ಮುಚ್ಚುವ ಹಂತದಲ್ಲಿ ಎಂಎಸ್‍ಎಂಇಗಳು, ಸರ್ಕಾರದ ಸ್ಪಂದನೆಗೆ ಕಾಸಿಯಾ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿವೆ. ಕೊರೊನಾ ಪರಿಣಾಮವಾಗಿ ರಾಜ್ಯದಲ್ಲಿ ಶೇ.20ರಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ. ಅನೇಕ ಘಟಕಗಳು ತಮ್ಮ ವಹಿವಾಟಿನಲ್ಲಿ ಶೇ.30 ರಿಂದ 70ರಷ್ಟು ವೈಫಲ್ಯ ಕಂಡಿವೆ.

ಕಾಸಿಯಾ ಅಧ್ಯಕ್ಷರಾಗಿ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅವರು ಮಾರುಕಟ್ಟೆಗಳ ನಷ್ಟ, ನೌಕರರ ಪಾಳಿ ಸಂಖ್ಯೆಗಳನ್ನು ಮೊಟಕುಗೊಳಿಸಿ ವೇತನವನ್ನು ಸಕಾಲದಲ್ಲಿ ಪಾವತಿಸಲಾಗದೆ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೀಡಾಗಿರುವ ನಿಟ್ಟಿನಲ್ಲಿ ಇವುಗಳ ಪುನಶ್ಚೇತನಕ್ಕೆ ಸರ್ಕಾರ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಲಾಕ್‍ಡೌನ್ ನಂತರ ಕಾರ್ಮಿಕರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಪುನರಾರಂಭಿಸುವ ಮೂಲಕ ಕೈಗಾರಿಕೆ ಗಳನ್ನು ಮರು ಸ್ಥಾಪಿಸಲು ಕಷ್ಟಕರವಾಗಿದೆ. ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆಯನ್ನು ಸರಿದಾರಿಗೆ ತರುವುದು ಅತ್ಯಂತ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‍ಎಂಇಗಳಿಗೆ ಆರ್ಥಿಕ ನೆರವು ನೀಡುವುದು ತಕ್ಷಣದ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲುಪಿಸು ವಲ್ಲಿ ಕಾಸಿಯಾ ನಿರಂತರವಾಗಿ ತೊಡಗಿಸಿ ಕೊಂಡಿದೆ. ಪರಿಹಾರ ಕ್ರಮಗಳ ಅನುಷ್ಠಾನ ಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಿದೆ ಎಂದು ತಿಳಿಸಿದ ಅವರು, ಕಳೆದ ವಾರದ ಹಿಂದೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿ ಎಂಎಸ್‍ಎಂಇಗಳ ನೈಜ ಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

ಹಣಕಾಸು ವರ್ಷದ ಅಂತ್ಯದವರೆಗೆ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳ ಉದ್ಯೋಗಿಗಳ ವೇತನ ಪಾವತಿಸಲು ಸೂಕ್ತ ಹಣಕಾಸು ನೆರವು ನೀಡುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಒಂದು ಅವಗೆ ಎಂಎಸ್‍ಎಂಇಗಳ ಸಾಲಗಳ ಬಡ್ಡಿ ದರವನ್ನು ಶೇ.6ಕ್ಕೆ ಇಳಿಸಬೇಕೆಂದು ಮನವಿ ಮಾಡಿದರು.

ಸರ್ಕಾರವು ಎಂಎಸ್‍ಎಂಇಗಳ ಪರವಾಗಿ ಪಿಎಫ್ ಕೊಡುಗೆ ನೀಡಿದಂತೆ ಇಎಸ್‍ಐ ಕೊಡುಗೆಗಳನ್ನೂ ಪರಿಗಣಿಸಬೇಕು. ಸಹಕಾರಿ ಬ್ಯಾಂಕಿಂಗ್ ಸಂಸ್ಥೆಗಳು ಸಹ ತುರ್ತು ಕ್ರೆಡಿಟ್ ಲಿಂಕ್ ಗ್ಯಾರಂಟಿ ಯೋಜನೆಯಡಿ ಉದ್ಯಮಿಗಳಿಗೆ ಸಾಲ ನೀಡುವಲ್ಲಿ ಭಾಗಿಯಾಗಬೇಕು. ಇದರಿಂದ ಗ್ರಾಮೀಣ ಕೈಗಾರಿಕೆಗಳಿಗೆ ಸಹಾಯವಾಗುವುದಲ್ಲದೆ ವಿತರಣಾ ಜಾಲವನ್ನು ವಿಸ್ತರಿಸುತ್ತದೆ.

