ಕೊನೆಗೂ ಸ್ಟಾರ್ ಪ್ರಚಾರಕರ ಪಟ್ಟಿ ಸೇರಿಕೊಂಡ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ಬರೆದ ಪತ್ರ ಪ್ರಭಾವ ಬೀರಿದ್ದು, ನಾಲ್ಕು ಮಂದಿ ರಾಜ್ಯಸಭಾ ಸದಸ್ಯರನ್ನು ಕೊನೆಗೂ ಪ್ರಚಾರ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.

ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೇ ಹೆಚ್ಚು ಪ್ರಚಾರ ನಡೆಸುತ್ತಿದ್ದು, ಉಳಿದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಸಿಟ್ಟಾಗಿದ್ದ ಮುನಿಯಪ್ಪ ಅವರು ನೇರವಾಗಿ ಹೈಕಮಾಂಡ್‍ಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಲ್ಲದೆ, 12 ಮಂದಿ ಪ್ರಭಾವಿ ನಾಯಕರನ್ನು ಪ್ರಚಾರ ಸಮಿತಿಗೆ ಸೇರಿಸಿಕೊಳ್ಳುವಂತೆ ಹೆಸರು ಸೂಚಿಸಿದ್ದರು. ಅವರಲ್ಲಿ ಮಾಜಿ ಸಚಿವರು, ಮಾಜಿ ಸಂಸದರುಗಳ ಹೆಸರಿದ್ದವು. ಮುನಿಯಪ್ಪ ಅವರು ಬರೆದ ಪತ್ರ ಪರಿಣಾಮ ಬೀರಿದ್ದು, ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ ಅವರಿಗೆ ಅಥಣಿ, ಕಾಗವಾಡ, ಗೋಕಾಕ್. ರಾಜೀವ್‍ಗೌಡ ಅವರಿಗೆ ಹೊಸಕೋಟೆ, ಶಿವಾಜಿನಗರ ಹಾಗೂ ಚಿಕ್ಕಬಳ್ಳಾಪುರ.

ಜಿ.ಸಿ.ಚಂದ್ರಶೇಖರ್ ಅವರಿಗೆ ಮಹಾಲಕ್ಷ್ಮಿಲೇಔಟ್, ಯಶವಂತಪುರ, ಕೆ.ಆರ್.ಪುರ. ಸಯ್ಯದ್ ನಾಸೀರ್ ಹುಸೇನ್ ಅವರಿಗೆ ವಿಜಯನಗರ, ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿದ್ದು, ನಿಯೋಜಿತ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಲಾಗಿದೆ.

ಮುನಿಯಪ್ಪ ಅವರು ಸೂಚಿಸಿದ ಹೆಸರುಗಳಲ್ಲಿ ಬಿ.ಕೆ.ಹರಿಪ್ರಸಾದ್, ಡಿ.ಕೆ.ಸುರೇಶ್ ಅವರುಗಳನ್ನು ಇನ್ನೂ ಪ್ರಚಾರ ಸಮಿತಿಗೆ ಸೇರಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

Facebook Comments