ಟಿಕೆಟ್ ದರ 10ರಿಂದ 20 ಪಟ್ಟು ಏರಿಕೆ : ಕೆಜಿಎಫ್-2 ವಿರುದ್ಧ ಹಗಲು ದರೋಡೆ ಆರೋಪ
ಬೆಂಗಳೂರು,ಏ.17- ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿರುವ ಕನ್ನಡ ಕೆಜಿಎಫ್-2 ಚಿತ್ರ ಎಷ್ಟೆಲ್ಲ ದಾಖಲೆ ಬರೆದು ಜಗತ್ತಿನಾದ್ಯಂತ 10 ಸಾವಿರ ಚಿತ್ರಮಂದಿರಗಲ್ಲಿ ತೆರೆ ಕಾಣುತ್ತಿದ್ದರೂ ಟಿಕೆಟ್ ದರವನ್ನು 10ರಿಂದ 20 ಪಟ್ಟು ಏರಿಕೆ ಮಾಡುವ ಮೂಲಕ ಚಿತ್ರತಂಡ ಹಗಲು ದರೋಡೆ ಮಾಡುತ್ತಿದೆ ಎಂದು ಸರ್ವಜ್ಞ ಮಿತ್ರವೃಂದ ಆರೋಪಿಸಿದೆ.
ಕನ್ನಡ ಚಲನಚಿತ್ರಗಳಿಗೆ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಪ್ರವೇಶ ಶುಲ್ಕ 80 ರೂ. ಇದ್ದರೂ ಈ ಚಿತ್ರಕ್ಕೆ 250 ರೂ. ಟಿಕೆಟ್ ನೀಡಲಾಗುತ್ತಿದೆ. ಇದನ್ನು ಪ್ರತಿಭಟಿಸಿದರೆ ನಿರ್ಮಾಪಕರನ್ನು ಕೇಳಿ ಎಂಬ ಉತ್ತರ ಸಿಗುತ್ತದೆ.
ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರಬೇಕಾದ ಚಿತ್ರಗಳು ದುಬಾರಿ ದರದಿಂದ ದೂರ ಉಳಿಯುವಂತಾಗಬಾರದು. ಇಂತಹ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೆಜಿಎಫ್-2 ಚಿತ್ರತಂಡದೊಂದಿಗೆ ಶಾಮೀಲಾಗಿದೆಯೋ ಎಂಬ ಅನುಮಾನ ಉಂಟಾಗುತ್ತಿದೆ.
ಕನ್ನಡ ಚಿತ್ರ ಪ್ರೇಮಿಗಳು ಚಿತ್ರ ನೋಡಲು ಅನುಕೂಲವಾಗುವಂತೆ ಟಿಕೆಟ್ ದರ ಇಳಿಸದೆ ಹೋದಲ್ಲಿ ಸರ್ವಜ್ಞ ಮಿತ್ರವೃಂದ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ವೃಂದದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎಚ್ಚರಿಸಿದ್ದಾರೆ.