ಸಚಿವರು ಹಾಗೂ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜೂ.15-ಕುಡಿಯುವ ನೀರು, ಕೃಷಿ ಹೊಂಡ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ಕುಂಟುತ್ತಾ ಸಾಗುತ್ತಿವೆ ಎಂದು ಆರೋಪಿಸಿ ಪಕ್ಷಭೇದ ಮರೆತು ಶಾಸಕರು ಕೆಡಿಪಿ ಸಭೆಯಲ್ಲಿಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಚಿವರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಇಂದು ಬೆಳಗ್ಗೆ ಆರಂಭವಾದ ಸಭೆಯಲ್ಲಿ ಸಂಸದರಾದ ಜಿ.ಎಸ್.ಬಸವ ರಾಜ್, ಚಿತ್ರದುರ್ಗದ ಸಂಸದರಾದ ನಾರಾಯಣ ಸ್ವಾಮಿ, ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಮಸಾಲಾ ಜಯರಾಂ, ಗೌರಿಶಂಕರ್, ವೀರಭದ್ರಯ್ಯ, ಡಾ.ರಂಗನಾಥ್ ಮತ್ತಿತ ರರು ಭಾಗವಹಿಸಿದ್ದರು.

ಸಭೆಯ ಆರಂಭದಲ್ಲೇ ಏರಿದ ಧ್ವನಿಯಲ್ಲಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ ಅವರು, ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾದ ಅನುದಾನ ಮತ್ತು ಅದರಿಂದಾಗುತ್ತಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳ ಯಾವುದೇ ಮಾಹಿತಿ ಇಲ್ಲದೆ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯ್ತಿಗಳಿಂದ ಚೆಕ್ ಡ್ಯಾಂಗಳನ್ನು ನಿರ್ಮಿಸಬಾರದು ಎಂದು ಜಿ.ಪಂ. ಸಿಇಒ ಸೂಚನೆ ನೀಡಿದ್ದಾರೆ. ಇವರಿಗೆ ಈ ರೀತಿ ಸೂಚನೆ ನೀಡಲು ಇವರಿಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದ ಮಾಧುಸ್ವಾಮಿ ಅವರು, ಜೋರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.

ಸಿಇಒ ಅವರ ನೆರವಿಗೆ ಜಿಲ್ಲಾಧಿಕಾರಿ ರಾಕೇಶ್ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಧಾವಿಸಿದಾಗ, ಇತರ ಬಿಜೆಪಿ ಶಾಸಕರಾದ ಬಿ.ಸಿ.ನಾಗೇಶ್ ಹಾಗೂ ಮಸಾಲಾ ಜಯರಾಂ ಅವರು ತಮ್ಮ ಆಕ್ರೋಶ ಹೊರಹಾಕಿದರು.

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇಷ್ಟು ದಿನ ಚುನಾವಣೆ ಎಂದು ಕಾಲ ಕಳೆಯಿತು. ಈಗ ಎಲ್ಲವೂ ಮುಗಿದಿದೆ. ಈಗಲೂ ಕೆಲಸ ಮಾಡಲಿಕ್ಕೆ ಏನು ಸಮಸ್ಯೆ ಎಂದು ಶಾಸಕ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ನದಿ ನೀರು ಹಂಚಿಕೆಯಿಂದ ಕುಣಿಗಲ್‍ಗೆ ಅನ್ಯಾಯವಾಗುತ್ತಿದೆ. ನಮ್ಮದೇ ಸರ್ಕಾರ ಇದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಕುಣಿಗಲ್‍ನ ಶಾಸಕ ಡಾ.ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು. ಚೆಕ್‍ಡ್ಯಾಂ, ಕೃಷಿ ಹೊಂಡ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ, ಬರ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಶಾಸಕರು ಪಕ್ಷಭೇದ ಮರೆತು ಅಧಿಕಾರಿಗಳು ಮತ್ತು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಸಭೆಯಿಂದ ಹೊರಹೋಗಲು ಮುಂದಾದಾಗ ಅವರನ್ನೂ ಶಾಸಕರು ಅವರನ್ನೂ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಕೂರಲು ಸಾಧ್ಯವಾಗದಿದ್ದರೆ ನೆಪಮಾತ್ರಕ್ಕೆ ಬಂದು-ಹೋಗುವ ಅಗತ್ಯ ವೇನು ಎಂದು ಕಿಡಿಕಾರಿದರು.

ಸಚಿವ ಸ್ಥಾನ ಸಿಕ್ಕಿದೆ. ಜನಸೇವೆ ಮಾಡಲು ಒಳ್ಳೆಯ ಅವಕಾಶ. ಅದನ್ನು ಬಳಸಿಕೊಳ್ಳಿ. ಬೆಂಗಳೂರಿನಿಂದ ಪಾವಗಡ, ಪಾವಗಡದಿಂದ ಬೆಂಗಳೂರಿಗೆ ಓಡಾಡಿಕೊಂಡು ಕಾಲ ಕಳೆಯಬೇಡಿ ಎಂದು ಸಲಹೆ ನೀಡಿದರು. ಒಟ್ಟಿನಲ್ಲಿ ಇಂದಿನ ಸಭೆ ಅಧಿಕಾರದಲ್ಲಿರುವ ಉಪಮುಖ್ಯಮಂತ್ರಿ ಹಾಗೂ ಸಚಿವರು ಮತ್ತು ಅಧಿಕಾರಿಗಳ ಬೆವರಿಳಿಸಿತ್ತು.

ಕೃಷಿ ಹೊಂಡ ನಿರ್ಮಾಣದ ವೇಳೆ ಮಾನವ ಸಂಪನ್ಮೂಲ ಬಳಸದೆ ಜೆಸಿಬಿ ಯಂತಹ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಣ ಬಳಕೆ ಮಾಡಿ ಈ ರೀತಿ ಯಂತ್ರೋಪಕರಣಗಳಲ್ಲಿ ಕೆಲಸ ಮಾಡಿಸುವುದು ಅಪರಾಧ ಎಂದು ಮಾಧುಸ್ವಾಮಿ ಆರೋಪಿಸಿದಾಗ, ಅಧಿಕಾರಿಗಳು ಅದನ್ನು ನಿರಾಕರಿಸಿದರು.

ನನ್ನ ಬಳಿ ದಾಖಲೆ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ. ದಾಖಲೆ ಸಮೇತ ಸಾಬೀತು ಮಾಡಿದಾಗ ಅಮಾನತು ಶಿಕ್ಷೆ ಎದುರಿಸಲು ಸಿದ್ಧರಿದ್ದೀರಾ ಎಂದು ಮಾಧುಸ್ವಾಮಿ ಪ್ರಶ್ನಿಸಿದಾಗ ಅಧಿಕಾರಿಗಳು ನಿರುತ್ತರರಾದರು.

Facebook Comments