ನಾಳೆಯಿಂದ ‘ಕೆಂಪೇಗೌಡ’ನ ಅಬ್ಬರ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಬಹಳ ವರ್ಷಗಳ ನಂತರ ನಟ ಕೋಮಲ್ ದಕ್ಷ ಪೊಲೀಸ್ ಅಧಿಕಾರಿಯಾಗಿ ಕೆಂಪೇಗೌಡ-2 ಚಿತ್ರದ ಮೂಲಕ ಬೆಳ್ಳಿ ಪರದೆ ಮೇಲೆ ಬರುತ್ತಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್‍ಗೆ ದೊಡ್ಡ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಚಿತ್ರ ಕೆಂಪೇಗೌಡ. ಆ ನಂತರದ ದಿನಗಳಲ್ಲಿ ಸುದೀಪ್ ಅವರೇ ಕೆಂಪೇಗೌಡ-2 ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು.

ಆದರೆ ನಿರ್ಮಾಪಕ ಶಂಕರೇಗೌಡ ತಾವೇ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತು, ಸುದೀಪ್ ಜಾಗಕ್ಕೆ ಕೋಮಲ್‍ರನ್ನು ಕರೆತಂದರು. ಅಲ್ಲಿಗೆ ಕೋಮಲ್ ಕೆಂಪೇಗೌಡ ಆಗಲು ತನ್ನೆಲ್ಲ ಎಫರ್ಟ್ ಹಾಕತೊಡಗಿದರು. ಸತತವಾಗಿ ವರ್ಕೌಟ್ ಮಾಡಿ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಫಿಟ್ ಆದರು.

ಹಾಸ್ಯಕಲಾವಿದ ಬರೀ ಕಾಮಿಡಿ ಪಾತ್ರಗಳನ್ನೇ ಮಾಡಿಕೊಂಡು ಹೋಗಬೇಕೇ, ಆತನಲ್ಲೂ ಒಬ್ಬ ಉತ್ತಮ ಕಲಾವಿದ ಇರಬಹುದಲ್ಲವೇ ಎಂಬ ಮಾತಿಗೆ ಕನ್ನಡ ಚಿತ್ರಂಗದ ಹಲವಾರು ಹಿರಿಯ ಕಲಾವಿದರು ಕಣ್ಮುಂದೆ ಬರುತ್ತಾರೆ.

ಈ ಮಾತಿಗೆ ಜಗ್ಗೇಶ್ ಕೂಡ ಹೊರತಾಗಿಲ್ಲ. ಈಗ ಅವರ ಸಹೋದರ ಕೋಮಲ್‍ಕುಮಾರ್ ಸರದಿ. ತನ್ನಲ್ಲೂ ಒಬ್ಬ ಬಹುಮುಖ ಪ್ರತಿಭೆ ಇದ್ದಾನೆ ಎಂದು ಕನ್ನಡಿಗರು ಗುರುತಿಸಬೇಕೆಂದು ಕಳೆದ ಮೂರು ವರ್ಷಗಳಿಂದಲೂ ಎಫರ್ಟ್ ಹಾಕಿದ್ದಾರೆ. ಶಂಕರೇಗೌಡ ಅವರ ನಿರ್ದೇಶನದ ಕೆಂಪೇಗೌಡ-2 ಚಿತ್ರದಲ್ಲಿ ಒಬ್ಬ ಮಾಸ್ ಪೊಲೀಸ್ ಆಗಿ ಕೋಮಲ್ ಬಹಳ ದಿನಗಳ ನಂತರ ತೆರೆ ಮೇಲೆ ಬರ್ತಿದ್ದಾರೆ.

