ಡಿ.9ಕ್ಕೆ ಕರ್ನಾಟಕದ ಜನತೆಗೆ ಶುಭಸುದ್ದಿ ಕಾದಿದೆ : ಕೆ.ಸಿ.ವೇಣುಗೋಪಾಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಡಿ.2-ಡಿಸೆಂಬರ್ 9ರ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದಿಲ್ಲ, ಕರ್ನಾಟಕದ ಜನತೆಗೆ ಶುಭಸುದ್ದಿ ಕಾದಿದೆ ಎಂದು ಹೇಳುವ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಗೋಕಾಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ ಕೆ.ಸಿ.ವೇಣುಗೋಪಾಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಮೊದಲ ಆದ್ಯತೆ. ಅದಕ್ಕಾಗಿ ಲಭ್ಯವಿರುವ ಎಲ್ಲಾ ಸಾಧ್ಯಸಾಧ್ಯತೆಗಳನ್ನು ನಾವು ಪರಿಶೀಲನೆ ಮಾಡುತ್ತೇವೆ. ಜೆಡಿಎಸ್ ಜೊತೆಗಿನ ಮೈತ್ರಿ ಸೇರಿದಂತೆ ಯಾವುದೇ ವಿಷಯವಾದರೂ ಕಾಂಗ್ರೆಸ್ ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ಮಾದರಿಯಲ್ಲೇ, ಕರ್ನಾಟಕದಲ್ಲೂ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೆ.ಸಿ.ವೇಣುಗೋಪಾಲ್ ಅವರು, ನಾವು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರ ತಿರಸ್ಕಾರವಾಗುವುದು ಖಚಿತ. ಪಕ್ಷದ್ರೋಹ ಮಾಡಿ ಜನರಿಗೆ ಮೋಸ ಮಾಡಿದ ಅಷ್ಟೂ ಮಂದಿ ಅನರ್ಹರು ಸೋಲು ಕಾಣುತ್ತಾರೆ. ಜನರಿಗೆ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಹೋಗಿದೆ ಎಂದು ಹೇಳಿದರು.

ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಕೇವಲ ಪ್ರಚಾರದಲ್ಲೇ ಕಾಲ ಕಳೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಷಯದಲ್ಲಿ ಜನರಿಗೆ ಬೇಸರ ಬಂದಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಜನರ ಅಭಿಪ್ರಾಯ. ಕಾಂಗ್ರೆಸ್ ಜನಾಭಿಪ್ರಾಯವನ್ನು ಗೌರವಿಸುತ್ತದೆ ಎಂದರು.

ದೇವೇಗೌಡರ ನಕಾರ: ಆದರೆ ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್, ಬಿಜೆಪಿಯಿಂದ ಸಮಾನ ದೂರ ಕಾಯ್ದುಕೊಂಡು ಜೆಡಿಎಸ್ ಬಲಪಡಿಸಲು ಶಕ್ತಿ ಮೀರಿ ಹೋರಾಟ ನಡೆಸಲಾಗುವುದು. ಈಗಾಗಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿದ ಅನುಭವ ಇದೆ ಎಂದು ಮಾರ್ಮಿಕವಾಗಿ ತಿಳಿಸಿದರು.

Facebook Comments