ಕಾವೇರಿ ಜಲಾನಯನದಲ್ಲಿ ಮತ್ತೆ ತಲೆದೋರಿದ ನೀರಿನ ಸಮಸ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.1- ನೈಋತ್ಯ ಮುಂಗಾರಿನ ಕಣ್ಣಾ ಮುಚ್ಚಾಲೆ ಆಟದಿಂದಾಗಿ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿರುವುದಲ್ಲದೆ ಕಾವೇರಿ ಜಲಾನಯನ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದೆ.  ಕಾವೇರಿ ನದಿ ಪಾತ್ರದ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತಲೂ ಈ ಬಾರಿ ಕಡಿಮೆ ನೀರಿನ ಸಂಗ್ರಹವಿದೆ. ತಮಿಳುನಾಡು ತಮಗೆ ಬಿಡಬೇಕಾಗಿರುವ ನೀರನ್ನು ಬಿಡುವಂತೆ ಒತ್ತಾಯಿಸಿದೆ.

ನಿನ್ನೆ ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಬಿಡಬೇಕಾಗಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಿಡುವಂತೆ ತಮಿಳುನಾಡು ಒತ್ತಾಯಿಸಿದೆ. ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮಥ್ರ್ಯ ಕಡಿಮೆ ಇದ್ದು , ಬಾಕಿ ಇರುವ ಸುಮಾರು 30 ಟಿಎಂಸಿ ಅಡಿ ನೀರನ್ನು ಬಿಡಲಾಗದು ಎಂದು ಕರ್ನಾಟಕ ತಿಳಿಸಿದೆ.

ಹೀಗಾಗಿ ಉಭಯ ರಾಜ್ಯಗಳ ನಡುವೆ ನೀರಿನ ಬಿಕ್ಕಟ್ಟು ಉಲ್ಬಣವಾಗಿದೆ. ಹೀಗಾಗಿ ಕಾವೇರಿ ಜಲಾನಯನ ಭಾಗದಲ್ಲಿ ಜಲ ಸಂಘರ್ಷ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಹಾರಂಗಿ, ಹೇಮಾವತಿ, ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಟ್ಟು ನೀರಿನ ಸಂಗ್ರಹದ ಸಾಮಥ್ರ್ಯ 114.57 ಟಿಎಂಸಿ ಅಡಿಯಾಗಿದೆ.

ಇದುವರೆಗೂ ಶೇ.85ರಷ್ಟು ಮಾತ್ರ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದೆ. ಅಂದರೆ 97.37 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ 109.20ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಿತ್ತು. ಆಗಸ್ಟ್ ಕೊನೆಯ ವಾರದಲ್ಲಿ ಮುಂಗಾರು ಚೇತರಿಕೆ ಕಂಡರೂ ಕಾವೇರಿ ಜಲಾನಯನ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಜಲಾಶಯಗಳ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಾಣಲಿಲ್ಲ.

ಈ ನಾಲ್ಕೂ ಜಲಾಶಯಗಳ ಒಳ ಹರಿವಿನ ಪ್ರಮಾಣ ಸದ್ಯಕ್ಕೆ 13 ಸಾವಿರ ಕ್ಯೂಸೆಕ್ಸ್‍ನಷ್ಟಿದ್ದು , ಹೊರ ಹರಿವಿನ ಪ್ರಮಾಣ 21 ಸಾವಿರ ಕ್ಯೂಸೆಕ್ಸ್‍ಗೂ ಹೆಚ್ಚಿದೆ. ಹೀಗಾಗಿ ಸಂಗ್ರಹವಾಗಿರುವ ನೀರಿನಲ್ಲಿ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹವಾಮಾನ ತಜ್ಞರ ಪ್ರಕಾರ ಸೆಪ್ಟೆಂಬರ್ , ಅಕ್ಟೋಬರ್ ತಿಂಗಳಿನಲ್ಲಿ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಕೆಆರ್‍ಎಸ್ ಭರ್ತಿಯಾಗುವ ಸಾಧ್ಯತೆ ವಿರಳ.

ಮಾಸಿಕವಾರು ಬಿಡಬೇಕಾದ ನೀರಿನ ಸಮಸ್ಯೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಆಗಸ್ಟ್‍ನಂತೆಯೇ ಮುಂದುವರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಜೂ.1ರಿಂದ ಆಗಸ್ಟ್ ಅಂತ್ಯದವರೆಗೆ ರಾಜ್ಯದಲ್ಲಿ ಶೇ.8ರಷ್ಟು ಮಳೆ ಕೊರತೆ ಕಂಡು ಬಂದಿದೆ. ಅದರಲ್ಲೂ ಅತಿ ಹೆಚ್ಚು ಮಳೆಯಾಗುತ್ತಿದ್ದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಶೇ.21ರಷ್ಟು ಮಳೆ ಕೊರತೆಯಾಗಿದೆ.

ಈ ಅವಧಿಯಲ್ಲಿ 691 ಮಿ.ಮೀಟರ್ ರಾಜ್ಯದ ವಾಡಿಕೆ ಮಳೆಯಾಗಿದ್ದು, 638 ಮೀಟರ್‍ನಷ್ಟು ಮಾತ್ರ ಮಳೆಯಾಗಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಶೇ.12, ದಕ್ಷಿಣ ಒಳನಾಡಿನಲ್ಲಿ ಶೇ.37ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಲೆನಾಡಿನಲ್ಲಿ 1377 ಮಿ.ಮೀಟರ್ ವಾಡಿಕೆ ಮಳೆಯಾಗಿದ್ದು, 1085 ಮಿ.ಮೀಟರ್‍ನಷ್ಟು ಮಾತ್ರ ಮಳೆಯಾಗಿದೆ. ಹಾಗೆಯೇ ಕರಾವಳಿಯಲ್ಲಿ 2796 ಮಿ.ಮೀಟರ್ ವಾಡಿಕೆ ಮಳೆಯಾಗಿದ್ದು, 2208 ಮಿ.ಮೀಟರ್‍ನಷ್ಟು ಮಾತ್ರ ಮಳೆಯಾಗಿದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ವರುಣ ಕೃಪೆ ತೋರದಿದ್ದರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಸಾಮಥ್ರ್ಯ ತೃಪ್ತಿದಾಯಕವಾಗುವುದಿಲ್ಲ.

Facebook Comments