ಕಾಂಗ್ರೆಸ್‍ನಲ್ಲಿ ಸಿದ್ದುಗೆ ಸಾಕಷ್ಟು ಅವಕಾಶ ಸಿಕ್ಕಿದೆ, ನಾನೂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಕೆ.ಎಚ್.ಮುನಿಯಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಬಂದು 14 ವರ್ಷಗಳಾಗಿವೆ. ಅಂದಿನಿಂದಲೂ ಇಂದಿನವರೆಗೂ ಅವರಿಗೆ ನಿರಂತರವಾಗಿ ಅಧಿಕಾರಗಳು ಸಿಕ್ಕಿವೆ. ಅವರಿಗಿಂತ ಹಿರಿಯರಾದ ಮತ್ತು 40 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲೇ ಇರುವ ಬಹಳಷ್ಟು ಮಂದಿಗೆ ಸಿದ್ದರಾಮಯ್ಯ ಅವರಿಗೆ ಸಿಕ್ಕಷ್ಟು ಅವಕಾಶಗಳು ಸಿಕ್ಕಿಲ್ಲ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಪಟ್ಟಂತೆ ರಾಜ್ಯಕ್ಕೆ ವೀಕ್ಷಕರ ತಂಡ ಕಳುಹಿಸಿತ್ತು. ಆ ತಂಡದ ಮುಂದೆ ರಾಜ್ಯದ ಹಿರಿಯ ನಾಯಕರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಬಹಳಷ್ಟು ಮಂದಿ ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ವೀಕ್ಷಕರ ವರದಿ ಆಧಾರದ ಮೇಲೆ ಅಧ್ಯಕ್ಷರ ನೇಮಕಾತಿ ನಡೆಯಲಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ನಿನ್ನೆಯವರೆಗೂ ಬಿಡುವಿರಲಿಲ್ಲ. ಇಂದು ಬಹುತೇಕ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎಂದರು.
ನಮ್ಮ ಮೂಲ ಉದ್ದೇಶ ಸಂಘಟನೆ ಬಲಪಡಿಸುವುದಾಗಬೇಕು. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ನೇಮಿಸಲು ಸಹಮತ ವ್ಯಕ್ತಪಡಿಸಿದ ಕೆ.ಎಚ್.ಮುನಿಯಪ್ಪ ಅವರು, ಕಾರ್ಯಾಧ್ಯಕ್ಷರು ಈ ಹಿಂದೆಯೂ ಇದ್ದರು. ಈಗಲೂ ಈಶ್ವರ್‍ಖಂಡ್ರೆ ಕಾರ್ಯಾಧ್ಯಕ್ಷರಾಗಿದ್ದಾರೆ. ಎಷ್ಟೇ ಮಂದಿ ಕಾರ್ಯಾಧ್ಯಕ್ಷರಿದ್ದರೂ ಅಧ್ಯಕ್ಷ ಸ್ಥಾನ ಬಹಳ ಮುಖ್ಯವಾಗುತ್ತದೆ. ಕಾರ್ಯಾಧ್ಯಕ್ಷರ ನೇಮಕಾತಿಯಿಂದ ಅಧ್ಯಕ್ಷರ ಮೇಲಿನ ಕಾರ್ಯದೊತ್ತಡ ಕಡಿಮೆಯಾಗಬಹುದು. ಇದರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದರು.

ಶಾಸಕಾಂಗ ಮತ್ತು ವಿರೋಧ ಪಕ್ಷದ ನಾಯಕ ನ ಸ್ಥಾನ ಎರಡನ್ನೂ ಪ್ರತ್ಯೇಕ ಗೊಳಿಸುವುದು ಸೂಕ್ತ ನಿರ್ಧಾರ. ಮಹಾರಾಷ್ಟ್ರದಲ್ಲಿ ಈ ರೀತಿಯ ಪ್ರಯತ್ನ ನಡೆದಿದೆ. ಪಕ್ಷದಲ್ಲಿ ಹಲವು ಮಂದಿ ಹಿರಿಯ ನಾಯಕರಿದ್ದಾರೆ. ಅಧಿಕಾರ ಹಂಚಿಕೆಯಾಗಬೇಕು. ಆಗ ಮಾತ್ರ ಪಕ್ಷ ಕಟ್ಟಲು ಸಾಧ್ಯ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಬಳಿ ಇದನ್ನೇ ನಾನು ಹೇಳಿದ್ದೇನೆ ಎಂದರು.

ಕೆಪಿಸಿಸಿಗೆ ಸಮನ್ವಯ ಸಮಿತಿ ರಚಿಸುವುದು ಮೊದಲಿನಿಂದಲೂ ಚರ್ಚೆಯಾಗುತ್ತಿದೆ. ಸಮನ್ವಯ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಚರ್ಚೆ ಮಾಡಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಸಾಕಷ್ಟು ಉತ್ತಮ ಅವಕಾಶಗಳನ್ನು ಕೊಟ್ಟಿದೆ. ಅವರು ಪಕ್ಷಕ್ಕೆ ಬಂದು 14 ವರ್ಷಗಳಾಗಿವೆ.

ಅವರಿಗೆ ಎಲ್ಲಾ ರೀತಿಯ ಜವಾಬ್ದಾರಿಗಳೂ ಈವರೆಗೆ ಸಿಕ್ಕಿವೆ. ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಹರಿಪ್ರಸಾದ್, ನಾನೂ ಸೇರಿದಂತೆ ಹಲವು ನಾಯಕರು 40 ವರ್ಷಗಳಿಂದಲೂ ಪಕ್ಷದಲ್ಲಿದ್ದೇವೆ. ನಮಗಿಂತಲೂ ಉತ್ತಮ ಅವಕಾಶಗಳು ಅವರಿಗೆ ಸಿಕ್ಕಿವೆ. ಪಕ್ಷಕ್ಕೆ ಬಂದ ಮೇಲೆ ಅವರು ಕಾಂಗ್ರೆಸ್ಸಿಗರು. ಹಳಬರು, ಹೊಸಬರು ಎಂಬ ತಾರತಮ್ಯ ಇರಬಾರದು. ಬಹಳಷ್ಟು ಮಂದಿ ಅಧಿಕಾರ ಇಲ್ಲದೆ ಇದ್ದರೂ ಪಕ್ಷ ಬಿಟ್ಟು ಹೋಗಿಲ್ಲ ಎಂದರು. ಸಿದ್ದರಾಮಯ್ಯ ನಡವಳಿಕೆಯನ್ನು ಅಹಂ ಎಂದು ನಾನು ಹೇಳುವುದಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದಷ್ಟೇ ನಾನು ಹೇಳುತ್ತೇನೆ ಎಂದರು.

Facebook Comments