ಡಿಕೆಶಿಯನ್ನು ಹಾಡಿ ಹೊಗಳಿದ ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಕಲೆ ಡಿ.ಕೆ. ಶಿವಕುಮಾರ್ ಅವರಿಗೆ ಕರಗತವಾಗಿದೆ. ಪಕ್ಷ ನಿಷ್ಠೆಯಲ್ಲಿ ಅವರು ಪ್ರಶ್ನಾತೀತರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷ ಮತ್ತು ದೇಶ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಇದನ್ನು ನಿಭಾಯಿಸಲು ಡಿ.ಕೆ.ಶಿವಕುಮಾರ್ ಸೂಕ್ತ ವ್ಯಕ್ತಿ ಎಂಬ ಬಲವಾದ ಕಾರಣಕ್ಕೆ ಸೋನಿಯಾ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರು ಎಂದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೀಡಿದ ಸಂದೇಶವನ್ನು ಇದೇ ಸಂದರ್ಭದಲ್ಲಿ ಸಭೆಗೆ ತಿಳಿಸಿದರು. ಕೋವಿಡ್‍ನಿಂದ ದೇಶ ಸಂಕಷ್ಟದಲ್ಲಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ತನ್ನ ಇತಿಮಿತಿಯಲ್ಲಿ ಜನರಿಗೆ ನೆರವಾಗಿದೆ.

ಡಿ.ಕೆ.ಶಿವಕುಮಾರ್ ಅವರಿಗೆ ತಳಮಟ್ಟದಲ್ಲಿ ಕಾರ್ಯಕರ್ತರ ಸಂಪರ್ಕವಿದೆ. ಅಧಿಕಾರಕ್ಕಾಗಿ ಪಕ್ಷ ಬಿಟ್ಟು ಹೋಗುವುದು ತಾಯಿ ಬಿಟ್ಟು ಹೋದಂತೆ. ಸಂಕಷ್ಟ ಸಂದರ್ಭದಲ್ಲಿ ಡಿಕೆಶಿ ಬಂಡೆಯಂತೆ ಹೈಕಮಾಂಡ್ ಜತೆ ನಿಂತರು. ಮುಂದಿನ ದಿನಗಳಲ್ಲಿ ಪಕ್ಷ ಯಶಸ್ವಿಯಾಗಲಿದೆ ಎಂದರು.

ಕರ್ನಾಟಕ ಕಾಂಗ್ರೆಸ್‍ಗೆ ಭದ್ರ ಬುನಾದಿ: ಒಬ್ಬರಿಂದಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಬೇಕು. ಈಗಾಗಲೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಅವರ ಜತೆ ಕಾರ್ಯಾಧ್ಯಕ್ಷರಾಗಿರುವ ಮೂವರು ಕ್ರಿಯಾಶೀಲ ನಾಯಕರು, ಪಕ್ಷ ನಿಷ್ಠರು. ಹೊಸ ತಂಡ ಪಕ್ಷವನ್ನು ಗೆಲ್ಲಿಸುತ್ತದೆ.

ಜತೆಗೆ ಅನುಭವಿ ನಾಯಕರಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಸಾಮಾಜಿಕ ಸುಧಾರಣಾ ಕಾರ್ಯಕ್ರಮ ಜÁರಿಗೆ ತರಲಾಯಿತು. ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಕೆಲಸ ಮಾಡಿದ ಹಿರಿಯ ಅನುಭವಿಗಳು. ಹಿಂದೆ ಕೆಲಸ ಮಾಡಿದ ದಿನೇಶ್ ಗುಂಡುರಾವ್ ಸದೃಢ ನಾಯಕ ಎಂದು ಕೊಂಡಾಡಿದರು.

ನಾವು ಚುನಾವಣೆ ಸೋತಿರಬಹುದು. ಆದರೆ, ರಾಜ್ಯ ನಾಯಕತ್ವ ಬಲವಾಗಿದೆ. ಕೋವಿಡ್‍ನಿಂದ ದೇಶ ತೊಂದರೆಯಲ್ಲಿದೆ. ಗಡಿಯಲ್ಲಿ ಚೀನಾ ತಗಾದೆ ಇದೆ. ರಾಷ್ಟ್ರವಾದಿ ಸಿದ್ಧಾಂತ ಹೇಳಿಕೊಂಡು ಬಂದು ಜನ ಅಧಿಕಾರದಲ್ಲಿದ್ದಾರೆ. ಚೀನಾ ನಮ್ಮ ಗಡಿ ಒತ್ತುವರಿ ಮಾಡಿದೆ. ಆದರೆ, ನಮ್ಮ ಸರ್ಕಾರ ಯಾಕೆ ಸರಿಯಾದ ಪ್ರತಿರೋಧ ತೋರಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಸರ್ಕಾರದ ಜತೆ ಇರಲಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 40 ಡಾಲರ್ ಇದೆ. 12 ಬಾರಿ ಅಬಕಾರಿ ಸುಂಕ ಏರಿಸಿ ಮೋದಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ನಿಯಮ ಬಾಹಿರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಯುತ್ತಿರುವುದನ್ನು ನೋಡಿದರೆ ಹೃದಯ ಹಿಂಡುತ್ತದೆ. ಸಚಿವರು ಒಂದು ಕ್ಷಣ ಮಾನವೀಯ ನೆಲೆಯಲ್ಲಿ ಯೋಚಿಸಬಾರದೆ ಎಂದು ಪ್ರಶ್ನಿಸಿದರು. ಇಲ್ಲಿ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಜನರ ಸಮಸ್ಯೆಗಳು ಸರ್ಕಾರದ ಆದ್ಯತೆಯಾಗಿಲ್ಲ ಎಂದು ಆರೋಪಿಸಿದರು.

ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡಿ, ಅಧಿಕಾರ ಹಸ್ತಾಂತರ ಎಂದು ಹೇಳಲ್ಲ. ನಾನು ರಾಜೀನಾಮೆ ಕೊಟ್ಟು ಏಳು ತಿಂಗಳಾಯಿತು. ಡಿ.ಕೆ.ಶಿವಕುಮಾರ್ ನೇಮಕವಾಗಿ ನಾಲ್ಕು ತಿಂಗಳಾಯಿತು, ಆ ಕ್ಷಣದಿಂದಲೇ ಅವರು ಜವಾಬ್ದಾರಿ ವಹಿಸಿಕೊಂಡರು. ನಾನು ಅಧ್ಯಕ್ಷನಾಗಿದ್ದಾಗ ಸಂಕೀರ್ಣ ಪರಿಸ್ಥಿತಿ ಇತ್ತು. ಸಮ್ಮಿಶ್ರ ಸರ್ಕಾರದ ಗೊಂದಲ ಇತ್ತು.

ಕೆಲ ಉಪಚುನಾವಣೆಯಲ್ಲಿ ಗೆದ್ದಿದ್ದೆವು. ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡೆವು. ನಮ್ಮ ಪಕ್ಷದ ಕೆಲ ಶಾಸಕರು ಪಕ್ಷ ದ್ರೋಹ ಮಾಡಿದ್ದರಿಂದ ಸರ್ಕಾರ ಹೋಯ್ತು. ಎಷ್ಟೇ ಪ್ರಯತ್ನ ಪಟ್ಟರು ಸರ್ಕಾರ ಉಳಿಸಿಕೊಳ್ಳಲಾಗಲಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಸೋಲು ಕಂಡಾಗ ಅನಿವಾರ್ಯವಾಗಿ ರಾಜೀನಾಮೆ ನೀಡಿದೆ. ನಾವು ಯಾವ ಅಧಿಕಾರದಲ್ಲಿ, ಕುರ್ಚಿಯಲ್ಲಿ ಇರುತ್ತೇವೆ ಎಂಬುದು ಮುಖ್ಯ ಅಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಡಿ.ಕೆ.ಶಿವಕುಮಾರ್ ಎಲ್ಲಾ ರೀತಿಯಲ್ಲೂ ಸಮರ್ಥರಿದ್ದಾರೆ. ಕಾರ್ಯಕರ್ತರ ಸಾಮಥ್ರ್ಯ ಗೊತ್ತಿದೆ, ಸ್ಪಷ್ಟ ಗುರಿ ಇದೆ.

ಇನ್ನು ಮುಂದೆ ಮೈತ್ರಿ ಸಹವಾಸ ಬೇಡ. ನಮಗೆ ನಮ್ಮದೆ ಸಾಮಥ್ರ್ಯ ಇದೆ. ನಾವೆಲ್ಲಾ ಸೇರಿ ಒಂದಾಗಿ ಚುನಾವಣೆಗೆ ಹೋಗೋಣ, ಗೆಲ್ಲಾಣ. ಬಿಜೆಪಿ ಸರ್ಕಾರದ ಬೇಜವಾಬ್ದಾರಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು, ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿ ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೂರವಾಣಿ ಕರೆ ಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಹಾರೈಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಚೀನಾ ಗಡಿ ಸಂಘರ್ಷದಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಸಭೆಯ ಆರಂಭದಲ್ಲಾ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂವಿಧಾನದ ಪೀಠಿಕೆಯನ್ನು ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ವಾಚಿಸಿದರು. ಕಾರ್ಯಕ್ರಮದಲ್ಲಿದ್ದ ಎಲ್ಲರೂ ಮತ್ತು ವರ್ಚುವಲ್ ಕಾನ್ಫರೆನ್ಸ್‍ನಲ್ಲಿ ಹಾಜರಿದ್ದ ಲಕ್ಷಾಂತರ ನಾಯಕರು, ಕಾರ್ಯಕ್ರಮ ಏಕಕಾಲಕ್ಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸುಮಾರು 30ಕ್ಕೂ ಹೆಚ್ಚು ಪ್ರಮುಖ ನಾಯಕರು ಹಂತ ಹಂತವಾಗಿ ಬಂದು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಬೆಳಗುತ್ತಿದೆ ಎಂದು ವಿನೂತನ ಗೀತೆ ಹಾಡಿದರು. ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ವೀರಪ್ಪ ಮೋಯ್ಲಿ, ಕೆ.ಎಚ್.ಮುನಿಯಪ್ಪ, ಅಲ್ಲಂ ವೀರಭದ್ರಪ್ಪ, ಪರಮೇಶ್ವರ್, ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆ, ಸತೀಶ್ ಜÁರಕಿಹೊಳಿ, ಸಲೀಂ ಅಹಮದ್, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಕೆಪಿಸಿಸಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments