ಕಾರ್ತಿ ಚಿದಂಬರಮ್ ವಿದೇಶ ಪ್ರವಾಸಕ್ಕೆ ಸುಪ್ರೀಂ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.22 (ಪಿಟಿಐ)- ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸುತ್ತಿರುವ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಮಾಜಿ ವಿತ್ತ ಸಚಿವ ಎಂ. ಚಿದಂಬರಮ್ ಅವರ ಪುತ್ರ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಮ್ ಅವರಿಗೆ ವಿದೇಶ ಪ್ರವಾಸ ಮಾಡಲು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಕಾರ್ತಿ ಅವರಿಗೆ 2 ಕೋಟಿ ರೂ. ನೋಂದಾವಣೆಯಲ್ಲಿ ಠೇವಣಿ ಇಡಬೇಕು ಹಾಗೂ ತಾವು ಹೊರದೇಶದ ಯಾವ ಸ್ಥಳಕ್ಕೆ ಹೋಗಲಿದ್ದೇನೆ ಮತ್ತು ಅಲ್ಲಿ ವಾಸಿಸುವ ಸ್ಥಳದ ವಿವರಗಳನ್ನು ಮೊದಲೇ ಕೋರ್ಟಿಗೆ ಸಲ್ಲಿಸಬೇಕು ಎಂದು ನಿರ್ದೇಶನ ಹೊರಡಿಸಿದೆ.ಇದನ್ನು ವಿರೋಧಿಸಿದ ಹೆಚ್ಚುವರಿ ಸಾಲಿಟರ್ ಜನರಲ್ ಎಸ್.ವಿ. ರಾಜು, ಈ ಹಿಂದೆ ಚಿದಂಬರಮ್ ಅವರು ವಿದೇಶಗಳಿಗೆ ಹೋಗುವಾಗ 10 ಕೋಟಿ ರೂ. ಠೇವಣಿ ಸಲ್ಲಿಸಿದ್ದರು ಎಂದು ಕೋರ್ಟ್ಗೆ ಮಾಹಿತಿ ನೀಡಿದರು.

ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಕಪಿಲ್ ಸಿಬಲ್ ಅವರು ಕಾರ್ತಿ ಚಿದಂಬರಮ್ ಪರ ವಾದಿಸುತ್ತಿದ್ದು, ಚಿದಂಬರಮ್ ಒಬ್ಬ ಸಂಸದರಾಗಿದ್ದಾರೆ. ಅವರು ಎಲ್ಲೂ ಓಡಿಹೋಗುವುದಿಲ್ಲ. ಅವರ ಬಗ್ಗೆ ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದರು.

Facebook Comments