ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಗರಿಗೆದರಿದ ಚಟುವಟಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆ ನಡೆಸುವಂತೆ ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದ ಬೆನ್ನಲ್ಲೇ ಕಸಾಪ ಚುನಾವಣಾ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‍ಗೆ ಕಳೆದ ಮೇ 9ರಂದು ಚುನಾವಣೆ ಘೋಷಣೆಯಾಗಿತ್ತು. ಆಗಲೇ ಕಸಾಪ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್‍ಗೆ ಎರಡು ತಿಂಗಳೊಳಗೆ ಚುನಾವಣೆ ನಡೆಸಬೇಕೆಂದು ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದ್ದು, ಆಕಾಂಕ್ಷಿಗಳು ಮತ್ತೆ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ವ.ಚ.ಚನ್ನೇಗೌಡ, ಶೇಖರ್‍ ಗೌಡ ಮಾಲಿಪಾಟೀಲ್, ಮಹೇಶ್ ಜೋಷಿ, ಸಿ.ಕೆ.ರಾಮೇಗೌಡ ಮುಂತಾದವರು ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದ್ದು, ಚುನಾವಣಾ ದಿನಾಂಕ ಘೋಷಣೆ ನಿರೀಕ್ಷಣೆಯಲ್ಲಿದ್ದರು. ಈಗ ನ್ಯಾಯಾಲಯ ಚುನಾವಣಾ ದಿನಾಂಕ ಘೋಷಣೆ ಮಾಡಲು ಆದೇಶ ನೀಡಿದ್ದು, ಮುಂದಿನ ವಾರದಲ್ಲಿ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗಾಗಿ ಅಭ್ಯರ್ಥಿಗಳ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಕಳೆದ ಒಂದು ವಾರದಿಂದ ಸಭೆ-ಸಮಾರಂಭಗಳು ನಡೆಯುತ್ತಿವೆ.

ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ 3.10 ಲಕ್ಷ ಮತದಾರರಿದ್ದು, ಈ ಹಿಂದೆ ಅಂಚೆ ಪತ್ರದ ಮೂಲಕ ಮನವಿ ಸಲ್ಲಿಸುವುದು, ಜಿಲ್ಲಾದ್ಯಂತ ಪ್ರಚಾರ ಕೈಗೊಳ್ಳುವುದು ಸೇರಿದಂತೆ ನಾನಾ ಕೆಲಸಗಳಿಗೆ ಈಗಾಗಲೇ ಆಕಾಂಕ್ಷಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಕಸಾಪದ ಒಬ್ಬ ಸದಸ್ಯನಿಗೆ ಕಾಗದ ಬರೆದು ಮತ ನೀಡುವಂತೆ ಮನವಿ ಮಾಡಲು 5 ರೂ. ಅಂಚೆ ಸೇವೆ ಬಳಸಿದರೂ 15ರಿಂದ 16 ಲಕ್ಷ ರೂ. ಬೇಕಾಗುತ್ತದೆ. ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಮತದಾರರೊಂದಿಗೆ ಚರ್ಚಿಸಿ ಕನಿಷ್ಠ ಊಟ, ತಿಂಡಿ ವ್ಯವಸ್ಥೆ ಮಾಡಿದರೂ ಖರ್ಚುಗಳ ಲೆಕ್ಕ ಕೋಟಿ ತಲುಪುತ್ತದೆ.

ರಾಜ್ಯಾಧ್ಯಕ್ಷ ಆಕಾಂಕ್ಷಿಗಳಾಗಿರುವವರು ಈಗಾಗಲೇ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾದರೆ ಪ್ರಚಾರ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ.

ಮುಂದೂಡಿಕೆಯಾಗಿದ್ದ ಚುನಾವಣೆ ನಡೆಸಬೇಕೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶೇಖರ್‍ಗೌಡ ಮಾಲಿ ಮಾಟೀಲ್ ಅವರು ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಮಹಾನಗರ ಪಾಲಿಕೆಗಳ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳನ್ನು ಸರ್ಕಾರ ನಡೆಸಿದೆ. ಇದೇ ರೀತಿ ಕನ್ನಡ ಸಾಹಿತ್ಯ ಪರಿಷತ್‍ಗೂ ಚುನಾವಣೆ ನಡೆಸಬೇಕೆಂದು ಮಂಡಿಸಿದ ವಾದವನ್ನು ಎತ್ತಿ ಹಿಡಿದ ಧಾರವಾಡ ಹೈಕೋರ್ಟ್ ಎರಡು ತಿಂಗಳೊಳಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು.

ಈ ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ತಲುಪಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ಅವರು ಮುಂದಿನ ವಾರದಲ್ಲಿ ಚುನಾವಣಾಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಸಹಕಾರ ಇಲಾಖೆ ಕಾರ್ಯದರ್ಶಿ, ಚುನಾವಣಾಕಾರಿ ಹಾಗೂ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಶೀಘ್ರ ಚುನಾವಣೆ ನಡೆಸಬೇಕೆಂದು ಮನವಿ ಕೂಡ ಮಾಡಿದ್ದರು.

ಅದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವಾರದಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದ್ದು, ಚಟುವಟಿಕೆಗಳು ಗರಿಗೆದರಿವೆ.

Facebook Comments