ಎಂಪಿಎ ಮಾನದಂಡಗಳನ್ನು ಸಡಿಲಗೊಳಿಸಬೇಕಾದ ಅಗತ್ಯವಿದೆ. ಎಸ್‍ಎಂಎ ಎರಡೂ ಘಟಕಗಳನ್ನು ತುರ್ತು ಕ್ರೆಡಿಟ್ ಲಿಂಕ್ ಗ್ಯಾರಂಟಿ ಯೋಜನೆಯಡಿ ಧನ ಸಹಾಯಕ್ಕಾಗಿ ಪರಿಗಣಿಸಬೇಕು. ಜಿಎಸ್‍ಟಿಯಲ್ಲಿನ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಜಿಎಸ್‍ಟಿ ದರದಲ್ಲಿ ಕಡಿತವನ್ನು ಪರಿಗಣಿಸಲು ಮತ್ತು ರಿಟರ್ನ್ ಫೈಲಿಂಗ್‍ಅನ್ನು ಸರಳೀಕರಣಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ, ಬಾಡಿಗೆ ಹಾಗೂ ಯುಟಿಲಿಟಿ ಬಿಲ್‍ಗಳನ್ನು ಒಂದು ಅವಗೆ ನೇರ ನಗದು ಮೂಲಕ ಪಾವತಿಸುವುದನ್ನು ಪರಿಗಣಿಸಲು ಕೋರಿದ್ದಾರೆ.

ಸಾಲ ಮರುಪಾವತಿ ಮೇಲಿನ ಮೊರಾಟೋರಿಯಂ ಅವಯನ್ನು ಹಣಕಾಸು ವರ್ಷಾಂತ್ಯದವರೆಗೆ ವಿಸ್ತರಿಸಬೇಕಿದೆ. ಬ್ಯಾಂಕ್‍ಗಳ ಮರುಪಾವತಿಯನ್ನು ಹೆಚ್ಚಿನ ಅವಯೊಂದಿಗೆ ಮತ್ತಷ್ಟು ಸಡಿಲಗೊಳಿಸಬೇಕಿದೆ. ಪ್ರಸಕ್ತ ಮಾನದಂಡದ ಪ್ರಕಾರ, ಅರ್ಹ ಪ್ರಕರಣಗಳಲ್ಲಿ ಎನ್‍ಪಿಎ ಖಾತೆಗಳನ್ನು ಘೋಷಿಸಬಾರದು.

ರಾಜ್ಯ ಸರ್ಕಾರ ಕಾಸಿಯಾದೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ರಾಜ್ಯದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತಿದೆ.
ಕೈಗಾರಿಕಾ ಚಟುವಟಿಕೆಗಳಿಗಾಗಿ ಭೂಮಿ, ವಿದ್ಯುತ್ ಸರಬರಾಜು, ಆನ್‍ಲೈನ್ ವ್ಯವಸ್ಥೆ, ಮೂಲಭೂತ ಸೌಕರ್ಯ ಮತ್ತು ರೆಡ್ ಟೇಪ್ ಬಾಡಿಗೆ ಕಡಿಮೆ ಮಾಡುವ ವಿಷಯಗಳ ಬಗ್ಗೆ ಗಮನ ಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಎಂಎಸ್‍ಎಂಇಗಳ ಸ್ಥಾಪನೆಗಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮತ್ತು ಜಿಲ್ಲೆಗಳಲ್ಲಿ, ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಎಂಎಸ್‍ಎಂಇಗಳು ಕಾರ್ಯನಿರ್ವಹಿಸುತ್ತಿವೆ. ಶೇ.7 ರಿಂದ 8ರಷ್ಟು ಕೈಗಾರಿಕೆಗಳು ಕೆಎಸ್‍ಎಸ್‍ಐಡಿಸಿ ಮತ್ತು ಕೆಐಎಡಿಬಿ ನಿರ್ವಹಿಸುವ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಆದ್ದರಿಂದ ಈ ವಲಯದಿಂದ ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ಹೊಸ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವ ಆವಶ್ಯಕತೆ ಇದೆ ಎಂದು ಹೇಳಿರುವ ಅವರು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳ ನಾಲ್ಕೈದು ಜಾಗದ 50 ಕಿಮೀ ವ್ಯಾಪ್ತಿಯಲ್ಲಿ 150 ರಿಂದ 200 ಎಕರೆ ಇಂಡಸ್ಟ್ರಿಯಲ್ ಎಸ್ಟೇಟ್ ನಿರ್ಮಾಣ ಮಾಡಬೇಕಿದೆ.

ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಕ್ಕಿರುವ ತೊಂದರೆ ನಿವಾರಿಸಬೇಕು. ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಪೀಣ್ಯ ಇಂಡಸ್ಟ್ರಿಯಲ್ ಟೌನ್‍ಶಿಪ್ ಪ್ರಾಕಾರ ನಿರ್ಮಾಣವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕು.

ದಾಬಸ್‍ಪೇಟೆಯಲ್ಲಿರುವ ಕಾಸಿಯಾ ವಸ್ತು ಪ್ರದರ್ಶನ ಮೈದಾನದಲ್ಲಿ ಅಂತಾರಾಷ್ಟ್ರೀಯ ಬೃಹತ್ ವ್ಯಾಪಾರ ಮೇಳವನ್ನು 2021ರ ಮೇನಲ್ಲಿ ಹಮ್ಮಿಕೊಂಡಿರುವುದು, ಎಂಎಸ್‍ಎಂಇ ಸಚಿವಾಲಯದೊಂದಿಗೆ ಖರೀದಿದಾರರು -ಮಾರಾಟಗಾರರ ಸಮಾವೇಶ ಆಯೋಜಿಸುವುದು ಸೇರಿದಂತೆ ಕಾಸಿಯಾ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin