ಕೇಂದ್ರೀಯ ವಿಹಾರ್ ಅಪಾರ್ಟ್‍ಮೆಂಟ್‍ನಲ್ಲಿ ಬಿರುಕು, ಆತಂಕದಲ್ಲಿ ನಿವಾಸಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25-ಸತತ ಮಳೆಯಿಂದ ಹರಿದ ನೀರಿನಿಂದ ಮುಳುಗಿ ಹೋಗಿದ್ದ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‍ಮೆಂಟ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಪಾರ್ಟ್‍ಮೆಂಟ್‍ಗೆ ನುಗ್ಗಿದ್ದ ನೀರು ಕಡಿಮೆಯಾಗುತ್ತಿದ್ದಂತೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ನಿವಾಸಿಗಳ ಅಂತಕಕ್ಕೆ ಕಾರಣವಾಗಿದೆ.

600 ಪ್ಲಾಟ್‍ಗಳನ್ನು ಹೊಂದಿರುವ ಕೇಂದ್ರೀಯ ವಿಹಾರ್ ಅಪಾರ್ಟ್‍ಮೆಂಟ್‍ನಲ್ಲಿ 2000ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು, ಇದೀಗ ಬಿರುಕು ಕಾಣಿಸಿಕೊಳ್ಳುತ್ತಿದ್ದಂತೆ ಕಂಗಲಾಗಿರುವ ನಿವಾಸಿಗಳು ಮನೆ ಖಾಲಿ ಮಾಡಲು ಮುಂದಾಗಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಅಪಾರ್ಟ್‍ಮೆಂಟ್‍ನಲ್ಲಿ ಆಳುದ್ದ ನೀರು ನಿಲ್ಲುತಿತ್ತು. ಸಮಸ್ಯೆ ಬಗೆಹರಿಸುವಂತೆ ಮಾಡಿಕೊಂಡ ಮನವಿಯನ್ನು ಯಾರು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.

ಆದರೆ, ಈ ಬಾರಿ ಬಿದ್ದ ಭಾರಿ ಮಳೆಯಿಂದ ಮೂರು ದಿನಗಳವರೆಗೆ ಅಪಾರ್ಟ್‍ಮೆಂಟ್‍ನಲ್ಲಿ ನೀರು ನಿಂತು ಸಾಕಷ್ಟು ಸಮಸ್ಯೆ ಎದುರಾಗಿತ್ತು.ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದ್ದರು.ಆದರೆ, ನೀರು ಖಾಲಿಯಾಗುತ್ತಿದ್ದಂತೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಅಲ್ಲಿನ ನಿವಾಸಿಗಳು ಭಯದಿಂದ ಜೀವನ ನಡೆಸುವಂತಾಗಿದೆ.

ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿದ ಸಂದರ್ಭದಲ್ಲಿ ಮನೆ ತೊರೆದಿದ್ದ ಕೆಲವರು ಇನ್ನು ತಮ್ಮ ಪ್ಲಾಟ್‍ಗಳಿಗೆ ವಾಪಸ್ಸಾಗಿಲ್ಲ. ಇನ್ನು ಕೆಲವರು ತಮ್ಮ ಪ್ಲಾಟ್‍ಗಳನ್ನು ಸೇಲ್ ಮಾಡಲು ಈಗಾಗಲೇ ಮಧ್ಯವರ್ತಿಗಳನ್ನು ಸಂಪರ್ಕಿಸಿದ್ದಾರೆ. ಅಪಾರ್ಟ್‍ಮೆಂಟ್‍ಗೆ ನೀರು ನುಗ್ಗಿದ್ದ ದಿನದಿಂದ ಇದುವರೆಗೂ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ. ಒಂದು ವಾರದಿಂದ ಕೇವಲ ಹಾಲು,ಬ್ರೆಡ್ ತಿನ್ನುತ್ತಾ ಕಾಲ ಕಳೆಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ ಅಲ್ಲಿನ ನಿವಾಸಿ ಡಾ.ಸುನೀಲ್.

ಕರೇಂಟ್ ಇಲ್ಲ. ಲಿಫ್ಟ್ ವರ್ಕ್ ಆಗ್ತಿಲ್ಲ. ಮತ್ತೆ ಮಳೆಯಾಗಿ ಕೆರೆ ಕೋಡಿ ಬಿದ್ದರೆ ನಮಗೆ ಜಲದಿಗ್ಬಂಧನದ ಜತೆಗೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಗ್ಯಾರಂಟಿ ಹೇಗೆ ಜೀವನ ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಅವರು.

ಈಗಾಗಲೇ ಅಪಾರ್ಟ್‍ಮೆಂಟ್‍ನಲ್ಲಿ ಬಾಡಿಗೆಗೆ ಇದ್ದವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಕೂಡಲೆ ನಮಗೆ ಶಾಶ್ವತ ಪರಿಹಾರ ಕಂಡು ಹಿಡಿದು ಸಮಸ್ಯೆ ಬಗೆಹರಿಸಬೇಕು. ಇಲದಿದ್ದರೆ ಎಲ್ಲಾ ನಿವಾಸಿಗಳು ಅನಿವಾರ್ಯವಾಗಿ ಮನೆ ಖಾಲಿ ಮಾಡಬೇಕಾಗುತ್ತದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇನ್ನು ಅಪಾರ್ಟ್‍ಮೆಂಟ್ ಬೆಸ್‍ಮೆಂಟ್‍ನ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ಕಾರುಗಳು ನಿಂತಲ್ಲೆ ನಿಂತಿರುವುದರಿಂದ ಬಹುತೇಕ ವಾಹನಗಳು ಕೆಟ್ಟು ಹೋಗಿವೆ.

Facebook Comments