ರಾಜ್ಯಸಭೆಗೆ ರಾಮಮೂರ್ತಿ ಆಯ್ಕೆ, ಅಧಿಕೃತ ಆದೇಶ ಬಾಕಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿದ್ದು, ಇಬ್ಬರು ಪಕ್ಷೇತರ ಉಮೇದುದಾರರ ನಾಮ ಪತ್ರಗಳು ತಿರಸ್ಕøತಗೊಂಡಿವೆ. ಚುನಾವಣಾ ಕಣದಲ್ಲಿ ಕೆ.ಸಿ.ರಾಮಮೂರ್ತಿ ಒಬ್ಬರೇ ಉಳಿದಿರುವುದರಿಂದ ಬಹುತೇಕ ಅವಿರೋಧವಾಗಿ ಆಯ್ಕೆಯಾದಂತಾಗಿದ್ದು, ಅಧಿಕೃತ ಪ್ರಕಟಣೆ ಬಾಕಿ ಇದೆ.

ರಾಜ್ಯಸಭೆ ಚುನಾವಣೆಗೆ ಕೇವಲ ಮೂರು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯೂ ಆಗಿರುವ ರಾಜ್ಯ ವಿಧಾನಸಭೆ ಕಾರ್ಯದರ್ಶಿ (ಪ್ರ) ಎಂ.ಕೆ.ವಿಶಾಲಾಕ್ಷಿ ಅವರು ರಾಜ್ಯಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ನಡೆಸಿದರು.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಹಾಗೂ ವಿಜಯಪುರ ಮೂಲದ ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ ಉರುಫ್ ದೀಪಕ್ ಅವರ ನಾಮಪತ್ರಗಳು ತಿರಸ್ಕøತಗೊಂಡಿವೆ. ಈ ಇಬ್ಬರೂ ಅಭ್ಯರ್ಥಿಗಳ ನಾಮಪತ್ರಗಳಿಗೆ ಯಾವ ಶಾಸಕರೂ ಸೂಚಕರಾಗಿ ಸಹಿ ಮಾಡಿರದ ಕಾರಣ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.

ಆದರೆ, ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರ ನಾಮಪತ್ರ ಕ್ರಮಬದ್ಧವಾಗಿದೆ. ಡಿ.5ರ ವರೆಗೂ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದ್ದು, ನಾಮಪತ್ರ ವಾಪಸ್ ಪಡೆಯುವ ಅಂತಿಮ ಗಡುವು ಮುಗಿದ ನಂತರ ಕೆ.ಸಿ.ರಾಮಮೂರ್ತಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದ ಕೆ.ಸಿ.ರಾಮಮೂರ್ತಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಇತ್ತೀಚೆಗೆ ಬಿಜೆಪಿ ಸೇರಿದ್ದರು. ರಾಮಮೂರ್ತಿಯವರ ರಾಜೀನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.

Facebook Comments