ಈ ವರ್ಷವೂ ತಮಿಳುನಾಡಿಗೆ ಹರಿಯಿತು ಹೆಚ್ಚುವರಿ 50 ಟಿಎಂಸಿ ನೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1- ಕಾವೇರಿ ನದಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಈ ಬಾರಿಯೂ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಸುಮಾರು 50 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿದುಹೋಗಿದೆ.  ಸರ್ಕಾರದ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಜೂನ್‍ನಿಂದ ಅಕ್ಟೋಬರ್ ಅಂತ್ಯದವರೆಗೆ ರಾಜ್ಯದಿಂದ ತಮಿಳುನಾಡಿಗೆ 225 ಟಿಎಂಸಿ ಅಡಿ ನೀರು ಹರಿದುಹೋಗಿದೆ.

ಅಕ್ಟೋಬರ್ ಅಂತ್ಯದ ವೇಳೆಗೆ 145 ಟಿಎಂಸಿ ಅಡಿ ನೀರು ಬಿಡಬೇಕಿತ್ತು. ಆದರೆ, ಅಕ್ಟೋಬರ್ 6ರ ವೇಳೆಗೆ 177 ಟಿಎಂಸಿ ನೀರು ಹರಿದುಹೋಗಿದ್ದು, ಜೂನ್‍ನಿಂದ ಮೇ ವರೆಗಿನ ಜಲ ವರ್ಷದಲ್ಲಿ ಒಟ್ಟು ಬಿಡಬೇಕಾದ ನೀರಿಗಿಂತಲೂ ಈಗ ಸುಮಾರು 50 ಟಿಎಂಸಿ ನೀರು ಹೆಚ್ಚಾಗಿ ಬಿಡಲಾಗಿದೆ.

ಕಳೆದ ವರ್ಷವೂ ಮುಂಗಾರು ಹಂಗಾಮಿನಲ್ಲಿ ಭಾರೀ ಪ್ರಮಾಣದ ಮಳೆ ಬಂದು ಕೊಡಗಿನಲ್ಲಿ ಅತಿವೃಷ್ಟಿ ಉಂಟಾಗಿತ್ತು. ಇದರ ಪರಿಣಾಮ ಕಳೆದ ಬಾರಿಯೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದುಹೋಗಿತ್ತು. ಜೂನ್‍ನಿಂದ ಅಕ್ಟೋಬರ್ ಅವಧಿಯಲ್ಲಿ 374 ಟಿಎಂಸಿ ನೀರು ಬಿಡಲಾಗಿತ್ತು. ಸುಮಾರು 228 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರು ಹರಿದು ಹೋಗಿತ್ತು.

ಈ ಬಾರಿಯೂ ಹೆಚ್ಚುವರಿ ನೀರು ಬಿಡಲಾಗಿದ್ದರೂ ಕಾವೇರಿ ಜಲಾನಯನ ಭಾಗದ ಜಲಾಶಯಗಳಲ್ಲಿ ಈ ಬಾರಿ ಗರಿಷ್ಟ ಪ್ರಮಾಣದ ನೀರು ಸಂಗ್ರಹವಾಗಿರುವುದು ವಿಶೇಷವಾಗಿದೆ.
ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ರಾಜ್ಯಸರ್ಕಾರದ ಉದ್ದೇಶಿತ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಯೋಜನೆ ಕಾರ್ಯಗತವಾಗಿದ್ದರೆ ಹೆಚ್ಚುವರಿ ನೀರನ್ನು ಸಂಗ್ರಹಿಸಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಬಳಕೆಗೆ ಬಳಸಬಹುದಾಗಿತ್ತು ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಕಳೆದೆರಡು ವರ್ಷಗಳಲ್ಲಿ ಹೆಚ್ಚುವರಿ ನೀರು ಬಳಕೆಯಾಗದೆ ಸಮುದ್ರದ ಪಾಲಾಗಿದೆ. ಮೇಕೆದಾಟು ಜಲಾಶಯ ನಿರ್ಮಿಸಿದ್ದರೆ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬಹುದಿತ್ತು ಎಂಬುದು ಬಹುಜನರ ಅಭಿಪ್ರಾಯವಾಗಿದೆ. ಕಾವೇರಿ ಜಲಾನಯನ ಭಾಗದ ಕೆಆರ್‍ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ಒಳಹರಿವು ಹಾಗೂ ಹೊರ ಹರಿವು ಹೆಚ್ಚು ಕಡಿಮೆ ಒಂದೇ ಇದೆ. ಇತ್ತೀಚಿನ ವರ್ಷಗಳಲ್ಲಿ ತಿಂಗಳುಗಟ್ಟಲೆ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿರುವುದು ಇದೇ ಮೊದಲು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅಭಿಪ್ರಾಯಪಟ್ಟರು.

ಅದೇ ರೀತಿ ಕೃಷ್ಣಾ ಜಲಾನಯನ ಭಾಗದ ಆಲಮಟ್ಟಿ, ನಾರಾಯಣಪುರ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳು ಕೂಡ ಈ ಬಾರಿ ಗರಿಷ್ಟ ಪ್ರಮಾಣದ ನೀರಿನ ಸಂಗ್ರಹ ಹೊಂದಿವೆ. ಹೀಗಾಗಿ ಬೇಸಿಗೆಯಲ್ಲಿ ರಾಜ್ಯದಲ್ಲಿ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಸದ್ಯಕ್ಕೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ನೀರಿನ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

Facebook Comments