ಕಮ್ಮವಾರಿ ಸಮುದಾಯಕ್ಕೆ ಸರ್ಕಾರದಿಂದ ಆರ್ಥಿಕ ನೆರವು: ಕಟ್ಟಾಸುಬ್ರಹ್ಮಣ್ಯ ನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19-ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆಗಳನ್ನು ನೀಡಿರುವ ಕಮ್ಮವಾರಿ ಸಮುದಾಯದ ಬೆಳವಣಿಗೆಗೆ ಸರ್ಕಾರದಿಂದ ಅಗತ್ಯ ನೆರವು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕಟ್ಟಾಸುಬ್ರಹ್ಮಣ್ಯ ನಾಯ್ಡು ಹೇಳಿದರು. ಹನುಮಂತನಗರದಲ್ಲಿರುವ ಕಮ್ಮವಾರಿ ಸಂಘ ಹಾಗೂ ಕೆ.ಎಸ್.ಸಮೂಹ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಆರ್ಕಿಟೆಕ್ಚರ್ ಬ್ಲಾಕ್ ಮತ್ತು ಬಾಲಕರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಮ್ಮವಾರಿ ಸಮುದಾಯ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ಕೊಟ್ಟಿದೆ. ಇಂದು ಆ ಸಮುದಾಯದ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಸಮುದಾಯ ಬೆಳೆಯಲು ಸರ್ಕಾರದ ಆರ್ಥಿಕ ನೆರವು ಬೇಕು ಎಂದರು. ಮಾ.8ರಂದು ಬಜೆಟ್ ಮಂಡನೆಯಾಗಲಿದ್ದು, ಈ ವೇಳೆ ಸಮುದಾಯವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಬೇಡಿಕೆ ಪಟ್ಟಿಯನ್ನು ನೀಡಿ ಈಡೇರಿಸಲು ಮನವಿ ಮಾಡುವುದಾಗಿ ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕಮ್ಮವಾರಿ ಸಮುದಾಯಕ್ಕೆ ಬಜೆಟ್‍ನಲ್ಲಿ ಅನೇಕ ಕೊಡುಗೆಗಳನ್ನು ನೀಡಲಾಗಿತ್ತು. ಈಗಲೂ ಕೂಡ ನಿಮ್ಮ ಸಮುದಾಯವನ್ನು ಕಾಪಾಡಲು ಸರ್ಕಾರ ಬದ್ದವಿದೆ ಎಂದು ಆಶ್ವಾಸನೆ ಕೊಟ್ಟರು.  ನೂತನವಾಗಿ ನಿರ್ಮಾಣವಾಗಿರುವ ಆರ್ಕಿಟೆಕ್ಚರ್ ಬ್ಲಾಕ್ ಮತ್ತು ಬಾಲಕರ ವಿದ್ಯಾರ್ಥಿ ನಿಲಯವು ಹೆಚ್ಚು ಸದುಪಯೋಗಪಡೆದುಕೊಂಡು ಸಮುದಾಯದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸುವಂತಾಗಲಿ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೂ ನಿಮ್ಮ ಸಮುದಾಯ ಬೆಳೆಯಲ್ಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಮ್ಮವಾರಿ ಸಂಘದ ಮಾಜಿ ಅಧ್ಯಕ್ಷರಾ ಕೆ.ಕೃಷ್ಣ, ವೈ.ರಾಮಕೃಷ್ಣ, ಕೆಎಸ್‍ಎಸ್‍ಐಡಿಸಿಯ ಮಾಜಿ ಅಧ್ಯಕ್ಷ ಬಿ.ಗುರಪ್ಪ ನಾಯ್ಡು, ಹಾಲಿ ಅಧ್ಯಕ್ಷ ವೈ.ರಾಮಚಂದ್ರ ನಾಯ್ಡು ಹಾಗೂ ಇತರರು ಉಪಸ್ಥಿತರಿದ್ದರು.

Facebook Comments