ಆರ್ಟಿಕಲ್ 370 ರದ್ದತಿ ಬಳಿಕ ಕಾಶ್ಮೀರದಲ್ಲಿ 10,000 ಕೋಟಿ ರೂ. ಆರ್ಥಿಕ ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಅ.27-ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ನಂತರ 84 ದಿನಗಳ ಅವಧಿಯಲ್ಲಿ ವಾಣಿಜ್ಯ ಸಮುದಾಯಕ್ಕೆ ಸುಮಾರು 10,000 ಕೋಟಿ ರೂ.ಗಳ ಆರ್ಥಿಕ ನಷ್ಟವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿತ್ತು.

ಆಗಿನಿಂದ 64 ದಿನಗಳ ವಶಿಗೆ ಕಣಿವೆ ಪ್ರಾಂತ್ಯದ ಮಾರುಕಟ್ಟೆಗಳು, ವಾಣಿಜ್ಯ ವಹಿವಾಟುಗಳು, ಸಾರ್ವಜನಿಕ ಸಾಗಿಗೆ ಇತ್ಯಾದಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇವೆಲ್ಲದರ ಪರಿಣಾಮವಾಗಿ ಈವರೆಗೆ ಸುಮಾರು 10,000 ಕೋಟಿ ರೂ.ಗಳ ಆರ್ಥಿಕ ನಷ್ಟವಾಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಕೆಸಿಸಿಐ) ಅಧ್ಯಕ್ಷ ಶೇಖ್ ಆಶಿಖ್ ತಿಳಿಸಿದ್ದಾರೆ.

ಕೆಲವು ಅಂಗಡಿ ಮುಂಗಟ್ಟುಗಳಿಗೆ ಮುಂಜಾನೆ ಮತ್ತು ಮುಸ್ಸಂಜೆಯ ಕೆಲವು ತಾಸುಗಳ ಕಾಲ ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು. ಆರ್ಟಿಕಲ್ 370 ರದ್ದತಿ ನಂತರ ಕಾಶ್ಮೀರದಲ್ಲಿ ವಾಣಿಜ್ಯ ವಹಿವಾಟು ಈವರೆಗೆ ಸಹಜ ಸ್ಥಿತಿಗೆ ಬಂದಿಲ್ಲ. ಭಾರೀ ನಷ್ಟವಾಗಿದೆ. ಇದು ವಾಣಿಜ್ಯ ಸಮುದಾಯಕ್ಕೆ ಭಾರೀ ಹೊಡೆತ ನೀಡಿದೆ. ಇದರಿಂದ ಚೇತರಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಅವರು ಹೇಳಿದ್ದಾರೆ.

Facebook Comments