ಕಾರಿನಲ್ಲಿದ್ದ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಕೂಡ ಮುಳುಗಡೆಯಾಗಿದೆ. ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಕೆರೆಗಳು ತುಂಬಿ ಹರಿಯುತ್ತಿವೆ.
ವಿಜಯಪುರದಲ್ಲಿ ವರುಣ ಅಬ್ಬರಿಸುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ಕಬಿನಿಯಿಂದ ನೀರು: ಇತ್ತ ಯಾವುದೇ ಮುನ್ಸೂಚನೆ ಇಲ್ಲದೆ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ಎಚ್‍ಡಿಕೋಟೆ ಸಮೀಪದ ಸೇತುವೆ ಮುಳುಗಡೆಯಾಗಿದೆ. ಮುನ್ಸೂಚನೆಯಿಲ್ಲದೆ 30 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಹೊರಬಿಟ್ಟು ಎಡವಟ್ಟು ಮಾಡಿದ್ದಾರೆ. ಗೇಟ್ ಹಾಕದೆ, ಸೈರನ್ ಮೊಳಗಿಸದೆ ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ಅಪಾರ ಪ್ರಮಾಣದ ನೀರು ಬಿಟ್ಟಿರುವುದಕ್ಕೆ ಜನ ಜೀವ ಭಯದಿಂದ ಒಂದು ಕಡೆಯಿಂದ ಮತ್ತೊಂದು ಬದಿಗೆ ತೆರಳುತ್ತಿದ್ದಾರೆ.
ನೀರಿನ ಹರಿವು ಹೆಚ್ಚಾದ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ನೀರಿನ ಹರಿವಿನ ಪ್ರಮಾಣ ಕಡಿಮೆ ಮಾಡಿದ್ದಾರೆ.

Facebook Comments