ಶೋರೂಮ್‍ನಲ್ಲಿ ಬಿದಿರು ಉತ್ಪನ್ನ ಮಾರಾಟಕ್ಕೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಕಾವೇರಿ ಎಂಫೋರಿಯಮ್ ಶೋ ರೂಮ್ ಮಳಿಗೆಗಳಲ್ಲಿ ಬಿದಿರಿನ ವಸ್ತುಗಳ ಮಾರಾಟಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಗ್ಗೆ ಎಂಫೋರಿಯಮ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬಿದಿರಿನಿಂದ ತಯಾರಾಗುವ ಎಲ್ಲಾ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಬಿದಿರಿನಿಂದ ಮನೆಗೆ ಅಗತ್ಯವಾದ ಸೋಫಾ, ಟೀಪಾಯಿ, ಚೇರ್ ಸೇರಿದಂತೆ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರು ಮಾಡಲಾಗುತ್ತಿದೆ. ಬಿದಿರಿನ ಕರಕುಶಲ ವಸ್ತುಗಳಿಗೆ ತನ್ನದೇ ಆದ ಮಹತ್ವ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿದಿರು ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಅವರು, ಬಿದಿರಿನ ಕರ ಕುಶಲಕರ್ಮಿಗಳಿಗೆ ಇರುವ ಸಮಸ್ಯೆಗಳ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು.

ಬಿದಿರು ವೃತ್ತಿಗಾರರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಅವರಿಗೆ ಅರಣ್ಯ ಇಲಾಖೆಯಿಂದ ಬಿದಿರು ಪೂರೈಕೆ ಮಾಡುವುದಕ್ಕೆ ಅಗತ್ಯವಾದ ಕ್ರಮ ವಹಿಸಲು ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಅವರಿಗೆ ಮನವಿ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಬಿದಿರು ಉತ್ಪನ್ನ ತಯಾರಿಕೆಯಲ್ಲಿ ತೊಡಗಿರುವವರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಬಿದಿರಿನ ಉತ್ಪನ್ನಗಳನ್ನ ನಮ್ಮ ಶೋ ರೂಮ್‍ಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಅವರ ಆರ್ಥಿಕ ಸ್ಥಿತಿಯನ್ನು ಹೆಚ್ಚು ಮಾಡಲು ಅಗತ್ಯವಾದ ಕ್ರಮ ಕೈಗೊಳ್ಳಲು ನಿಗಮ ಮುಂದಾಗಿದೆ ಎಂದು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಭರವಸೆ ನೀಡಿದ್ದಾರೆ.

Facebook Comments