ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿಗೆ ಹೊಸ ಸಾರಥಿ ನೇಮಕ : ಕೋಳಿವಾಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.24-ಮಾರ್ಚ್ ಮೊದಲ ವಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸಾಧ್ಯತೆ ಇದೆ. ಆದಷ್ಟು ಬೇಗ ನೇಮಕ ಮಾಡದಿದ್ದರೆ ಪಕ್ಷ ಸೊರಗಿ ಹೋಗುತ್ತದೆ ಎಂದು ಮಾಜಿ ಸ್ಪೀಕರ್. ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷರ ನೇಮಕ ತಡ ಮಾಡಿದಷ್ಟು ಪಕ್ಷಕ್ಕೆ ಹಾನಿಕಾರಕ. ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ನಾನು ಮಾಡುತ್ತೇನೆ.

ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಾಗಿದೆ. ಹೈಕಮಾಂಡ್ ಬಳಿಯೂ ಸ್ವಲ್ಪ ಗೊಂದಲವಿದೆ. ಅಲ್ಲಿ ಎಐಸಿಸಿ ಅಧ್ಯಕ್ಷರು ಯಾರು ಆಗಬೇಕು ಎಂಬ ಗೊಂದಲವಿದೆ. ಒಂದು ಕಡೆ ರಾಹುಲ್‍ಗಾಂಧಿ ಒಪ್ಪುತ್ತಿಲ್ಲ. ಪಾಪ, ಮೇಡಂ ಸೋನಿಯಾಗಾಂಧಿ ಅವರ ಆರೋಗ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು. ಪತ್ರಿಕಾರಂಗ ಅತ್ಯಂತ ಮಹತ್ವ ಪಡೆದಿದೆ. ಸಂವಿಧಾನದ ಅಂಗವಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾರಂಗ ಜನರಿಂದ ಮಹತ್ವ ಪಡೆದಿದೆ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ಮಾಧ್ಯಮ ಹೆಚ್ಚು ಮುಖ್ಯವಾಗಿದೆ. ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ನಾನು ಸ್ಪೀಕರ್ ಆಗಿದ್ದಾಗಲೂ ಎಡಿಟ್ ಮಾಡಿದ ವಿಡಿಯೋ ಮಾಧ್ಯಮಗಳಿಗೆ ಕೊಡೋಣ ಎನ್ನಲಾಗಿತ್ತು. ಆದರೆ ನಾನು ಇದಕ್ಕೆ ಒಪ್ಪಲಿಲ್ಲ. ಜನರಿಗೆ ಸುದ್ದಿಗಳು ತಲುಪಬೇಕು ಎಂಬುದು ಬಹಳ ಮುಖ್ಯ. ನಾನು ಎಷ್ಟು ದಿನ ಸ್ಪೀಕರ್ ಆಗಿದ್ದೆನೋ ಅಷ್ಟು ದಿನ ಬಿಜೆಪಿ ನಾಯಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೆ ಎಂದರು.

ಆದರೆ ಈಗಿನ ಸ್ಪೀಕರ್ ವಿಶ್ವೇಶ ಹೆಗಡೆ ಕಾಗೇರಿ ಏಕೆ ಈ ನಿರ್ಧಾರ ಮಾಡಿದ್ದಾರೋ ಅಥವಾ ಯಾರ ಒತ್ತಡಕ್ಕೆ ಮಣಿದಿದ್ದಾರೋ ಗೊತ್ತಿಲ್ಲ. ಸದನದಲ್ಲಿ ನಡೆಯುವುದು ಎಡಿಟ್ ಆಗಬಾರದು. ಏನು ನಡೆಯುತ್ತದೆಯೋ ಅದು ಜನರಿಗೆ ತಲುಪಬೇಕು. ಶಾಸಕರ ಭವನಕ್ಕೂ ಕೂಡ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಇದು ಸರಿಯಾದ ನಿರ್ಧಾರವಲ್ಲ. ಆದಷ್ಟು ಬೇಗ ಇದರ ಬಗ್ಗೆ ಗಮನಹರಿಸಬೇಕು ಎಂದು ಕೋಳಿವಾಡ ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸ್ಪೀಕರ್ ಅವರು ಇದುವರೆಗೂ ಕಾರು ಕೊಟ್ಟಿಲ್ಲ. ಸಿದ್ದರಾಮಯ್ಯನವರ ಫೈಲ್ ಸ್ಪೀಕರ್‍ರವರ ಮುಂದಿದೆ. ಆದರೂ ಅವರು ಏಕೆ ಗಮನಿಸುತ್ತಿಲ್ಲ ಎಂಬುದು ಗೊತ್ತಿಲ್ಲ. ಪ್ರತಿಪಕ್ಷ ನಾಯಕ ಎಂದರೆ, ಶ್ಯಾಡೋ ಸಿಎಂ ಇದ್ದಂತೆ. ಈ ಸರ್ಕಾರದಲ್ಲಿ ಹಣವಿಲ್ಲ. ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಸ್ಪೀಕರ್ ಅವರು ಪ್ರೀಸೈಡಿಂಗ್ ಆಫೀಸರ್ ಕಡಿಮೆ ಮಾತನಾಡಬೇಕು. ಅವರು ಹೀಗೆ ಏಕೆ ಮಾತನಾಡುತ್ತಾರೋ ಗೊತ್ತಿಲ್ಲ. ಯಾವ ಪಕ್ಷದಿಂದ ಆರಿಸಿ ಬಂದಿದ್ದಾರೋ ಆ ಪಕ್ಷದ ಒತ್ತಡಕ್ಕೆ ಒಳಗಾಗಿರಬಹುದು ಎಂದು ಹೇಳಿದರು.

ಸ್ವಾಮೀಜಿಗಳ ರಾಜಕೀಯ: ಸ್ವಾಮೀಜಿಗಳು ಇತ್ತೀಚೆಗೆ ಧರ್ಮ ಪ್ರಚಾರ ಬಿಟ್ಟು, ರಾಜಕೀಯ ಮಾಡಲು ಮುಂದಾಗಿದ್ದಾರೆ. ತಮ್ಮ ಸಮುದಾಯದ ನಾಯಕರಿಗೆ ಸ್ಥಾನ ಕೊಡಬೇಕೆಂದು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಅವರು ಧರ್ಮ ಪ್ರಚಾರ ಮಾತ್ರ ಮಾಡಬೇಕು. ಅದುಬಿಟ್ಟು ರಾಜಕೀಯ ಮಾಡಬಾರದು ಎಂದು ಹೇಳಿದರು.

ಅಮೂಲ್ಯ ಲಿಯೋನಾ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆ ಹುಡುಗಿ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಯಾರು ಹೇಳಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಅವರೇ ಸ್ವತಃ ಹೇಳಿದ್ದಾರೆ ಎಂದು ಅನ್ನಿಸುತ್ತಿಲ್ಲ. ಅವರ ಹಿಂದೆ ಯಾರಿದ್ದಾರೋ ಗುರುತಿಸಿ ಅವರಿಗೆ ಶಿಕ್ಷೆ ನೀಡಬೇಕೆಂದು ಕೋಳಿವಾಡ ಆಗ್ರಹಿಸಿದರು.

Facebook Comments