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಕೆಂಪೇಗೌಡ-2 ಈ ವರ್ಷದ ಬಿಗ್ ಬಜೆಟ್ ಚಿತ್ರಗಳಲ್ಲೊಂದು ಎನ್ನಬಹುದು. ಬೆಂಗಳೂರು, ಮೈಸೂರು, ಬೆಳಗಾವಿ, ಹೈದರಾಬಾದ್, ಕೇರಳ, ಕೊಚ್ಚಿನ್ ಸೇರಿ ಮೂರ್ನಾಲ್ಕು ರಾಜ್ಯಗಳಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಸಿಕ್ಕಿಂನ ಮಿಲಿಟರಿ ಕ್ಯಾಂಪ್‍ನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆದಿದೆ.

ರಷ್ಯಾದ ಅಜರ್ ಬೈಜಾನ್ ಹಾಗೂ ಕಾರವಾರದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಚಿತ್ರೀಕರಿಸಲಾಗಿದೆ. ತೆಲುಗು, ತಮಿಳು, ಹಿಂದಿ ಸೇರಿ ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡಾ.ಅಲಿ ಹಾಗೂ ಕ್ರಿಕೆಟಿಗ ಶ್ರೀಶಾಂತ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂಬೈ ಮೂಲದ ರಿಷಿಕಾ ಶರ್ಮಾ ಇಲ್ಲಿ ಕೋಮಲ್‍ಗೆ ನಾಯಕಿ. ಕನ್ನಡದಲ್ಲಿ ಅವರಿಗಿದು ಮೊದಲ ಚಿತ್ರ.

ಈ ಚಿತ್ರದಲ್ಲಿ ಕೋಮಲ್ ಒಬ್ಬ ಸರ್ಕಲ್ ಇನ್ಸ್‍ಪೆಕ್ಟರ್ ಪಾತ್ರ ಮಾಡಿದ್ದು, ಇಲ್ಲಿಯವರೆಗೂ ಯಾರೂ ಹೇಳಿರದಂಥ ಒಂದು ವಿಷಯವನ್ನು ಈ ಚಿತ್ರದಲ್ಲಿ ಹೇಳಿದ್ದಾರಂತೆ. ರಾಜ ತಿರುಗಿಬಿದ್ದರೆ ಸೈನಿಕ ಉಳಿಯಲು ಸಾಧ್ಯವಿಲ್ಲ, ಆದರೆ ಒಬ್ಬ ಒಳ್ಳೇ ಸೈನಿಕ ರಾಜನನ್ನು ಕೂಡ ತಿದ್ದಬಹುದು ಎಂಬ ಅಂಶವನ್ನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದು, ಈ ಚಿತ್ರಕ್ಕೆ ವರುಣ್ ಸಂಗೀತ ನೀಡಿದ್ದಾರೆ.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಚಿತ್ರದ ಇಂಟ್ರಡಕ್ಷನ್ ಫೈಟ್ ಹಾಗೂ ಕ್ಲೈಮ್ಯಾಕ್ಸ್ ಸೇರಿ ಎರಡು ಆ್ಯಕ್ಷನ್ ಕಂಪೋಜ್ ಮಾಡಿದ್ದು, ಅದೇ ರೀತಿ ಅನ್ಬು ಅವರ ಸಾಹಸ ದೃಶ್ಯ ಚಿತ್ರದಲ್ಲಿ ಪ್ರೇಕ್ಷಕರನ್ನು ಸೆಳೆಯಲಿದೆಯಂತೆ. ನಿರ್ಮಾಪಕರಾಗಿ ಬಂದ ವಿನೋದ್ ಈ ಚಿತ್ರಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡುಗಳು ಹಾಗೂ ಟ್ರೇಲರ್ ಭಾರೀ ಸದ್ದು ಮಾಡಿದ್ದು, ಬೆಳ್ಳಿ ಪರದೆ ಮೇಲೆ ಕೆಂಪೇಗೌಡನಾಗಿ ಕೋಮಲ್ ಅಬ್ಬರಿಸಲು ಸಜ್ಜಾಗಿದ್ದಾರೆ. ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿ ರಗಳಲ್ಲಿ ಕೆಂಪೇ ಗೌಡನ ಖದರ್ ಕಾಣ ಲಿದೆ.

Facebook Comments